ನಕಲಿ ಚಿನ್ನ ನೀಡಿ ವಂಚನೆ ಆರೋಪ: ಪ್ರಕರಣ ದಾಖಲು
ಮಂಗಳೂರು, ನ.14: ಹೊಲದಲ್ಲಿ ಸಿಕ್ಕಿದ ಚಿನ್ನದ ಬಿಸ್ಕೆಟ್ ಎಂದು ನಂಬಿಸಿ, ವ್ಯಕ್ತಿಯೊಬ್ಬರಿಂದ 4 ಲಕ್ಷ ರೂ. ಪಡೆದು ನಕಲಿ ಚಿನ್ನವನ್ನು ನೀಡಿ ವಂಚಿಸಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಳ್ಳೂರು ಮೂಲದ ಪ್ರಸ್ತುತ ಅಶೋಕನಗರ ರಂಗಪ್ಪ ಬೋವಿ ನೆಕ್ಕಿಲ್ ವಂಚನೆಗೊಳಗಾದ ಸಂತ್ರಸ್ತರು.
ಅಪರಿಚಿತ ವ್ಯಕ್ತಿಯೊಬ್ಬ ತನಗೆ ಕರೆ ಮಾಡಿ ನಮಗೆ ಜಮೀನಲ್ಲಿ ಚಿನ್ನದ ಬಿಸ್ಕೆಟ್ ಸಿಕ್ಕಿದೆ. 10 ಲಕ್ಷ ರೂ. ಗೆ ನೀಡುತ್ತೇನೆ ಎಂದು ತಿಳಿಸಿದ್ದ. ಅಲ್ಲದೆ ಆ ಮಧ್ಯಾಹ್ನ ತನ್ನ ಹೆಂಡತಿಯೊಂದಿಗೆ ನನ್ನ ಮನೆಗೆ ಬಂದಿದ್ದು, ಮಾತುಕತೆ ವೇಳೆ 8 ಲಕ್ಷ ರೂ.ಗೆ ನೀಡುವುದಾಗಿ ಹೇಳಿದ. ಚಿನ್ನದ ಅಸಲಿಯತ್ತು ತಿಳಿದುಕೊಳ್ಳಲು 05 ಮಿ.ಗ್ರಾಂ. ಚಿನ್ನವನ್ನು ತನಗೆ ನೀಡಿದ್ದ. ಬಳಿಕ ನನಗೆ ಹಣದ ಅವಶ್ಯಕತೆ ಇದೆ. 4 ಲಕ್ಷ ರೂ. ನೀಡಿದರೆ ಚಿನ್ನ ನೀಡುತ್ತೇನೆ ಎಂದಿದ್ದ. ಅದರಂತೆ ತಾನು 4 ಲಕ್ಷ ರೂ. ನೀಡಿ ಚಿನ್ನ ಪಡೆದಿದ್ದೆ. ಬಳಿಕ ಪರಿಶೀಲಿಸಿದಾಗ ಅದು ನಕಲಿ ಚಿನ್ನ ಎನ್ನುವುದು ತಿಳಿಯಿತು ಎಂದು ರಂಗಪ್ಪ ಬೋವಿ ನೆಕ್ಕಿಲ್ ಕಾವೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.