ಮಹಿಳೆಯಿಂದ ಆನ್‌ಲೈನ್ ವಂಚನೆ : ದೂರು ದಾಖಲು
ಮಂಗಳೂರು, ನ.27: ಅಪರಿಚಿತ ಮಹಿಳೆಯೊಬ್ಬರು ಆನ್‌ಲೈನ್ ಮೂಲಕ ಹೂಡಿಕೆಯ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ವಂಚಿಸಿರುವ ಘಟನೆ ವರದಿಯಾಗಿದೆ.
ಆನ್‌ಲೈನ್‌ನಲ್ಲಿ ಆಗಿರುವ ಈ ವಂಚನೆಯ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರ ಫೇಸ್‌ಬುಕ್ ಅಕೌಂಟ್‌ಗೆ ಜುಲೈ ತಿಂಗಳಿನಲ್ಲಿ ಅದಿತಿ ಕಪೂರ್ ಎಂಬ ಹೆಸರಿನ ಮಹಿಳೆಯೊಬ್ಬರು ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದರು. ದೂರುದಾರರು ಅದಕ್ಕೆ ಸ್ವೀಕೃತಿ ನೀಡಿ ಮೆಸೆಂಜರ್ ಮೂಲಕ ಆಕೆಯೊಂದಿಗೆ ಸಂಪರ್ಕದಲ್ಲಿದ್ದರು.
ಕೆಲವು ಸಮಯದ ಅನಂತರ ಮಹಿಳೆ ದೂರುದಾರರಿಗೆ ಹೂಡಿಕೆಯ ಪ್ಲಾನ್ ಇದೆ. ಅದರಲ್ಲಿ ನಾನು ಕೂಡ ಹೂಡಿಕೆ ಮಾಡಿದ್ದೇನೆ. ಒಳ್ಳೆ ಯ ರಿಟರ್ನ್ಸ್ ಬರುತ್ತದೆ. ಹೂಡಿಕೆ ಮಾಡಿದ ಹಣವನ್ನು ಕೆಲವೇ ದಿನಗಳಲ್ಲಿ ಮೂರು ಪಟ್ಟು ಹೆಚ್ಚು ಮಾಡಿಸಿಕೊಡುತ್ತೇನೆ ಎಂದು ನಂಬಿಸಿದ್ದಳು ಎನ್ನಳಾಗಿದೆ. ಅನಂತರ ಲಿಂಕ್ ಕಳುಹಿಸಿ ರಿಜಿಸ್ಟ್ರೇಷನ್ ಮಾಡಲು ತಿಳಿಸಿದಳು ಎನ್ನಲಾಗಿದೆ.
ಅದರಂತೆ ದೂರುದಾರರು ರಿಜಿಸ್ಟ್ರೇಷನ್ ಮಾಡಿಸಿದ್ದರು. ಬಳಿಕ ಅದಕ್ಕೆ ಹಣ ವರ್ಗಾವಣೆ ಮಾಡುವಂತೆ ಮಹಿಳೆ ತಿಳಿಸಿದ್ದು ಅದರಂತೆ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 56,64,000 ರೂ.ಗಳನ್ನು ವರ್ಗಾವಣೆ ಮಾಡಿ ದ್ದಾರೆ. ಕೆಲವು ಸಮಯದ ಅನಂತರ ಹೂಡಿಕೆ ಮಾಡಿದ ಹಣವನ್ನು ವಾಪಸ್ ಪಡೆಯಲು ಮುಂದಾದಾಗ ಸಾಧ್ಯವಾಗಲಿಲ್ಲ. ಆಗ ದೂರುದಾರರಿಗೆ ತಾನು ಮಹಿಳೆಯಿಂದ ವಂಚನೆಗೊಳಗಾದ ವಿಚಾರ ಗೊತ್ತಾಗಿದೆ. ಇದೀಗ ವಂಚನೆಗೊಳಗಾದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.