ಹೆತ್ತವರು, ಪೋಷಕರು ಮಕ್ಕಳ ಮೇಲೆ ನಿಗಾ ಇರಿಸಬೇಕು: ಸ್ಪೀಕರ್ ಯು.ಟಿ.ಖಾದರ್

Update: 2024-11-14 14:16 GMT

ಮಂಗಳೂರು: ಮಾದಕ ದ್ರವ್ಯ ವ್ಯಸನದಿಂದ ಮುಕ್ತರಾಗುವುದು ಸುಲಭದ ಮಾತಲ್ಲ. ಯಾಕೆಂದರೆ ಜಿಲ್ಲೆಯಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಟ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಹಾಗಾಗಿ ಇದನ್ನು ತಡೆಯಲು ಸಮಾಜದ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು. ಹೆತ್ತವರು, ಮನೆಯವರು ಮಕ್ಕಳ ಮೇಲೆ ನಿಗಾ ಇರಿಸಬೇಕು. ಪೊಲೀಸ್ ಇಲಾಖೆ ಯಲ್ಲಿ ಟೆಸ್ಟಿಂಗ್ ಕಿಟ್ ಲಭ್ಯವಿದ್ದು, ಅದನ್ನು ಮನೆಯಲ್ಲಿಟ್ಟು ತಿಂಗಳಿಗೊಮ್ಮೆ ಪರೀಕ್ಷೆ ಮಾಡಬಹುದಾಗಿದೆ ಎಂದು ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ದ.ಕ.ಜಿಲ್ಲಾಡಳಿತ, ಬಂಟರ ಯಾನೆ ನಾಡವರ ಮಾತೃ ಸಂಘ, ಮಂಗಳೂರು ತಾಲೂಕು ಸಮಿತಿ, ಮಹಿಳಾ ಘಟಕ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರ ಹಾಗೂ ಎಲ್ಲಾ ಶಾಲಾ ಕಾಲೇಜು ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಎಸ್‌ಡಿಎಂ ಕಾನೂನು ಕಾಲೇಜು ಸಭಾಂಗಣದಲ್ಲಿ ಗುರುವಾರ ಮಾದಕ ದ್ರವ್ಯ ವ್ಯಸನಮುಕ್ತ ಮಂಗಳೂರು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ ಪ್ರತೀ ಕಾಲೇಜಿನಲ್ಲಿ ಮಾದಕ ದ್ರವ್ಯದ ಬಗ್ಗೆ ಪರೀಕ್ಷೆ ನಡೆಸಿದಾಗ ಮಕ್ಕಳು ಮಾದಕ ದ್ರವ್ಯ ಸೇವಿಸಲು ಭಯ ಪಡುತ್ತಾರೆ. ಇದರಿಂದ ಸ್ವಸ್ಥ ಸಮಾಜವನ್ನು ಸೃಷ್ಟಿಸಲು ಸಾಧ್ಯವಿದೆ ಎಂದರು.

ದ.ಕ. ಜಿಲ್ಲಾ ಸಂಸದ ಬೃಜೇಶ್ ಚೌಟ ಮಾತನಾಡಿ ಮಾದಕ ದ್ರವ್ಯ ಮುಕ್ತ ಸಮಾಜದ ನಿರ್ಮಾಣ ಎಲ್ಲರ ಬೇಡಿಕೆಯೂ ಹೌದು. ನಾನು ಮೊದಲ ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದೆ. ಇಂದು ಪಂಜಾಬ್ ರಾಜ್ಯವನ್ನು ಡ್ರಗ್ಸ್ ದಂಧೆ ಬೆಂಬಿಡದೆ ಕಾಡುತ್ತಿದೆ. ಗಡಿಯಲ್ಲಿರುವ ಸೈನಿಕನಷ್ಟೇ ದೇಶವನ್ನು ಉಳಿಸುವ ಜವಾಬ್ದಾರಿಯು ಈ ಮಾದಕ ದ್ರವ್ಯ ವ್ಯಸನದ ವಿರುದ್ಧ ಹೋರಾಡುವವರದ್ದಾಗಿದೆ ಎಂದರು.

ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ ದೇಶವನ್ನು ನಾಶ ಮಾಡುವ ಷಡ್ಯಂತ್ರ ಮಾದಕ ದ್ರವ್ಯ ವ್ಯಸನದಿಂದ ನಡೆ ಯುತ್ತಿದೆ. ಇದನ್ನು ತಡೆಯಲು ಮನೆ ಮತ್ತು ಸಮಾಜದಲ್ಲಿ ಜಾಗೃತಿಯಾಗಬೇಕು. ಮಾದಕ ದ್ರವ್ಯ ಸೇವನೆ, ಮಾರಾಟ ಕುರಿತು ಮಾಹಿತಿ ಇದ್ದಲ್ಲಿ ಸಂಬಂಧಪಟ್ಟವರಿಗೆ ನೀಡಬೇಕು. ಎಲ್ಲರೂ ಒಗ್ಗಟ್ಟಾಗಿ ಇದರ ವಿರುದ್ಧ ಹೋರಾಡಬೇಕು ಎಂದರು.

ಮಂಗಳೂರು ಮೇಯರ್ ಮನೋಜ್ ಕುಮಾರ್, ಬಂಟರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿ ಸಂಚಾಲಕ ವಸಂತ ಶೆಟ್ಟಿ, ಮಂಗಳೂರು ಪಾಲಿಕೆಯ ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ, ಸುಧೀರ್ ಶೆಟ್ಟಿ ಕಣ್ಣೂರು, ಆಶಾಜ್ಯೋತಿ ರೈ, ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಟ್ರಾಫಿಕ್ ಎಸಿಪಿ ನಜ್ಮಾ ಫಾರೂಕಿ, ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ತಾರಾನಾಥ, ತಪಸ್ಯ ಫೌಂಡೇಶನ್ ಅಧ್ಯಕ್ಷೆ ಸಬಿತಾ ಆರ್. ಶೆಟ್ಟಿ, ಎಕ್ಕಾರ್ ರತ್ನಾಕರ್ ಶೆಟ್ಟಿ, ವೃಂದಾ ಹೆಗ್ಡೆ, ಮಾನಸ ರೈ, ಭಾರತಿ ಶೆಟ್ಟಿ, ಪುಷ್ಪರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News