ಎಫ್‌ಐಆರ್‌ಗೆ ಹೆದರುವ ಪ್ರಶ್ನೆ ಇಲ್ಲ, ಜನರ ಪರ ಹೋರಾಟಗಳು ಮುಂದುವರಿಯುತ್ತದೆ: ಮುನೀರ್‌ ಕಾಟಿಪಳ್ಳ

Update: 2024-11-27 15:53 GMT

ಸುರತ್ಕಲ್‌ : ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ ಹಾಗೂ ಶೀಘ್ರ ಹೆದ್ದಾರಿ ಪೂರ್ಣ ಪ್ರಮಾಣದದಲ್ಲಿ ದುರಸ್ತಿಗೊಳಿಸಿ ಡಾಮರೀಕರಣ ಮಾಡಬೇಕೆಂದು ಆಗ್ರಹಿಸಿ ನಡೆಸಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಹೊರಾಟಗಾರರ ಮೇಲೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ಹೋರಾಟ ಸಮಿತಿಯ ಸಂಚಾಲಕ ಮುನೀರ್‌ ಕಾಟಿಪಳ್ಳ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, "ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಅವರು ಮಂಗಳೂರು- ಸುರತ್ಕಲ್ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಶಾಂತಿಯುತ ಧರಣಿ ನಡೆಸಿದ್ದು ಅಪರಾಧ ಎಂದು ಹೇಳಿ ಮೊಕದ್ದಮೆ ಹೂಡಿದ್ದಾರೆ. ಕಾವೂರು ಪೊಲೀಸ್ ಠಾಣೆಯಲ್ಲಿ "ಮುನೀರ್ ಕಾಟಿಪಳ್ಳ" ಎಂದು ಒಂದು ಹೆಸರನ್ನು ಮಾತ್ರ ಉಲ್ಲೇಖಿಸಿ ಸ್ವಯಂಪ್ರೇರಿತ ಎಫ್‌ಐಆರ್‌ ಹಾಕಿದ್ದಾರೆ. ಇದರ ಉದ್ದೇಶ ಸ್ಪಷ್ಟ, ಮುನೀರ್ ಕಾಟಿಪಳ್ಳ ಈಗ ಮಂಗಳೂರು ಕಮಿಷನರ್ ಅವರಿಗೆ ಟಾರ್ಗೆಟ್, ಆ ಮೂಲಕ ಮಂಗಳೂರಿನ ಜನಪರ ಚಳವಳಿಗಳನ್ನು ಬೆದರಿಸುವ, ಬಾಯಿ ಮುಚ್ಚಿಸುವ ಯತ್ನ ನಡೆಸುತ್ತಿದ್ದಾರೆ‌. ಇದು ಬಿಜೆಪಿ ಶಾಸಕರುಗಳ ನಿರ್ದೇಶನದಂತೆ ನಡೆಯುತ್ತಿದೆ ಎಂಬುದರಲ್ಲಿ ಅನುಮಾನ ಇಲ್ಲ" ಎಂದು ಕಮಿಷನರ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಮಂಗಳೂರು ಪೊಲೀಸ್ ಕಮೀಷನರ್ ಹೆದ್ದಾರಿ ಸಮಸ್ಯೆಗಳ ಕುರಿತು ಸಾಮೂಹಿಕ ಧರಣಿಯಲ್ಲಿ ಧ್ಚನಿವರ್ಧಕ ಬಳಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದರು. ಈ ರೀತಿ ತಿರಸ್ಕರಿಸಲು ಪೊಲೀಸರಿಗೆ ಯಾವುದೇ ಅಧಿಕಾರ ಇಲ್ಲ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಪ್ರತಿಭಟನೆ ನಡೆಸುವುದು ನಾಗರಿಕರ ಸಂವಿಧಾನ ಬದ್ಧ ಹಕ್ಕು. ಅದನ್ನು ನಿರಾಕರಿಸುವುದು ಅಪರಾಧವೇ ಹೊರತು, ಧರಣಿ ನಡೆಸುವುದಲ್ಲ‌. ವಿನಾ ಕಾರಣ ಅನುಮತಿ ನಿರಾಕರಿಸುವ ಮೂಲಕ ಕಮೀಷನರ್ ತಪ್ಪೆಸಗಿದ್ದಾರೆ.

ಅನುಮತಿ ನಿರಾಕರಿಸಿದ ಕಾರಣ ನಾವು ಧ್ವನಿ ವರ್ಧಕ ಬಳಸಲಿಲ್ಲ, ಶಾಮಿಯಾನ ಹಾಕಲಿಲ್ಲ. ಪೊಲೀಸರಿಗೆ ತಿಳಿಸಿಯೇ ಹೆದ್ದಾರಿ ಬದಿಯ ವಿಶಾಲವಾದ ಖಾಲಿ ಜಾಗದಲ್ಲಿ ಉರಿ ಬಿಸಿಲಿನಲ್ಲಿ ಕೂತು ಧರಣಿ ನಡೆಸಿದ್ದೇವೆ. ಅದು ಹೇಗೆ ಅಪರಾಧ ಆಗುತ್ತದೆ ? ಸ್ಥಳದಲ್ಲಿ ನಿಷೇಧಾಜ್ಞೆ ಇರಲಿಲ್ಲ, ಪ್ರತಿಭಟನೆಗಳಿಗೆ ನಿಷೇಧಿಸಲ್ಪಟ್ಟ ಸ್ಥಳಗಳ ಪಟ್ಟಿಯಲ್ಲೂ ಧರಣಿ ನಡೆಸಿದ ಪ್ರದೇಶ ಇರಲಿಲ್ಲ. ಧರಣಿಯಿಂದ ತೊಂದರೆ ಆಗಿದೆ ಎಂದು ಯಾರೂ ಪೊಲೀಸರಲ್ಲಿ ದೂರು ನೀಡಿಲ್ಲ. ಹಾಗಿರುತ್ತಾ ಎಫ್‌ಐಆರ್‌ ಹಾಕಿರುವುವುದು ಹೇಗೆ ? ನಮ್ಮ ಘೋಷಣೆ, ಬೇಡಿಕೆಗಳನ್ನು ಪೊಲೀಸರು ಎಫ್‌ಐಆರ್ ಹಾಳೆಯಲ್ಲಿ ಹಾಕಿದ್ದಾರೆ. ಅದರಲ್ಲಿ ಅಪರಾಧದ ಅಂಶಗಳು ಯಾವುದಿದೆ ? ಎಂದು ಅವರು ಪ್ರಶ್ನಿಸಿದ್ದಾರೆ.

ಜನ ಸಾಮಾನ್ಯರ ಬದುಕಿನ ಪ್ರಶ್ನೆಗಳ ಮೇಲೆ ಹೋರಾಟ, ಪ್ರತಿಭಟನೆಗಳು ನಡೆಯಲು ಅವಕಾಶ ಕೊಡುವುದಿಲ್ಲ, ಬಿಜೆಪಿ ಶಾಸಕ, ಸಂಸದರ ವಿರುದ್ಧ ಧ್ವನಿ ಎತ್ತಲು ಅವಕಾಶ ಕೊಡುವುದಿಲ್ಲ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ ವಾಲ್ ನಿರ್ಧರಿಸಿದಂತಿದೆ. ಅದಕ್ಕಾಗಿ ಹೋರಾಟ ಸಮಿತಿಯ ಸಂಚಾಲಕನಾದ ನನ್ನೊಬ್ಬನನ್ನು (ಮುನೀರ್ ಕಾಟಿಪಳ್ಳ) ಆರೋಪಿಯಾಗಿಸಿ ಎಫ್‌ ಐ ಆರ್‌ ಹಾಕಿದ್ದಾರೆ. ಎಫ್‌ಐಆರ್‌ ಗಳಿಗೆ ಹೆದರುವ ಪ್ರಶ್ನೆ ಇಲ್ಲ. ಜನರ ಪರವಾದ ಹೋರಾಟ ಗಳು ಮುಂದುವರಿಯುತ್ತದೆ. ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕಾಗಿಯೂ ಹೋರಾಟ ಮುಂದುವರಿಯಲಿದೆ. ಹರಿಯುವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಡ ಎಂದು ಪೊಲೀಸ್‌ ಆಯುಕ್ತರ ಕ್ರಮವನ್ನು ಖಂಡಿಸಿದ್ದಾರೆ.

ಮಂಗಳೂರಿನ ಜನರ ಚಳವಳಿಗಳ ಇತಿಹಾಸ ಗೊತ್ತಿಲ್ಲದವರು, ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳ ಕುರಿತು ಕುರುಡಾಗಿ ರುವವರು ಮಾತ್ರ ಈತರ ನಡೆದುಕೊಳ್ಳಲು ಸಾಧ್ಯ‌. ಅಗರ್ ವಾಲ್ ಅವರಿಗೆ ಕಾನೂನು, ಸಂವಿಧಾನದ ಕುರಿತು ಅರಿವಿನ ಕೊರತೆ ಇದೆ. ಅಥವಾ ನಾನು ಅದನ್ನು ಮೀರಿದವನು ಎಂಬ ಅಹಂ ಇದೆ. ಪೊಲೀಸ್ ಕಮಿಷನರ್ ಅವರ ಈ ಅತಿರೇಕದ ನಡವಳಿಕೆಯ ವಿರುಧ್ಧವೂ ಹೋರಾಟ ನಡೆಯಲಿದೆ‌. ತಡೆಯುವುದಾದರೆ ತಡೆಯಲಿ. ಸರಕಾರ ಇಂತಹ ಜನವಿರೋಧಿ ಅಧಿಕಾರಿಯನ್ನು ತಕ್ಷಣ ವರ್ಗಾಯಿಸಬೇಕು‌ ಎಂದು ಸರಕಾರವನ್ನು ಒತ್ತಾಯಿಸಿರುವ ಅವರು, ಕಮಿಷನರ್ ಅಗರವಾಲ್ ಅವರೇ, ಹದಿನೈದು ದಿನದಲ್ಲಿ ಎರಡು ಎಫ್‌ಐಆರ್‌ ಹಾಕಿದ್ದೀರಿ. ಯಾವಾಗ ಬಂಧಿಸುತ್ತೀರಿ ಹೇಳಿ, ನಿಮ್ಮ ಮುಂದೆ ಹಾಜರಾಗುತ್ತೇವೆ ಎಂದು ಪೊಲೀಸ್‌ ಆಯುಕ್ತರಿಗೆ ಸವಾಲು ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News