ಕಾವೂರು ಸರಕಾರಿ ಶಾಲೆಗೆ 1 ಕೋಟಿ ರೂ. ದೇಣಿಗೆ ನೀಡಿದ ಹಳೆ ವಿದ್ಯಾರ್ಥಿ

Update: 2024-09-21 04:10 GMT

ಮಂಗಳೂರು: ಕಾವೂರಿನ ದ.ಕ. ಜಿಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೇಶವ ಅಮೀನ್ ಒಂದು ಕೋಟಿ ರೂ. ಮೊತ್ತದ ದೇಣಿಗೆ ನೀಡಿದ್ದಾರೆ.

ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಕಟ್ಟಡ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ವೈ. ಇತ್ತೀಚೆಗೆ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕರು, "ಸರಕಾರಿ ಶಾಲೆಗಳು ಮಕ್ಕಳಿಲ್ಲದೆ, ಸುಸಜ್ಜಿತ ಕಟ್ಟಡ ಮತ್ತು ಮೂಲಭೂತ ಸೌಲಭ್ಯವಿಲ್ಲದೆ ಬರಡಾಗುತ್ತಿರುವ ಈ ಸಂದರ್ಭದಲ್ಲಿ ಕೇಶವ ಅಮೀನ್ ತಾವು ಕಲಿತ ಸರಕಾರಿ ಶಾಲೆಯ ಅಭಿವೃದ್ಧಿಗೆ ಮುಂದಾಗಿರುವುದು ಶ್ಲಾಘನೀಯ. ಅವರು ಏಳು ಕೊಠಡಿಗಳ ನಿರ್ಮಾಣಕ್ಕೆ ಅಂದಾಜು ಒಂದು ಕೋಟಿ ರೂ. ದೇಣಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಸರಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಬಳಸಿಕೊಂಡು ಕಾವೂರು ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಎಲ್ಲರೂ ಶ್ರಮಿಸೋಣ" ಎಂದರು.

ಉದ್ಯಮಿ ಕೇಶವ ಅಮೀನ್ ಮಾತನಾಡಿ, “ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟು ಸೇರಿ ನನಗೆ ಈ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಇದು ನಾನು ಕಲಿತ ಶಾಲೆ ಮತ್ತು ನನ್ನೂರಿಗೆ ಕೊಡಬಹುದಾದ ಕೊಡುಗೆ. ಶಾಲೆಯ ಎಲ್ಲ ಹಳೆ ವಿದ್ಯಾರ್ಥಿಗಳು ನಮ್ಮ ಜೊತೆ ಕೈಜೋಡಿಸಿ”ಎಂದು ಮನವಿ ಮಾಡಿದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹೊ, ಕಾರ್ಪೊರೇಟರ್ ಸುಮಂಗಲಾ ರಾವ್, ಸಿ.ಆರ್.ಪಿ. ದೀಪಿಕಾ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಚಂದ್ರಹಾಸ, ಕಾರ್ಯದರ್ಶಿ ವಿಕೇಶ್ ಮತ್ತು ಲಾವಣ್ಯಾ ಶೆಟ್ಟಿ, ವಕೀಲ ಗುರುಪ್ರಸಾದ್, ನಿವೃತ್ತ ಮುಖ್ಯ ಶಿಕ್ಷಕಿ ಚಂದ್ರಾವತಿ, ನಿವೃತ್ತ ಮುಖ್ಯ ಶಿಕ್ಷಕ ಸುರೇಂದ್ರನಾಥ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕ ಭುಜಂಗ ಪೂಜಾರಿ, ನಿವೃತ್ತ ಮುಖ್ಯ ಶಿಕ್ಷಕ ಗಂಗಾಧರ್, ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಛಲವಾದಿ, ಪದಾಧಿಕಾರಿಗಳಾದ ನಿತೇಶ್ ಕಾವೂರು, ಅಜಿತ್, ಶಿತೇಶ್ ಕೊಂಡೆ, ಸಮಾಜ ಸೇವಕ ಹಸನಬ್ಬ, ಪೆಲ್ಸಿ ರೇಗೋ

ಅಶ್ವಿನಿ, ಗೋಕುಲ್ ದಾಸ್ ಪ್ರಭು, ಅರ್ಚನಾ, ಕೃಷ್ಣಪ್ಪ ಸಾಲ್ಯಾನ್, ಕುಸುಮಕರ್, ಶಾಲಾ ಶಿಕ್ಷಕರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಮತ್ತು SDMC ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಸೀತಮ್ಮ ಜೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News