ದ.ಕ. ಜಿಲ್ಲಾ ಕಾಂಗ್ರೆಸ್‌ನಿಂದ ಸಂವಿಧಾನ ದಿನಾಚರಣೆ

Update: 2024-11-26 16:36 GMT

ಮಂಗಳೂರು: ಭಾರತದ ಸಂವಿಧಾನ ಅಂಗೀಕಾರಗೊಂಡು 75ನೇ ವರ್ಷದ ಪ್ರಯುಕ್ತ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸಂವಿಧಾನ ದಿನಾಚರಣಾ ಕಾರ್ಯಕ್ರಮ ಮಂಗಳವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನ ಬಹುತ್ವ ಭಾರತದ ಬುನಾದಿಯಾಗಿದೆ. ಸಂವಿಧಾನದ ಬಗ್ಗೆ ಅರಿತು ಅದರ ಅನುಗುಣವಾಗಿ ನಡೆದರೆ ಭಾರತ ವಿಶ್ವಗುರು ಆಗಲಿದೆ. ಸಂವಿಧಾನ ಕಾಪಾಡುವುದು ಇಂದು ನಮ್ಮೆಲ್ಲರ ಹೊಣೆ. ಸಂವಿಧಾನವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ ಎಂದರು.

ಸಂವಿಧಾನದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿಗರಿಂದ ಸಂವಿಧಾನದ ಬದಲಾವಣೆಯ ಮಾತು ಕೇಳಿ ಬರುತ್ತಿದೆ. ಇಂತಹವರು ಸಂವಿಧಾನದ ಮಹತ್ವ ಅರಿತುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೆಟಿಲ್ಡಾ ಡಿಸೋಜ, ಮುಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ರಾಜ್ಯ ಗೇರು ನಿಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾ ಕಾಂಗ್ರೆಸ್ ಮಾನವ ಹಕ್ಕು ವಿಭಾಗದ ಅಧ್ಯಕ್ಷ ಮನೋರಾಜ್ ರಾಜೀವ, ಮಂಗಳೂರು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ದಿನೇಶ್ ಮೂಳೂರು, ಬ್ಲಾಕ್ ಅಧ್ಯಕ್ಷರಾದ ಜೆ.ಅಬ್ದುಲ್ ಸಲೀಂ, ಪ್ರಕಾಶ್ ಸಾಲ್ಯಾನ್, ಮೋಹನ್ ಕೋಟ್ಯಾನ್, ಡಿಸಿಸಿ ಉಪಾಧ್ಯಕ್ಷರಾದ ಸದಾಶಿವ ಶೆಟ್ಟಿ ಸುರತ್ಕಲ್, ಟಿ.ಹೊನ್ನಯ್ಯ, ನೀರಜ್ ಚಂದ್ರಪಾಲ್, ಮ.ನ.ಪಾ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಸಂವಿಧಾನದ ಪೀಠಿಕೆ ಬೋಧಿಸಿದರು. ಮಾಜಿ ಮೇಯರ್ ಶಶಿಧರ್ ಹೆಗ್ಡೆ ಸ್ವಾಗತಿಸಿದರು, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ವಿಶ್ವಾಸ್ ದಾಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News