ಉಳ್ಳಾಲ | ಎರಡು ಶಾಲೆಗಳಿಗೆ ನುಗ್ಗಿದ ಕಳ್ಳರು: ವಿದ್ಯಾರ್ಥಿಗಳ ಪಿಕ್ನಿಕ್ ಗೆ ಸಂಗ್ರಹಿಸಿದ್ದ ಹಣ ಕಳವು

Update: 2024-11-27 08:56 GMT

ಉಳ್ಳಾಲ: ಎರಡು ಖಾಸಗಿ ಶಾಲೆಗಳಿಗೆ ನುಗ್ಗಿದ ಕಳ್ಳರು ಪಿಕ್ನಿಕ್ ಗಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿಟ್ಟಿದ್ದ 26,000 ರೂ. ಸೇರಿದಂತೆ ನಗದು ಕಳವುಗೈದಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರ್, ಕೊಲ್ಯದಲ್ಲಿ ಕಳೆದ ರಾತ್ರಿ ನಡೆದಿದೆ.

ಕೊಲ್ಯದ ಸಂತ ಜೋಸೆಫರ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಕೋಟೆಕಾರಿನ ಸ್ಟೆಲ್ಲಾ ಮೇರಿಸ್ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಈ ಕಳ್ಳತನ ನಡೆದಿದೆ.

ಕೊಲ್ಯ ಜಾಯ್ ಲ್ಯಾಂಡ್ ಶಾಲೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗುವುದನ್ನು ತಪ್ಪಿಸುವುದಕ್ಕಾಗಿ ಕ್ಯಾಮರಾವನ್ನು ತಿರುಚಿರುವ ಕಳ್ಳರು, ಪ್ರಾಂಶುಪಾಲರ ಕಚೇರಿ, ಕಪಾಟುಗಳ ಬೀಗ ಒಡೆದಿದ್ದಾರೆ. ಪುಸ್ತಕ, ದಾಖಲೆ ಪತ್ರೆಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದ್ದಾರೆ. ವಿದ್ಯಾರ್ಥಿಗಳಿಂದ ಪಿಕ್ನಿಕ್ ಗಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 26,000 ರೂ. ನಗದನ್ನು ಕಳವುಗೈದಿದ್ದಾರೆ ಎಂದು ತಿಳಿದು ಬಂದಿದೆ.

ಕೋಟೆಕಾರಿನ ಸ್ಟೆಲ್ಲಾ ಮೇರೀಸ್ ಶಾಲೆಗೆ ಬುಧವಾರ ಮುಂಜಾನೆ 4:30 ಗಂಟೆ ವೇಳೆಗೆ ಕಳ್ಳರು ನುಗ್ಗಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳನು ಸಿಸಿಟಿವಿ ಕ್ಯಾಮರಾದಲ್ಲಿ ಮುಖ ಚಹರೆ ಕಾಣದಿರಲು ಮ್ಯಾಟನ್ನು ಅಡ್ಡ ಹಿಡಿದು ಪ್ರವೇಶಿಸಿರುವ ದೃಶ್ಯವು ಸಿಸಿಟಿವಿಯಲ್ಲಿ ದಾಖಲಾಗಿದೆ. ಶಾಲಾ ಕಚೇರಿ, ಸ್ಟಾಪ್ ರೂಂನ ಕಪಾಟುಗಳನ್ನು ಒಡೆದು ತಡಕಾಡಿದ ಕಳ್ಳ ನಗದು ಕಳವುಗೈದಿದ್ದಾನೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿದಿದೆ.

ಕೊಲ್ಯ ಜಾಯ್ ಲ್ಯಾಂಡ್ ಶಾಲೆಯಲ್ಲಿ ಇದು ಮೂರನೇ ಬಾರಿಗೆ ನಡೆದ ಕಳ್ಳತನವಾಗಿದೆ.ಈ ಹಿಂದೆಯೂ ಎರಡು ಬಾರಿಯೂ ಕಳ್ಳರು ನಗದು ಕಳವುಗೈದಿದ್ದರು.

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News