ಸುರತ್ಕಲ್: ಗ್ಯಾಸ್ ಸಿಲಿಂಡರ್‌ನಿಂದ ಬೆಂಕಿ ಅವಘಡ; ಗಾಯಾಳು ಮಹಿಳೆ ಮೃತ್ಯು
ಸುರತ್ಕಲ್: ಇಲ್ಲಿನ ತಡಂಬೈಲ್ ವೆಂಕಟರಮಣ ಕಾಲನಿಯಲ್ಲಿ ಡಿ.18ರಂದು ಮಧ್ಯಾಹ್ನ ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ನಿಂದ ಅಡುಗೆ ಅನಿಲಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಗಂಭೀರಗಾಯಗೊಂಡಿದ್ದ ಪುಷ್ಪಾ (72) ಅವರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಪುಷ್ಪಾ ಹಾಗೂ ಅವರ ನಾದಿನಿ ವಸಂತಿ ಅವರಿಗೆ ಕಳೆದ 9 ದಿನಗಳಿಂದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಪುಷ್ಪಾ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವಸಂತಿ ಅವರು ಗ್ಯಾಸ್ ಸೋರಿಕೆಯಾಗಿರುವುದನ್ನು ಗಮನಿಸದೆ ಮಧ್ಯಾಹ್ನ ಅಡುಗೆ ಕೋಣೆಗೆ ಹೋಗಿ ಸ್ಟವ್ ಹಚ್ಚಿದ್ದರಿಂದ ದೊಡ್ಡ ಮಟ್ಟದ ಸ್ಫೋಟವಾಗಿ ಬೆಂಕಿ ಏಕಾಏಕಿ ವ್ಯಾಪಿಸಿಕೊಂಡಿತ್ತು ಎಂದು ತಿಳಿದು ಬಂದಿದೆ.
ವಸಂತಿ ಅವರು ಸಹಾಯಕ್ಕಾಗಿ ಕೂಗಿದಾಗ ಅವರನ್ನು ರಕ್ಷಿಸಲು ಹೋದ ಪುಷ್ಪಾ ಅವರಿಗೂ ಬೆಂಕಿ ತಗುಲಿ ತೀವ್ರ ತರಹದ ಸುಟ್ಟ ಗಾಯಗಳಾಗಿತ್ತು ಎಂದು ತಿಳಿದು ಬಂದಿದೆ.