ದಿ.ಬಿ.ಜಿ. ಮುಹಮ್ಮದ್ ಜನ್ಮ ದಿನಾಚರಣೆ: ಜ.5ರಂದು ಬಿಜಿಎಂ ಆರ್ಟ್ ಟ್ರಸ್ಟ್ ನಿಂದ ಚಿತ್ರಕಲಾ ಸ್ಪರ್ಧೆ
ಮಂಗಳೂರು, ಡಿ.27: ಚಿತ್ರಕಲಾ ಗುರು ದಿ.ಬಿ.ಜಿ.ಮುಹಮ್ಮದ್ ರವರ 104ನೇ ಜನ್ಮ ದಿನಾಚರಣೆ ಪ್ರಯುಕ್ತ ಬಿಜಿಎಂ ಆರ್ಟ್ ಟ್ರಸ್ಟ್ ವತಿಯಿಂದ ಜ.5ರಂದು ನಗರದ ಮಿನಿ ಪುರಭವನದಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಪ್ರೆಸ್ ಕ್ಲಬ್ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಟ್ರಸ್ಟ್ನ ಕಾರ್ಯದರ್ಶಿ ಗಣೇಶ ಸೋಮಯಾಜಿ, ಚಿತ್ರಕಲಾ ಸ್ಪರ್ಧೆಯು ಉಡುಪಿ, ದ.ಕ. ಮತ್ತು ಕಾಸರಗೋಡು ಜಿಲ್ಲೆಯ ಶಾಲಾ ಮಕ್ಕಳಿಗೆ ಬೆಳಗ್ಗೆ 9:30ರಿಂದ 11:30ರ ವರೆಗೆ ನಡೆಯಲಿದೆ ಎಂದರು.
ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 2ರಿಂದ 4ನೇ ತರಗತಿಯವರಿಗೆ ಯಾವುದೇ ವಿಷಯದಲ್ಲಿ, 5ರಿಂದ 7ನೇ ತರಗತಿಯವರಿಗೆ ಸವಿ ನೆನಪು ವಿಷಯದಲ್ಲಿ ಹಾಗೂ 8ರಿಂದ 10ನೇ ತರಗತಿಯವರಿಗೆ ಜಿಲ್ಲೆಯ ಸಂಸ್ಕೃತಿ ಬಗ್ಗೆ ಚಿತ್ರ ರಚಿಸಲು ತಿಳಿಸಲಾಗಿದೆ. ಅದೇ ದಿನ ಬಹುಮಾನ ವಿತರಣೆಯೂ ನಡೆಯಲಿದೆ. ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದನಾ ಪತ್ರ ನೀಡಲಾಗುವುದು.
ಪ್ರತಿ ವಿಭಾಗದಲ್ಲಿ 8 ಮಂದಿ ವಿಜೇತರಂತೆ 24 ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುವುದು. ಆರ್ಟಿಸ್ಟ್ ಕಂಬೈನ್ ನ ಅಧ್ಯಕ್ಷ ಟ್ರೆವರ್ ಪಿಂಟೋ ಸ್ಪರ್ಧೆ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಜಿಲ್ಲಾಧಿಕಾರಿ ಪತ್ನಿ ಎ.ಆರ್. ಅಶ್ವಿನಿ ಮಣಿ ಹಾಗೂ ಪ್ರವಾಸೋದ್ಯಮ ವಿಭಾಗದ ಉಪ ನಿರ್ದೇಶಕರಾದ ರಶ್ಮಿ ಎಸ್.ಆರ್. ಭಾಗವಹಿಸುವರು. ಹಿರಿಯ ಕಲಾವಿದ ಹಾಗೂ ಶೇವ್ಗೂರು ಕಲಾ ಶಾಲೆಯ ಸ್ಥಾಪಕಾಧ್ಯಕ್ಷ ವಿಷ್ಣು ಶೇವ್ ಗೂರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಅಧ್ಯಕ್ಷೆ ನವೀನ ಎನ್. ರೈ, ಪ್ರಸಾದ್ ಆರ್ಟ್ ಗ್ಯಾಲರಿಯ ಉಪಾಧ್ಯಕ್ಷೆ ಆರೂರು ಆಶಾರಾವ್, ಸಂಯೋಜಕ ರಾಜೇಶ್ ಕುಮಾರ್, ಬಿಜಿ ಮುಹಮ್ಮದ್ ರವರ ಪುತ್ರರಾದ ಶಬ್ಬೀರ್ ಅಲಿ ಹಾಗೂ ಸಮೀರ್ ಅಲಿ ಉಪಸ್ಥಿತರಿದ್ದರು.