ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಶಕ್ತಿ ವೃದ್ಧಿಯಾಗಿರುವುದು ಗ್ರಾ.ಪಂ ಉಪಚುನಾವಣೆಯಲ್ಲಿ ಸಾಬೀತು: ಹರೀಶ್ ಕುಮಾರ್
ಮಂಗಳೂರು: ಬಿಜೆಪಿ ಅಪಪ್ರಚಾರವನ್ನು ಮೀರಿ ದಕ್ಷಿಣ ಕನ್ನಡದ ಜನರು ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟಿರುವುದು ಮತ್ತು ಕಾಂಗ್ರೆಸ್‌ನ ಶಕ್ತಿ ವೃದ್ಧಿಯಾಗಿರುವುದು ಈ ಚುನಾವಣೆಯಲ್ಲಿ ಸಾಬೀತಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ಹೇಳಿದ್ದಾರೆ.
ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡದ 30 ಗ್ರಾಪಂ ಕ್ಷೇತ್ರಗಳು ಮತ್ತು ಪುರಸಭೆಯ 1 ಕ್ಷೇತ್ರ ಸೇರಿ ಒಟ್ಟು 31 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ 24 ಕ್ಷೇತ್ರಗಳನ್ನು ಜಯಿಸಿದೆ ಎಂದು ಮಾಹಿತಿ ನೀಡಿದರು.
ಉಪಚುನಾವಣೆಯ ಮೊದಲು 31 ಕ್ಷೇತ್ರಗಳ ಪೈಕಿ 14 ರಲ್ಲಿ ಕಾಂಗ್ರೆಸ್ ಬೆಂಬಲದಿಂದ ಜಯಿಸಿದ ಸದಸ್ಯರು ಇದ್ದರೆ, ಬಿಜೆಪಿ ಸಂಖ್ಯೆ 17 ಇತ್ತು. ಕಳೆದ ಚುನಾವಣೆಯಲ್ಲಿ ಬಿಜೆಪಿ 10 ನ್ನು ಕಳೆದುಕೊಂಡು 7ರಲ್ಲಿ ಜಯ ಗಳಿಸಿದೆ ಎಂದರು.
*ಅಪ್ರಚಾರ ಜನರಿಗೆ ಗೊತ್ತಾಗಿದೆ: ರಾಜ್ಯ ಸರಕಾರದ ಗ್ಯಾರಂಟಿ ಯಶಸ್ವಿಯಾಗಿ ಅನುಷ್ಠಾನ ಗೊಂಡಿರುವ ಹಿನ್ನೆಲೆಯಲ್ಲಿ ಜನರು ಕಾಂಗ್ರೆಸ್‌ನ ಬಗ್ಗೆ ನಂಬಿಕೆ ಇಟ್ಟಿದ್ದಾರೆ. ಬಿಜೆಪಿ ಕೇವಲ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಯೋಜನೆಗಳ ಬಗ್ಗೆ ಅಪಪ್ರಚಾರ ನಡೆಸುತ್ತಿದೆ ಎಂಬ ವಿಚಾರ ಜನರಿಗೆ ಗೊತ್ತಾಗಿದೆ ಎಂದರು.
ಮುಂದಿನ ವರ್ಷ ನಡೆಯಲಿರುವ ಜಿಪಂ, ತಾಪಂ, ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರದ ಗದ್ದುಗೆ ಏರುವುದು ಖಚಿತ ಎಂದು ಹರೀಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
*ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ತಿರಸ್ಕರಿಸಿತ್ತು: ಬಿಪಿಎಲ್ ಕಾರ್ಡ್ ಮತ್ತು ಕಸ್ತೂರಿರಂಗನ್ ವರದಿ ಜಾರಿ ವಿಚಾರದ ಕುರಿತು ಬಿಜೆಪಿ ಇದೀಗ ಹೋರಾಟಕ್ಕಿಳಿದಿದೆ. ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವ ಮಾರ್ಗಸೂಚಿ ನೀಡಿದ್ದೇ ಕೇಂದ್ರ ಬಿಜೆಪಿ ಸರಕಾರ . ಅದೇ ರೀತಿ ಕಸ್ತೂರಿ ರಂಗನ್ ವರದಿಯನ್ನು ಹಿಂದಿನ ಕಾಂಗ್ರೆಸ್ ಸರಕಾರ ತಿರಸ್ಕಾರ ಮಾಡಿತ್ತು. ಆಗ ಬಿ. ರಮಾನಾಥ ರೈ ಅವರು ಅರಣ್ಯ ಸಚಿವರಾಗಿದ್ದರು. ಇದೀಗ ಮತ್ತೊಮ್ಮೆ ‘ ನಾವು ಜಾರಿ ಮಾಡುವುದಿಲ್ಲ’ ಎಂಬ ನಿರ್ಣಯವನ್ನು ಕೇಂದ್ರಕ್ಕೆ ರಾಜ್ಯದಿಂದ ಕಳುಹಿಸಿಕೊಡಲಾಗಿದೆ. ಪರಿಸ್ಥಿತಿ ಹೀಗಿದ್ದರೂ ಬಿಜೆಪಿ ಯಾಕೆ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದೆ ಎಂದು ಪ್ರಶ್ನಿಸಿರುವ ಅವರು ಬಿಜೆಪಿ ಇಲ್ಲಿ ಪ್ರತಿಭಟನೆ ಮಾಡುವುದನ್ನು ಬಿಟ್ಟು ದಿಲ್ಲಿಗೆ ಹೋಗಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡಲಿ ಎಂದು ಸವಾಲು ಹಾಕಿದರು.
ಈ ಹಿಂದೆ ಬಿಜೆಪಿ ಸರಕಾರ ಇದ್ದಾಗ 2800 ಎಕ್ರೆ ವಕ್ಫ್ ಜಮೀನಿಗೆ ನೋಟಿಸ್ ನೀಡಲಾಗಿತ್ತು. ಈಗ ಕಾಂಗ್ರೆಸ್ ಸರಕಾರ ಬಂದ ಮೇಲೆ ರೈತರ ಜಮೀನು ಬೇಡ ಅಂತ ಸ್ವತಃ ವಕ್ಫ್ ಬೋರ್ಡ್ ಹೇಳಿದೆ. ಬಿಜೆಪಿ ತನ್ನ ತಪ್ಪನ್ನು ಮರೆಮಾಚಲು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ ಎಂದು ಟೀಕಿಸಿದರು.
ಸಂವಿಧಾನದಲ್ಲಿರುವ ಜಾತ್ಯತೀತ, , ಸಮಗ್ರತೆ ಪದಗಳನ್ನು ತೆಗೆದುಹಾಕುವಂತೆ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ, ವಿಷ್ಣು ಶಂಕರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಪದಗಳನ್ನು ತೆಗೆಯಲಾಗದು ಎಂದು ಸುಪ್ರೀಂ ಕೋರ್ಟ್ ಅವರ ಅರ್ಜಿಯನ್ನೇ ವಜಾಗೊಳಿಸಿದೆ. ಈ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದರು.
ರಾಜ್ಯದಲ್ಲಿ ನಡೆದ ಮೂರು ಉಪಚುನಾವಣೆಗಳ ಪೈಕಿ ಗೆಲ್ಲಲಾಗದು ಎಂಬಂತಿದ್ದ ಕ್ಷೇತ್ರಗಳನ್ನೂ ಕಾಂಗ್ರೆಸ್ ಗೆದ್ದಿದೆ. ಕಾಂಗ್ರೆಸ್ ಸರಕಾರದ ಉತ್ತಮ ಆಡಳಿತ ಹಾಗೂ ಗ್ಯಾರಂಟಿ ಅನುಷ್ಠಾನದಿಂದ ಜನರಿಗೆ ನಂಬಿಕೆ ಬಂದಿದ್ದು, ಬಿಜೆಪಿ ಅಪಪ್ರಚಾವನ್ನು ಜನರು ತಿರಸ್ಕರಿಸಿದ್ದಾರೆ ಎಂದು ಹರೀಶ್ ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಧುರೀಣರಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಡಿ.ಕೆ. ಶಾಹುಲ್ ಹಮೀದ್, ಶುಭೋದಯ ಆಳ್ವ, ಸುಹಾನ್ ಆಳ್ವ, ವಿಕಾಸ್ ಶೆಟ್ಟಿ, ಜಿತೇಂದ್ರ ಸುವರ್ಣ ಉಪಸ್ಥಿತರಿದ್ದರು.