ಉಪ್ಪಿನಂಗಡಿ| ಸಮರ್ಪಕವಾಗದ ಹೊಂಡ ಮುಚ್ಚುವ ಕಾಮಗಾರಿ: ಗ್ರಾಮಸ್ಥರಿಂದ ಗುತ್ತಿಗೆದಾರ ತರಾಟೆಗೆ

Update: 2024-12-27 15:55 GMT

ಉಪ್ಪಿನಂಗಡಿ: ರಸ್ತೆಯ ಹೊಂಡ ಮುಚ್ಚುವ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸದ ವಿರುದ್ಧ ಸಿಡಿದೆಡ್ಡ ಸ್ಥಳೀಯರು ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಗುತ್ತಿಗೆದಾರನನ್ನು ತೀವೃವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ಕರಾಯ ಗ್ರಾಮದ ಗರಡಿ ಬಳಿ ನಡೆದಿದೆ.

ಗುರುವಾಯನಕೆರೆ - ಉಪ್ಪಿನಂಗಡಿ ರಾಜ್ಯ ಹೆದ್ದಾರಿಯು ಹೊಂಡ- ಗುಂಡಿಗಳಿಂದ ಕೂಡಿ ತೀವ್ರ ಹದಗೆಟ್ಟಿರುವ ಬಗ್ಗೆ ಬೆಳ್ತಂಗಡಿಯ ಸುದ್ದಿ ಬಿಡುಗಡೆ ಪತ್ರಿಕೆಯು ಸಚಿತ್ರ ವರದಿ ಮಾಡಿತ್ತಲ್ಲದೇ, ಗುರುವಾಯಕೆರೆಯಿಂದ ಉಪ್ಪಿನಂಗಡಿಯವರೆಗೆ ರಾಜ್ಯ ಹೆದ್ದಾರಿಯಲ್ಲಿರುವ ಗುಂಡಿಗಳನ್ನು ಲೆಕ್ಕ ಹಾಕಿ ವರದಿಯಲ್ಲಿ ಅದನ್ನು ಉಲ್ಲೇಖಿಸಿತ್ತು. ಬಳಿಕ ಎಚ್ಚೆತ್ತ ಇಲಾಖೆಯು ರಾಜ್ಯ ಹೆದ್ದಾರಿ ವಾರ್ಷಿಕ ನಿರ್ವಹಣಾ ನಿಧಿಯಿಂದ 19 ಲಕ್ಷ ರೂ. ವೆಚ್ಚದಲ್ಲಿ ಹೆದ್ದಾರಿಯ ಗುಂಡಿ ಮುಚ್ಚುವ ಕಾಮಗಾರಿ ಆರಂಭಿಸಿತ್ತು. ಇದಕ್ಕೂ ಮೊದಲು ಹೆದ್ದಾರಿಯ ಹೊಂಡಗಳಿಂದಾಗಿ ವಾಹನ ಸಂಚಾರಕ್ಕೆ ತೀರಾ ಕಷ್ಟಗಳಾದಾಗ ಕರಾಯ- ಕಲ್ಲೇರಿ ನಡುವಿನ ಗ್ರಾಮಸ್ಥರು ಸೇರಿ ಅಲ್ಲಿರುವ ಹೆದ್ದಾರಿ ಹೊಂಡಗಳನ್ನು ಮಣ್ಣು ತುಂಬಿ ಮುಚ್ಚಿದ್ದರು. ಬಳಿಕ ಹೊಂಡ ಮುಚ್ಚುವ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರ ಕೆಲಸಗಾರರು ಇಲ್ಲಿ ಕಾಮಗಾರಿ ನಡೆಸುವಾಗ ಹೆದ್ದಾರಿಯ ಹೊಂಡಗಳಿಗೆ ಹಾಕಿದ್ದ ಮಣ್ಣನ್ನು ತೆಗೆಯದೇ ಅದರ ಮೇಲೆಯೇ ಡಾಮರು ಹಾಕಿದ್ದರು. ಇದನ್ನು ಅರಿತ ಗ್ರಾಮಸ್ಥರು ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಕರೆದಿದ್ದು, ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ವರ್ಷಾ ಅವರನ್ನು ಗುತ್ತಿಗೆದಾರರ ಕಾಮಗಾರಿಯನ್ನು ವಿವರಿಸಿ, ಗುತ್ತಿಗೆದಾರರನ್ನು ತರಾಟೆಗೆ ತೆಗೆದು ಕೊಂಡರು. ಇಲಾಖಾ ಎಂಜಿನಿಯರ್ ಅವರು ಕೂಡಾ ಕಾಟಾಚಾರಕ್ಕೆ ಕೆಲಸ ಮಾಡದೇ ಕಾಮಗಾರಿಯನ್ನು ಸರಿಯಾಗಿ ನಿಭಾಯಿಸುವಂತೆ ಎಚ್ಚರಿಕೆ ಕೊಟ್ಟರು. ಗುತ್ತಿಗೆದಾರರೂ ಈ ಕಾಮಗಾರಿ ನಡೆಸಿದ್ದನ್ನು ಮತ್ತೆ ಸರಿ ಮಾಡಿಕೊಡಲು ಒಪ್ಪಿಕೊಂಡರು.

ಈ ಸಂದರ್ಭ ಗ್ರಾಮಸ್ಥರಾದ ಜಯರಾಮ ಆಚಾರ್ಯ, ಜಗದೀಶ ಗೌಡ, ಲಿಂಗಪ್ಪ, ಆನಂದ ಆಚಾರ್ಯ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News