ಕಾಲರಾ, ನಿಫಾ, ಮಂಕಿಪಾಕ್ಸ್ ಬಗ್ಗೆ ಭಯ ಬೇಡ: ದ.ಕ.ಜಿಲ್ಲಾ ಆರೋಗ್ಯಾಧಿಕಾರಿ

Update: 2024-09-20 15:37 GMT

ಮಂಗಳೂರು: ಮೂಡುಬಿದಿರೆ ತಾಲೂಕಿನ ನೆಲ್ಲಿಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಕೆಲವು ದಿನಗಳ ಹಿಂದೆ ಕಾಲರಾ ರೋಗ ದೃಢಪಟ್ಟಿದೆ. ಸದ್ಯ ಅವರು ಚೇತರಿಸಿಕೊಂಡಿದ್ದಾರೆ. ಉಳಿದಂತೆ ಜಿಲ್ಲೆಯಲ್ಲಿ ಈ ವರ್ಷ ಯಾವುದೇ ಮಂಕಿಪಾಕ್ಸ್, ನಿಫಾ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಕಾಲರಾ, ನಿಫಾ, ಮಂಕಿಪಾಕ್ಸ್ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಆದರೆ ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಹೇಳಿದರು.

ತನ್ನ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಕಳ ಭಾಗದ ಹೋಟೆಲ್‌ವೊಂದರಲ್ಲಿ ಆಹಾರ ತಿಂದ ವ್ಯಕ್ತಿಯಲ್ಲಿ ಕಾಲರಾ ಕಾಣಿಸಿಕೊಂಡಿತ್ತು. ಅದರಂತೆ ಆ ಹೋಟೆಲನ್ನು ನಿಗಾವಣೆಯಲ್ಲಿರಿಸಿದ್ದೇವೆ. ಸಾಂಕ್ರಾಮಿಕ ರೋಗಗಳ ಬಗ್ಗೆ ನಿಗಾ ವಹಿಸುವಂತೆ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಸೂಚನೆ ನೀಡಲಾಗಿದೆ. ಕಾಲರಾ ತಡೆಗಾಗಿ ಹೋಟೆಲ್ ಮಾಲಕರ ಸಂಘದ ಸಭೆಯನ್ನೂ ನಡೆಸಿ ಚರ್ಚಿಸಿದ್ದೇವೆ. ಗ್ರಾಹಕರಿಗೆ ಶುದ್ಧ ಬಿಸಿ ಮತ್ತು ಆರಿಸಿದ ಕುಡಿಯುವ ನೀರು ಸಹಿತ ಶುಚಿ ಆಹಾರ ನೀಡುವಂತೆ, ಗ್ರಾಹಕರ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ ಎಂದರು.

ದ.ಕ.ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ಟಾಸ್ಕ್‌ಪೋರ್ಸ್ ಸಭೆಯನ್ನು ಈಗಾಗಲೆ ನಡೆಸಲಾಗಿದೆ. ಜಿಲ್ಲೆಯ ಎಲ್ಲ ಓವರ್ ಹೆಡ್ ಟ್ಯಾಂಕ್ ಮೂರು ತಿಂಗಳೊಳಿಗೊಮ್ಮೆ ಸ್ವಚ್ಛಗೊಳಿಸುವಂತೆ ಸಿಇಒ ಸೂಚಿಸಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಯಾವುದೇ ಮಂಕಿ ಪಾಕ್ಸ್, ನಿಫಾ ಪ್ರಕರಣ ಕಂಡುಬಂದಿಲ್ಲ. ಆಫ್ರಿಕನ್ ದೇಶಗಳಿಂದ ಬರುವ ಪ್ರಯಾಣಿಕರನ್ನು ಮಂಗಳೂರು ವಿಮಾನ ನಿಲ್ದಾಣ ಮತ್ತು ನವ ಮಂಗಳೂರು ಬಂದರಿನಲ್ಲಿ ಸರ್ವೇಕ್ಷಣೆ ನಡೆಸಲಾಗುತ್ತಿದೆ. ಆ್ಯಂಬುಲೆನ್ಸ್ ನಿಯೋಜಿಸಲಾಗಿದೆ. ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ 6 ಬೆಡ್‌ಗಳನ್ನು ಚಿಕಿತ್ಸೆ ನೀಡಲು ಮೀಸಲಿಡಲಾಗಿದೆ ಎಂದರು.

ಮಂಕಿ ಪಾಕ್ಸ್ ಸಿಡುಬು ರೋಗವನ್ನು ಹೋಲುತ್ತದೆ. ಅದಕ್ಕೆ ನಿರ್ದಿಷ್ಟವಾಗಿ ಯಾವುದೇ ಚಿಕಿತ್ಸೆಗಳಿಲ್ಲ. ರೋಗ ನಿರೋಧಕ ಶಕ್ತಿ ಹೊಂದಿದ್ದರೆ ಚರ್ಮ ರೋಗವನ್ನು ಹೊಂದಿಲ್ಲದಿದ್ದರೆ ನೋವು ನಿವಾರಣೆ ಸಹಿತ ಸೂಕ್ತವಾದ ಆರೈಕೆಯಿಂದ ಚೇತರಿಸಿ ಕೊಳ್ಳಬಹುದು ಎಂದು ಡಾ. ಎಚ್.ಆರ್. ತಿಮ್ಮಯ್ಯ ಹೇಳಿದರು.

ಈ ಸಂದರ್ಭ ದ.ಕ. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳೆಪಾಡಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ ಭಂಡಾರಿ ಉಪಸ್ಥಿತರಿದ್ದರು.

ಕಾಲರಾ ರೋಗದ ಬಗ್ಗೆ ಮುಂಜಾಗ್ರತೆ ವಹಿಸಿ

ಕಾಲರಾ ರೋಗಕ್ಕೆ ತುತ್ತಾದ ಸಂದರ್ಭ ಅತೀಸಾರ ನಿರ್ಜಲೀಕರಣಕ್ಕೆ ಕಾರಣವಾಗುತ್ತಿದೆ. ವಾಂತಿ ಭೇದಿ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ಹಣ್ಣು ತರಕಾರಿಗಳನ್ನು ಚೆನ್ನಾಗಿ ತೊಳೆದು ತಿನ್ನಬೇಕು. ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತಿನಿಸು ಹಾಗೂ ತಳ್ಳುಗಾಡಿಯಲ್ಲಿ ಮಾರಾಟ ಮಾಡುವ ಆಹಾರ, ಹಣ್ಣುಗಳನ್ನು ಸೇವಿಸಬಾರದು. ಮಕ್ಕಳ ಕೈಗಳನ್ನು ಸ್ವಚ್ಛವಾಗಿ ತೊಳೆದು ಆಹಾರ ಉತ್ಪನ್ನಗಳನ್ನು ಬಳಸುವ ಬಗ್ಗೆ ಅರಿವು ಮೂಡಿಸಬೇಕು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News