ಜಮೀನು ಪಾಲು ವಿಚಾರ: ತಮ್ಮನನ್ನು ಕೊಂದ ಆರೋಪಿ ಅಣ್ಣನಿಗೆ ಜೀವಾವಧಿ ಶಿಕ್ಷೆ

Update: 2024-09-20 14:32 GMT

ಮಂಗಳೂರು, ಸೆ.20: ಜಮೀನಿನಲ್ಲಿ ಪಾಲು ಕೇಳಲು ತನ್ನ ಮನೆಗೆ ಬಂದಿದ್ದ ಸ್ವಂತ ತಮ್ಮ ಬಾಳಪ್ಪ ಯಾನೆ ರಾಮನಾಯ್ಕ (35) ಎಂಬವರನ್ನು ಹೊಡೆದು ಕೊಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ನಂದರಬೆಟ್ಟುವಿನ ಐತಪ್ಪ ನಾಯ್ಕ ಯಾನೆ ಪುಟ್ಟು ನಾಯ್ಕ (45)ಎಂಬಾತನಿಗೆ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸುನೀತಾ ಎಸ್.ಜಿ. ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ.

*ಪ್ರಕರಣದ ವಿವರ: 2022ರ ಮೇ 10ರಂದು ನಂದರಬೆಟ್ಟುವಿನಲ್ಲಿ ತನ್ನ ಚಿಕ್ಕಪ್ಪನ ಮನೆಯಲ್ಲಿ ನಡೆಯುತ್ತಿದ್ದ ಪೂಜೆಗೆ ಬಾಳಪ್ಪ ತೆರಳಿದ್ದರು. ಪಕ್ಕದಲ್ಲೇ ಇದ್ದ ತನ್ನ ಕುಟುಂಬದ ಮನೆಯಿದ್ದು, ಅಲ್ಲಿದ್ದ ಅಣ್ಣ ಐತಪ್ಪ ನಾಯ್ಕ ಬಳಿ ಜಮೀನಿನ ಕುರಿತು ಮಾತುಕತೆ ನಡೆದು ಪಾಲಿನ ವಿಷಯ ಪ್ರಸ್ತಾಪವಾಗಿತ್ತು. ಆವಾಗ ಕೋಪಗೊಂಡ ಆರೋಪಿ ಐತಪ್ಪ ನಾಯ್ಕ ಮನೆಯಲ್ಲಿದ್ದ ಮರದ ನೊಗದಿಂದ ಬಾಳಪ್ಪರ ತಲೆ ಮತ್ತು ದೇಹದ ಇತರ ಭಾಗಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಗಂಭೀರ ಗಾಯಗೊಂಡಿದ್ದ ಬಾಳಪ್ಪ ಸ್ಥಳದಲ್ಲೇ ಮೃತಪಟ್ಟಿದ್ದರು.

ಅಂದಿನ ವಿಟ್ಲ ಠಾಣೆಯ ಇನ್‌ಸ್ಪೆಕ್ಟರ್ ನಾಗರಾಜ್ ಎಚ್.ಇ. ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಒಟ್ಟು 17 ಮಂದಿ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿತ್ತು. ಆ ಪೈಕಿ ಮರಣೋತ್ತರ ಪರೀಕ್ಷೆ ನಡೆಸಿದ್ದ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಡಾ. ವರ್ಷಾ ಎ.ಶೆಟ್ಟಿ ಹಾಗೂ ಎಫ್‌ಎಸ್‌ಎಲ್ ಅಧಿಕಾರಿ ಡಾ.ಗೀತಾಲಕ್ಷ್ಮೀ ಅವರ ಸಾಕ್ಷ್ಯ ಪ್ರಮುಖವಾಗಿತ್ತು.

ನ್ಯಾಯಾಧೀಶೆ ಸುನೀತಾ ಎಸ್.ಜಿ. ಆರೋಪಿಗೆ ಜೀವಾವಧಿ ಶಿಕ್ಷೆಯಲ್ಲದೆ 50,000 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದರೆ 3 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ 10,000 ರೂ.ವನ್ನು ಸರಕಾರಕ್ಕೆ, ಉಳಿದ ಮೊತ್ತವನ್ನು ಕೊಲೆಯಾದ ಬಾಳಪ್ಪರ ತಾಯಿಗೆ ನೀಡುವಂತೆ ಆದೇಶಿಸಿದ್ದಾರೆ. ಅಲ್ಲದೆ ಬಾಳಪ್ಪರ ತಾಯಿಗೆ ಗರಿಷ್ಠ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶಿಸಿದ್ದಾರೆ.

ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕ ಹರೀಶ್ಚಂದ್ರ ಉದಿಯಾವರ್ ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News