ಅಡಿಕೆ ಕ್ಯಾನ್ಸರ್ ಕಾರಕ| ವರದಿ ನೀಡಿದ ಡಬ್ಲ್ಯುಎಚ್‌ಒ ಕೇಂದ್ರದ ಮಧ್ಯಪ್ರವೇಶಕ್ಕೆ ಕ್ಯಾಂಪ್ಕೋ ಆಗ್ರಹ
ಮಂಗಳೂರು: ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತು ಪಡಿಸಲು ವಿಶ್ವ ಆರೋಗ್ಯ ಸಂಸ್ಥೆ ಸಂಶೋಧನಾ ವರದಿಗಳನ್ನೇ ತಿರುಚಿ ಪ್ರಕಟಿಸಿದೆ ಎಂದು ಆರೋಪಿಸಿರುವ ಕ್ಯಾಂಪ್ಕೊ ಸಂಸ್ಥೆ ಈ ಬಗ್ಗೆ ಕೇಂದ್ರ ಸರಕಾರ ಮಧ್ಯೆ ಪ್ರವೇಶಿಸಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಐಎಆರ್‌ಸಿ ವಿರುದ್ಧ ತುರ್ತು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದೆ.
ಕ್ಯಾಂಪ್ಕೊ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಗಿ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಮೂಲ ಸಂಶೋಧನಾ ವರದಿಗಳಲ್ಲಿ ತಂಬಾಕು ಸೇವನೆಯ ಪರಿಣಾಮದ ಕುರಿತು ಕೇಂದ್ರೀಕರಿಸಿ ಸಂಶೋಧನೆ ನಡೆಸಲಾಗಿತ್ತು, ಹಾಗಿದ್ದರೂ ಅಡಿಕೆ ಕ್ಯಾನ್ಸರ್ ಕಾರಕವೆಂದು ಬಿಂಬಿಸುವ ಸಲುವಾಗಿ ಮಾದರಿ ಸಂಖ್ಯೆ ಮತ್ತು ಶೀರ್ಷಿಕೆ ಯನ್ನು ತಿರುಚಿ ವರದಿ ಪ್ರಕಟಿಸಿರುವ ಡಬಬ್ಲ್ಯುಎಚ್‌ಒ ಮತ್ತು ಐಎಆರ್‌ಸಿ ಕ್ರಮ ಅಕ್ಷಮ್ಯ. ಇದು ಅಡಿಕೆ ಕೃಷಿಯನ್ನೆ ಜೀವನಾಧಾರವಾಗಿ ನಂಬಿರುವ ರೈತರ ಬದುಕಿಗೆ ಬಲವಾದ ಪೆಟ್ಟು ನೀಡಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕೂಡ್ಗಿ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು ಅಡಿಕೆಯನ್ನು ವರ್ಗೀಕರಿಸುವುದರ ಬಗ್ಗೆ ನ್ಯಾಯೋಚಿತ ವಿಮರ್ಶೆ ನಡೆಸಿ ರೈತರಿಗೆ ನ್ಯಾಯ ದೊರಕಿಸಿ ಕೊಡುವಂತೆ ಕೇಂದ್ರ ಸಚಿವರಲ್ಲಿ ವಿನಂತಿ ಮಾಡಲಾಗಿದೆ. ಅಡಿಕೆ ಲಕ್ಷಾಂತರ ಜನರ ಜೀವನದ ಆಧಾರಸ್ಥಂಭ. ಅದರ ತಪ್ಪಾದ ವರ್ಗೀಕರಣದಿಂದ ಅದನ್ನೇ ನಂಬಿ ಬದುಕುತ್ತಿರುವ ಜನರ ಜೀವನ ಹಾಳಾಗುವುದಲ್ಲದೇ ,ಅಡಿಕೆಯ ವೈಜ್ಞಾನಿಕ ಉಪಯೋಗಗಳಿಂದ ಸಮಾಜ ವಂಚಿತವಾಗಲಿದೆ ಎಂದು ಹೇಳಿದ್ದಾರೆ.