ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಸೇರಿ 5 ಮಂದಿಯ ಮೊಬೈಲ್ ಹ್ಯಾಕ್
ಸುರತ್ಕಲ್: ಬುಧವಾರ ಒಂದೇ ದಿನ ಏಕಕಾಲದಲ್ಲಿ ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷರು ಸೇರಿ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಿಗಳ ಸಂಘದ ಐದು ಮಂದಿ ಪದಾಧಿಕಾರಿಗಳ ಮೊಬೈಲ್, ವಾಟ್ಸಾಪ್ ನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿರುವುದು ಬೆಳಕಿಗೆ ಬಂದಿದೆ.
ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಹಾಗೂ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಅಧ್ಯಕ್ಷ ಮುಝಫ್ಫರ್, ಉಪಾಧ್ಯಕ್ಷ ವಿಜಯ, ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್. ಎಸ್., ಮತ್ತು ಕೋಶಾಧಿಕಾರಿ ಹಂಝ ಅವರ ಮೊಬೈಲ್ ಮತ್ತು ವಾಟ್ಸಾಪ್ ನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ ಎಂದು ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಬೀದಿಬದಿ ವ್ಯಾಪಾರಿಗಳ ನಡುವೆ ವೈಮನಸ್ಸು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸಂಘದ ನಿಯಮಗಳನ್ನು ಪಾಲಿಸದಿದ್ದ ಕಾರಣಕ್ಕಾಗಿ ಕೆಲವರನ್ನು ಸಂಘದಿಂದ ಹೊರಗಿಡಲಾಗಿತ್ತು. ಇವರೊಂದಿಗೆ ರಾಜಕೀಯ ಪಕ್ಷವೊಂದರ ಮುಖಂಡರು ಸೇರಿಕೊಂಡು ಬೀದಿಬದಿ ವ್ಯಾಪಾರಿಗಳ ಸಂಘದಲ್ಲಿ ತಗಾದೆ ತೆಗೆದಿದ್ದರು. ಈ ವೈಷಮ್ಯದ ಕಾರಣಕ್ಕಾಗಿಯೇ ಈ ಹ್ಯಾಕಿಂಗ್ ನಡೆದಿರುವ ಸಾಧ್ಯತೆಗಳಿವೆ ಎಂದು ದೂರಿರುವ ವ್ಯಾಪಾರಿಗಳು, ಇದನ್ನು ಸ್ಥಳೀಯ ದುಷ್ಕರ್ಮಿಗಳು ಮಾಡಿರುವ ಶಂಕೆ ಇದೆ ಎಂದೂ ಹೇಳಿದ್ದಾರೆ.
"ನಾವು ಹಣವಂತರಲ್ಲ. ರಾಜಕಾರಣಿಗಳಂತೆ ನಮ್ಮ ಬಳಿ ಪೆನ್ ಡ್ರೈವ್ ಗಳಿಲ್ಲ. ನಾವು ಹೇಳಿಕೇಳಿ ಬೀದಿಬದಿಯಲ್ಲಿ ವ್ಯಾಪಾರ ಮಾಡಿ ದಿನದೂಡುವವರು. ಹೀಗಿರುವಾಗ ನಮ್ಮ ಮೊಬೈಲ್, ವಾಟ್ಸಾಪ್ ಹ್ಯಾಕ್ ಮಾಡುತ್ತಾರೆ ಎಂದರೆ ಏನರ್ಥ" ಎಂದು ಸಂತ್ರಸ್ತರೊಬ್ಬರು ಹೇಳಿದ್ದಾರೆ.