ಕುಳಾಯಿ ಜಟ್ಟಿ ನಿರ್ಮಾಣಕ್ಕೆ ತಡೆ: ಪರಿಶೀಲನೆಗೆ ಸಚಿವ ಮಂಕಾಳ ವೈದ್ಯ ಸೂಚನೆ

Update: 2024-11-27 15:59 GMT

ಸುರತ್ಕಲ್:‌ ಇಲ್ಲಿಗೆ ಸಮೀಪದ ಕುಳಾಯಿ ಬಳಿ ನಿರ್ಮಾಣವಾಗುತ್ತಿರುವ ಕಿರು ಜೆಟ್ಟಿ ಕಾಮಗಾರಿಯ ಸ್ಥಳಕ್ಕೆ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಅವರು ಬುಧವಾರ ಭೇಟಿ ನೀಡಿ ಕರಾವಳಿಯ ಶಾಸಕರು ಹಾಗೂ ಮೀನುಗಾರರೊಂದಿಗೆ ಚರ್ಚಿಸಿದರು.

ಶಾಸಕ ಭರತ್‌ ಶೆಟ್ಟಿ ಮತ್ತು ಗ್ರಾಮಸ್ಥರು ಜಟ್ಟಿಯ ಅವೈಜ್ಞಾನಿಕ ಕಾಮಗಾರಿ ಮತ್ತು ಜಟ್ಟಿಯನ್ನು ಸದ್ಯ ನಿರ್ಮಿಸಲಾಗಿರುವ ಉತ್ತರದ ಬ್ರೇಕ್ ವಾಟರ್‌ನ ಉದ್ದವನ್ನು 831ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್‌ಗೆ ನಿಗದಿಪಡಿಸ ಬೇಕು. ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್‌ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981 ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು. ಜಟ್ಟಿಯಲ್ಲಿ ನಾಡ ದೋಣಿಗಳ ನಿಲುಗಡಗೆ ಸೂಕ್ತ ಸ್ಥಳಾವಕಾಶದ ವ್ಯವಸ್ಥೆ ನೀಡಿಲ್ಲ. ಅವೈಜ್ಞಾನಿಕ ರೀತಿಯಲ್ಲಿ ಜಟ್ಟಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ದೂರಿದ್ದರು.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಿದ್ದ ಸಚಿವ ಮಾಂಕಾಳ ವೈದ್ಯ ಅವರು ಕಾಮಗಾರಿ ಸ್ಥಗಿತ ಗೊಳಿಸಿ ಮೀನುಗಾರರನ್ನು ವಿಶ್ವಾಸಕ್ಕೆ ಪಡೆದುಕೊಂಡು ಚರ್ಚಿಸಿ ಕಾಮಗಾರಿ ಮುಂದುವರಿಸಲು ಸೂಚಿಸಿದ್ದರು. ಆದರೆ, ಯಾವುದೇ ಸಭೆಗಳನ್ನು ಮಾಡದೆ, ಎನ್‌ ಪಿಎ ಅಧಿಧಿರಿಗಳು ಮತ್ತೆ ಜೆಟ್ಟಿಯ ಕಾಮಗಾರಿ ಆರಂಭಿಸಿದ್ದರು. ಇದನ್ನು ಖಂಡಿಸಿ ಮೀನುಗಾರರು ಜಟ್ಟಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಬುಧವಾರ ನೂತನ ಕುಳಾಯಿಯ ಪ್ರದೇಶಕ್ಕೆ ಭೇಟಿ ನೀಡಿ ಮೀನುಗಾರರ ಜೊತೆ ಚರ್ಚಿಸಿದರು. ಈ ವೇಳೆ ಎನ್‌ಎಂಪಿ ಅಧಿಕಾರಿಗಳು, ಇಂಜಿನಿಯರ್‌ಗಳು ರೂಪಿಸಿರುವ ಯೋಜನೆಯಂತೆಯೇ ಕಾಮಗಾರಿ ನಡೆಸಲಗುತ್ತಿದೆ ಎಂದು ಸಮಜಾಯಿಶಿ ನೀಡಿದರು. ಇದಕ್ಕೆ ಮೀನುಗಾರರು ವಿರೋಧ ವ್ಯಕ್ತ ಪಡಿಸಿದರು. ಮೀನುಗಾರರನ್ನು ಸಮಾಧಾನ ಪಡಿಸಿ ಮಾತನಾಡಿದ ಸಚಿವರು, ಯೋಜನೆಯ ರೂಪು ರೇಷೆ ತಯಾರಿಸಿರುವ ಎನ್‌ಐಟಿ ಚೆನ್ನೈ ಇಂಜಿನಿಯರ್‌ ಗಳು ಸ್ತಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕವಷ್ಟೇ ಕಾಮಗಾರಿ ಮುಂದುವರಿಸಬೇಕೆಂದು ಕಾಮಗಾರಿಯ ಮೇಲುಸ್ತು ವಾರಿ ವಹಿಸಿರುವ ಎನ್‌ಎಂಪಿಎ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭ ಶಾಸಕ ಭರತ್‌ ಶೆಟ್ಟಿ, ಉಡುಪಿಯ ಶಾಸಕ ಯಶ್ಪಾಲ್‌ ಸುವರ್ಣ, ಎನ್‌ ಎಂ ಪಿಎ ಅಧಿಕಾರಿಗಳು, ಮೀನುಗಾರ ಮುಖಂಡರು ಹಾಗೂ ನಾಡದೋಣಿ ಮೀನುಗಾರರು ಇದ್ದರು.

ಕಾಂಗ್ರೆಸ್‌ ಮುಖಂಡರ ಕಡೆಗಣನೆ

ಕುಳಾಯಿ ಬಳಿ ನಿರ್ಮಾಣವಾಗುತ್ತಿರುವ ಅವೈಜ್ಞಾನಿಕ ಕಿರು ಜಟ್ಟಿ ಕಾಮಗಾರಿಯ ಸ್ಥಳಕ್ಕೆ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಬುಧವಾರ ಭೇಟಿ ನೀಡಿದ್ದು, ಕಾಂಗ್ರೆಸ್‌ ಮುಖಂಡರಿಗೆ ಯಾವುದೇ ಮಾಹಿತಿ ಇಲ್ಲ ಎಂದು ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ ಹೇಳಿದ್ದಾರೆ.

ಕಳೆದ ಬಾರಿಯೂ ಸಚಿವರು ಸುರತ್ಕಲ್‌ನ ಕುಳಾಯಿ ಜೆಟ್ಟಿಗೆ ಭೇಟಿ ನೀಡಿದ್ದರು. ಆಗಲೂ ಅವರಿಗೆ ಸಂಬಂಧ ಪಟ್ಟ ಇಲಾಖೆಯಾಗಲೀ, ಅವರ ಆಪ್ತ ಕಾರ್ಯದರ್ಶಿಯಾಗಲಿ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಬಾರಿ ಭೇಟಿ ನೀಡು ವಾಗಲೂ ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌, ವಿರೋಧ ಪಕ್ಷದ ನಾಯಕ, ಜಿಲ್ಲಾ ಕಾಂಗ್ರೆಸ್‌ ಗೂ ಮಾಹಿತಿ ನೀಡಲಾಗಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ಸಚಿವರು ಬಿಜೆಪಿಯ ಶಾಸಕರ ಜೊತೆ ಬರುತ್ತಾರೆ. ಅವರಷ್ಟಕ್ಕೇ ಸಭೆಗಳನ್ನು ಮಾಡುತ್ತಾರೆ. ಅವರೊಂದಿಗೇ ಹಿಂದಿರುಗು ತ್ತಾರೆ. ಸಚಿವರು ಕಾಂಗ್ರೆಸ್‌ ಪಕ್ಷದ ಶಾಸಕರಾ ಅಥವಾ ಬಿಜೆಪಿಯ ಶಾಸಕರಾ ಎಂದು ಶಂಕೆ ಎದುರಾಗಿದೆ. ತಳ ಮಟ್ಟದ ಕಾರ್ಯಕರ್ತರು ಪಕ್ಷ ಸಂಘಟನೆಗೆ ಮುಂದಾಗಬೇಕೆಂದು ಕರೆ ನೀಡುವ ಉನ್ನತ ಮುಖಂಡರು ಈ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ. ಈ ಬಗ್ಗೆ ಜಿಲ್ಲಾ ಕಾಂಗ್ರೆಸ್‌, ಕೆಪಿಸಿಸಿ, ಉಸ್ತುವಾರಿ ಸಚಿವರು, ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು. ಓರ್ವ ಜವಾಬ್ದಾರಿಯುತ ಸಚಿವ ಪಕ್ಷದ ಸ್ಥಳೀಯ ಮುಂಖಡರಿಗೆ ಮಾಹಿತಿ ನೀಡದೆ ಬಿಜೆಪಿಗರೊಂದಿಗೆ ಭೇಟಿ ನೀಡಿ ಹಿಂದಿರುಗುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಪುರುಷೋತ್ತಮ ಚಿತ್ರಾಪುರ ಅವರು, ಇಂತವರಿಂದ ಪಕ್ಷ ಸಂಘಟನೆ ಸಾಧ್ಯವೇ ಎಂದು ಪಕ್ಷದ ಪ್ರಮುಖರಿಗೆ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News