ಮೀಫ್ ವತಿಯಿಂದ ದ.ಕ, ಉಡುಪಿ ಜಿಲ್ಲಾ ಅಥ್ಲೆಟಿಕ್ ಮೀಟ್; ಅಲ್ ಫುರ್ಖಾನ್ ಮೂಡಬಿದ್ರೆ ಚಾಂಪಿಯನ್
ಮಂಗಳೂರು, ನ.14: ದ.ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್ ) ಸಹಯೋಗದೊಂದಿಗೆ ಅಲ್- ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಮೂಡಬಿದ್ರೆ ಸ್ವರಾಜ್ ಮೈದಾನದಲ್ಲಿ ಬುಧವಾರ ನಡೆದ ದ.ಕ ಮತ್ತು ಉಡುಪಿ ಜಿಲ್ಲಾ ಮಟ್ಟದ ಮೀಫ್ ಅಥ್ಲೆಟಿಕ್ ಮೀಟ್ನಲ್ಲಿ ಅಲ್ ಫುರ್ಖಾನ್ ಮೂಡಬಿದ್ರೆ ಚಾಂಪಿಯನ್ ಮತ್ತು ಚೈತನ್ಯ ಕೃಷ್ಣಾಪುರ ಎರಡನೇ ಸ್ಥಾನವನ್ನು ಪಡೆದಿದೆ.
ನಮ್ಮ ನಾಡ ಒಕ್ಕೂಟ ಮೂಡಬಿದ್ರೆ ಇದರ ಅಧ್ಯಕ್ಷ ಮೊಹಮ್ಮದ್ ಸಲೀಮ್ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಆಳ್ವಾಸ್ ಹೆಲ್ತ್ ಸೆಂಟರ್ ಮೂಡಬಿದ್ರೆ ಇದರ ವೈದ್ಯಕೀಯ ನಿರ್ದೇಶಕ ಡಾ. ವಿನಯ್ ಆಳ್ವ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಮೀಫ್ ಪ್ರ. ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ. ಬಿ ಸ್ವಾಗತಿಸಿದರು. ಪೂರ್ವ ವಲಯ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಸುಳ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲ್ ಫುರ್ಖಾನ್ ಶಿಕ್ಷಕ ನಾಸಿರ್ ಕಾರ್ಯಕ್ರಮ ನಿರೂಪಿಸಿದರು.
ಪಂದ್ಯಾಕೂಟದ ಪ್ರಾಯೋಜಕತ್ವವನ್ನು ಅಲ್ ಫುರ್ಖಾನ್ ವಿದ್ಯಾ ಸಂಸ್ಥೆ ಮೂಡಬಿದ್ರೆ ನಿರ್ವಹಿಸಿದ್ದು, ಇದರ ಉಸ್ತುವಾರಿಯನ್ನು ಸಂಸ್ಥೆಯ ಆಡಳಿತಾಧಿಕಾರಿ ಮೊಹಮ್ಮದ್ ಶಹಾಮ್ ವಹಿಸಿದ್ದರು.
ವೇದಿಕೆಯಲ್ಲಿ ಅಲ್ ಫುರ್ಖಾನ್ ವಿದ್ಯಾ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಮೊಹಮ್ಮದ್ ಅಶ್ಫಾಖ್, ಅಬ್ದುಲ್ ರಹ್ಮಾನ್ ಹಾಸ್ಕೋ, ಮೀಫ್ ಕಾರ್ಯಕ್ರಮ ಕಾರ್ಯದರ್ಶಿ ಮುಹಮ್ಮದ್ ಶಾರಿಕ್, ಸದಸ್ಯರಾದ ಪರ್ವೇಝ್ ಅಲಿ, ಶೇಖ್ ರಹ್ಮತುಲ್ಲಾಹ್, ರಝಾಕ್ ಹಜಾಜ್, ಅಲ್ ಫುರ್ಖಾನ್ ವಿದ್ಯಾ ಸಂಸ್ಥೆ ದೈಹಿಕ ಶಿಕ್ಷಕ ಸಫ್ವಾನ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಚಾಂಪಿಯನ್ ಶಿಪ್ ಟ್ರೋಫಿ, ಪದಕ, ಪ್ರಶಸ್ತಿ ಪತ್ರ ಹಾಗೂ ವೈಯುಕ್ತಿಕ ಪ್ರಶಸ್ತಿಗಳನ್ನು ವಿತರಿಸಲಾಯಿತು. ಉಭಯ ಜಿಲ್ಲೆಗಳ ಒಟ್ಟು 23 ವಿದ್ಯಾ ಸಂಸ್ಥೆಗಳ 200 ರಷ್ಟು ಕ್ರೀಡಾಪಟುಗಳು ಭಾಗವಹಿಸಿದ್ದರು.
ಪಂದ್ಯಾಟದ ಫಲಿತಾಂಶ: ಸಮಗ್ರ ಪ್ರಶಸ್ತಿ:ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆ ಮೂಡಬಿದ್ರೆ. ದ್ವಿತೀಯ ಸ್ಥಾನ ಚೈತನ್ಯ ಆಂಗ್ಲ ಮಾಧ್ಯಮ ಶಾಲೆ ಕೃಷ್ಣಾಪುರ