ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನ ದೇಶಕ್ಕೆ ತುಂಬಲಾರದ ನಷ್ಟ: ಜನಾರ್ದನ ಪೂಜಾರಿ
Update: 2024-12-27 16:02 GMT
ಮಂಗಳೂರು: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನ ದೇಶಕ್ಕೆ ದೊಡ್ಡ ನಷ್ಟ ಎಂದು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಸಂತಾಪ ಸೂಚಿಸಿದ್ದಾರೆ.
ಭಾರತ ಸರಕಾರದ ಹಣಕಾಸು ಇಲಾಖೆಯ ಸಲಹೆಗಾರರಾಗಿ, ರಿಸರ್ವ್ ಬ್ಯಾಂಕ್ ಗವರ್ನರ್ ರಾಗಿ, ಹಣಕಾಸು ಸಚಿವರಾಗಿ, ಪ್ರಧಾನಿಯಾಗಿ ದೇಶಕ್ಕೆ ಸಲ್ಲಿಸಿದ ಸೇವೆ ಅವಿಸ್ಮರಣೀಯ. ದೇಶದ ಆರ್ಥಿಕತೆಗೆ ಹೊಸ ಚೈತನ್ಯ ತಂದು ಕೊಟ್ಟ ಅವರು ಆರ್ಥಿಕ ಸುಧಾರಣೆಗಳು ಭಾರತಕ್ಕೆ ಜಾಗತಿಕ ಮನ್ನಣೆ ತಂದು ಕೊಟ್ಟಿದೆ. ನಾನು ಅರ್ಥ ಖಾತೆಯ ಸಚಿವನಾಗಿದ್ದಾಗ ಮನಮೋಹನ್ ಸಿಂಗ್ ರವರು ರಿಸರ್ವ್ ಬ್ಯಾಂಕ್ ನ ಗವರ್ನರ್ ಆಗಿದ್ದುಕೊಂಡು ನಮ್ಮ ಒಡನಾಟ ಅತ್ಯುತ್ತಮ ಬಾಂಧವ್ಯ ದಿಂದ ಕೂಡಿತ್ತು. ಯಾವುದೇ ಕೆಲಸದಲ್ಲಿ ಅವರ ಶೃದ್ದೆ ಇತರರಿಗೆ ಮಾದರಿ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.