ಮ್ಯೂಸಿಕ್‌ನ್ನು ಆರಿಸಿದ್ದು ಖುಷಿಗಾಗಿ: ಗುರುಕಿರಣ್

Update: 2024-09-20 13:52 GMT

ಮಂಗಳೂರು, ಸೆ.20: ಬದುಕನ್ನು ನಾವೇ ವಿನ್ಯಾಸಗೊಳಿಸಬೇಕು. ಕನಸು ಕಟ್ಟುವ ಬದಲು ಇಷ್ಟವಾದ ಕೆಲಸವನ್ನು ಮಾಡುತ್ತಾ ಹೋಗಬೇಕು. ನಾನು ಶಾಲೆಗೆ ಹೋಗಿ ಸಂಗೀತದ ಶಿಕ್ಷಣ ಪಡೆದವನಲ್ಲ. ಅಭ್ಯಾಸ ಮಾಡುತ್ತಾ ಕಲಿತೆ. ಮ್ಯೂಸಿಕ್ ಅನ್ನು ಆರಿಸಿದ್ದು ಖುಷಿಗಾಗಿ. ಅದನ್ನು ನಿಷ್ಠೆಯಿಂದ ಮಾಡಿದ ಕಾರಣ ಯಶಸ್ಸು ಸಾಧ್ಯವಾಯಿತು ಎಂದು ಖ್ಯಾತ ಸಂಗೀತ ನಿರ್ದೇಶಕ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ ಡಾ. ಗುರುಕಿರಣ್ ಹೇಳಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನ ತಿಂಗಳ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ನನಗೆ ಮಾರ್ಗದರ್ಶಕರು ಯಾರೂ ಇರಲಿಲ್ಲ. ಹೆತ್ತವರು ನನ್ನನ್ನು ವೈದ್ಯನಾಗಿ ರೂಪಿಸಬೇಕೆಂದು ಬಯಸಿದ್ದರು. ಹೆತ್ತವರು ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿಸಿದ್ದರು. ಆದರೆ ಮೆಡಿಕಲ್ ಕಾಲೇಜು ಸೀಟ್ ತಪ್ಪಿತು. ಇಂಜಿನಿಯರಿಂಗ್ ಸೀಟ್ ಸಿಕ್ಕಿದ್ದರೂ, ಅದನ್ನು ನಿರಾಕರಿಸಿ

ಮಂಗಳೂರಿನ ಸರ್ಕಾರಿ ಕಾಲೇಜಿಗೆ ಸೇರಿದೆ. ಅಲ್ಲಿ ಕಲಾ ಕ್ಷೇತ್ರ ಆಕರ್ಷಿಸಿತು. ಹಾಡುಗಾರನಾದೆ, ನಟನಾದೆ, ಸಂಗೀತ ನಿರ್ದೇಶಕನಾದೆ. ಸಂಗೀತದ ಆಕರ್ಷಣೆಯಿಂದ ಬದುಕೇ ಬದಲಾಯಿತು ಅಲ್ಲಿ ಎಲ್ಲವನ್ನು ಕಲಿತೆ. ನನ್ನನ್ನು ಬೆಳೆಸಿದ್ದೇ ಸರಕಾರಿ ಕಾಲೇಜು. ಸರಕಾರಿ ಕಾಲೇಜುಗಳಲ್ಲಿ ಬೇರೆ ಬೇರೆ ಊರಿನ ವಿದ್ಯಾರ್ಥಿಗಳು ಇರುತ್ತಾರೆ. ಹೀಗಾಗಿ ಅವರೊಂದಿಗೆ ಸೇರಿಕೊಂಡು ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಾನು ಗಾಯಕನಾಗಲು ಹೋದೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತು. ಉಪೇಂದ್ರ ಮ್ಯೂಸಿಕ್ ಕಂಪೋಸ್ ಮಾಡಲು ಹೇಳಿದ್ರು, ಅಲ್ಲಿಂದ ಮ್ಯೂಸಿಕ್ ಡೈರೆಕ್ಟರ್ ಆದೆ. ನಾನು ಯಾವುದನ್ನೂ ಬೆನ್ನಟ್ಟಿ ಹೋಗಿಲ್ಲ. ಕಲಿಯೋದು ತುಂಬಾ ಇರುತ್ತೆ ನಾವು ಪ್ರತಿಯೊಂದನ್ನು ಕಲಿಯುತ್ತಾ ಹೋಗ್ಬೇಕು ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ ಸಾಧನೆಗೆ ಆರಂಭ ಮತ್ತು ಅಂತ್ಯ ಎನ್ನುವುದು ಇಲ್ಲ. ಅದು ನಿರಂತರ. ನನ್ನನ್ನು ಬೆಳೆಸಿದ್ದೇ ಮಾಧ್ಯಮ. ಬೆಂಗಳೂರಿನಲ್ಲಿ ಮಾಧ್ಯಮಗಳು ನನ್ನನ್ನು ಬೆಳೆಯಲು ಬಹಳಷ್ಟು ಸಹಕಾರ ನೀಡಿತು. ನನ್ನ ಮೊದಲ ಚಿತ್ರದಲ್ಲಿ ಯಜ್ಞ ಮಂಗಳೂರು ಫೋಟೋ ತೆಗೆದಿದ್ರು’ ಎಂದು ಅಂದಿನ ದಿನಗಳನ್ನು ಮೆಲುಕು ಹಾಕಿಕೊಂಡರು.

1983ರಲ್ಲಿ ಗುರುಕಿರಣ್ ನೈಟ್ಸ್ ಪ್ರಾರಂಭ ಮಾಡಿದೆ. ಮಂಗಳೂರಿನಲ್ಲಿ ಇದ್ದಾಗ ಕಾರ್ಯಕ್ರಮ ಮಾಡ್ತಾ ಇದ್ದೆ. ಬೆಂಗಳೂರಿಗೆ ಹೋದ ಮೇಲೆ ಕಾರ್ಯಕ್ರಮ ಕಡಿಮೆ ಆಯಿತು ಎಂದರು.

ಮಂಗಳೂರಿನ ಪ್ರತಿಭೆಗಳು ಸೇರಿದಂತೆ 16ಕ್ಕೂ ಅಧಿಕ ಹೊಸ ಗಾಯಕ, ಗಾಯಕಿಯರನ್ನು ಸಿನಿಮಾ ರಂಗಕ್ಕೆ ಪರಿಚಯಿ ಸಿದ್ದೇನೆ. ಅತ್ಯಾಧುನಿಕ ತಂತ್ರಜ್ಞಾನ ಬಂದ ಬಳಿಕ ಸಿನಿಮಾ ಹಾಗೂ ಹಿನ್ನೆಲೆ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಯಾಗಿದೆ. ಹೊಸತನಕ್ಕೆ ನಮ್ಮನ್ನು ತೆರೆದುಕೊಳ್ಳಬೇಕು. ದೊರೆತ ಅವಕಾಶವನ್ನು ಬಳಸಿ ಯಶಸ್ಸಿನ ಹಾದಿಯಲ್ಲಿ ಸಾಗಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.

*ದರ್ಶನ್ ಕೇಸ್ ವೈಯಕ್ತಿಕ: ದರ್ಶನ್ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ, ಈ ಪ್ರಕರಣ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿ ಆಗಿದೆ ಸಿನಿಮಾಕ್ಕು ಅದಕ್ಕೂ ಸಂಬಂಧ ಇಲ್ಲ. ಇವತ್ತು ಜನರಿಗೆ ಒಳ್ಳೆಯ ಸುದ್ದಿ ಬೇಕಾಗಿಲ್ಲ. ಕೆಟ್ಟದ್ದು ಬೇಕಾ ಗಿದೆ. ದರ್ಶನ್ ಕೇಸಲ್ಲೂ ಅಷ್ಟೇ ವೀವ್ಸ್ ,ಪ್ರಚಾರಕ್ಕಾಗಿ ಮಾಡ್ತಿದಾರೆ ಎಂದರು.

ಸಿನಿಮಾ ರಂಗದಲ್ಲಿ ಹೆಣ್ಣು ಮಕ್ಕಳ ಶೋಷಣೆಯನ್ನು ತಡೆಯಲು ಕೇರಳ ಮಾದರಿ ಕಮಿಟಿ ರಚಿಸಬೇಕು ಎಂಬ ಆಗ್ರಹ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಗುರುಕಿರಣ್, ಪ್ರತಿಯೊಂದಕ್ಕೂ ಕಮಿಟಿ ಮಾಡಿದ್ರೆ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಸಾಧ್ಯವಿಲ್ಲ ಶೋಷಣೆ ಎಲ್ಲ ರಂಗದಲ್ಲೂ ಇದೆ. ಸಿನಿಮಾಕ್ಕೆ ಮಾತ್ರ ಸಮಿತಿ ರಚಿಸುವುದರಲ್ಲಿ ಅರ್ಥವಿಲ್ಲ ಎಂದರು.

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಛಾಯಾಗ್ರಾಹಕ ಯಜ್ಞ ಮಂಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಪತ್ರಿಕಾಭವನ ಟ್ರಸ್ಟ್‌ನ ಅಧ್ಯಕ್ಷ ರಾಮಕೃಷ್ಣ ಆರ್, ಮಂಗಳೂರು ಪ್ರೆಸ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.

ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ವಂದಿಸಿದರು. 




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News