ಸ್ವ ಸಹಾಯ ಸಂಘಗಳ ಲಾಭಾಂಶ ವಿತರಣೆ ಗ್ರಾಮೀಣ ಮಹಿಳಾ ಸಶಕ್ತತೆಯಲ್ಲಿ ಮಹತ್ವದ ಹೆಜ್ಜೆ: ನಿರ್ಮಲಾ ಸೀತಾರಾಮನ್
ಧರ್ಮಸ್ಥಳ,ನ.14: ಸ್ವ ಸಹಾಯ ಸಂಘಗಳ ಲಾಭಾಂಶ ವಿತರಣೆ ಮಹಿಳಾ ಸಶಕ್ತತೆ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ದೇಶಕ್ಕೆ ಮಾದರಿಯಾಗಿದೆ ಎಂದು ಕೇಂದ್ರ ಹಣ ಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್ (ರಿ) ಇದರ ಸ್ವ ಸಹಾಯ ಸಂಘಗಳ ಸದಸ್ಯರಿಗೆ 605 ಕೋಟಿ ರೂ ಲಾಭಾಂಶ ವಿತರಣಾ ಕಾರ್ಯಕ್ರಮವನ್ನು ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ಗುರುವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ದೇಶದಲ್ಲಿ ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಶಕ್ತತೆ, ಗ್ರಾಮೀಣಾಭಿವೃದ್ಧಿ ಮತ್ತು ಬಡತನ ನಿರ್ಮೂಲನೆಗೊಳಿಸಲು ಸಾಧ್ಯವಾಗಿದೆ. ಎಸ್ ಕೆಡಿಆರ್ ಡಿಪಿ ಸರಕಾರದ ಹಲವು ಪೈಲಟ್ ಯೋಜನೆಗಳನ್ನು ಅನುಷ್ಠಾನ ಗೊಳಿಸಿರುವ ಕಾರಣ ಸಾಧಕ ಬಾಧಕಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿದೆ. ಇದರಿಂದಾಗಿ ಸರಕಾರದ ಹಲವು ಯೋಜನೆಗಳನ್ನು ಇತರ ಕಡೆ ಸಮರ್ಪಕವಾಗಿ ಜಾರಿ ಮಾಡಲು ಸಾಧ್ಯವಾಗಿದೆ. ಈ ಕೆಲಸ ಗ್ರಾಮೀಣ ಪ್ರದೇಶಗಳಲ್ಲಿ ಸ್ವ ಸಹಾಯ ಸಂಘಗಳ ಮೂಲಕ ಮಾಡಲು ಸಾಧ್ಯ. ಶ್ರೀ ಕ್ಷೇತ್ರ ಧರ್ಮ ಸ್ಥಳದ ಮೂಲಕ ಹಲವು ದಶಕಗಳಿಂದ ಮಾಡುತ್ತಿರುವ ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳು ಜೊತೆಗೆ ಸ್ವ ಸಹಾಯ ಸಂಘಗಳ ಸ್ಥಾಪನೆ ಇದೀಗ ಲಾಭಾಂಶ ವಿತರಣೆ ದೇಶಕ್ಕೆ ಮಾದರಿಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಶ್ಲಾಘಿಸಿದರು.
ದೇಶದಲ್ಲಿ ರೈತರಿಗೆ ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರಕಬೇಕಾದರೆ ಅವರ ಉತ್ಪನ್ನಗಳನ್ನು ದಾಸ್ತಾನು ಮಾಡಲು ಗೋದಾಮುಗಳ ಅಗತ್ಯವಿದೆ. ಈ ರೀತಿ ರೈತರ ಉತ್ಪನ್ನ ದಾಸ್ತಾನು ಮಾಡಲು ಗ್ರಾಮೀಣ ಪ್ರದೇಶಗಳಲ್ಲಿ ಗೋದಾಮು ನಿರ್ಮಾಣ ಮಾಡಲು ಸರಕಾರ ನೆರವು ನೀಡಲು ಬಜೆಟ್ ನಲ್ಲಿ ಅನುದಾನ ಇಡಲಾಗಿದೆ. ಇದರಿಂದ ಮಾರುಕಟ್ಟೆ ಯಲ್ಲಿ ರೈತರ ಉತ್ಪನ್ನ ಗಳಿಗೆ ಬೆಲೆ ಕುಸಿತವಾದಾಗ ರೈತರಿಗೆ ನಷ್ಟವಾ ಗುವುದನ್ನು ತಪ್ಪಿಸಲು ಸಾಧ್ಯ ಎಂದರು.
ದೇಶದಲ್ಲಿ ನಬಾರ್ಡ್, ಎಸ್ ಕೆಡಿಆರ್ ಡಿಪಿ ಕಾರ್ಯಕ್ರಮಗಳು ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಗ್ರಾಮೀಣ ಅಭಿವೃದ್ಧಿಯಲ್ಲಿ ಮಹಿಳಾ ಭಾಗವಹಿಸುವಿಕೆ ಹೆಚ್ಚಿದೆ. ದೇಶದಲ್ಲಿ ಸ್ವಾತಂತ್ರ್ಯ ನಂತರ ಆಹಾರ ಧಾನ್ಯ ಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧನೆ ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಎಸ್ ಕೆಡಿಅರ್ ಡಿಪಿ ಯಂತಹ ಸಂಸ್ಥೆಗಳು ಸೇರಿದಂತೆ ದೇಶದ ಸಾರ್ವಜನಿಕ, ಖಾಸಗಿ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸ್ವ ಸಹಾಯ ಸಂಘಗಳಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಹೆಚ್ಚಿದೆ. ಒಟ್ಟು 55ಲಕ್ಷ ಸ್ವ ಸಹಾಯ ಸಂಘದ ಸದಸ್ಯರಲ್ಲಿ 34ಲಕ್ಷ ಮಹಿಳಾ ಸದಸ್ಯರು ಅಂದರೆ ಒಟ್ಟು ಸದಸ್ಯರಲ್ಲಿ ಶೇ. 62 ರಷ್ಟು ಮಹಿಳಾ ಸದಸ್ಯರಿದ್ದಾರೆ.
ಪುರುಷರ ಸ್ವ ಸಹಾಯ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಎಸ್ ಕೆ ಡಿಆರ್ ಡಿಪಿ ಗೆ ಬ್ಯಾಂಕ್ ಗಳ ಮೂಲಕ 24,500 ಕೋಟಿ ಸಾಲ ಪಡೆದು ಸ್ವ ಸಹಾಯ ಸಂಘಗಳಿಗೆ ನೀಡಲಾಗಿದೆ.ಸ್ವ ಸಹಾಯ ಸಂಘದ ಸದಸ್ಯರು ತಮ್ಮ ಉಳಿತಾಯ ಸಾಲದ ಹಣವನ್ನು ಮಕ್ಕಳ ಶಿಕ್ಷಣ, ಕೃಷಿ ಇತರ ಚಟುವಟಿಕೆ ಗಳಿಗೆ ಬಳಕೆ ಮಾಡಿ ಬ್ಯಾಂಕ್ ನ ಸಾಲವನ್ನು ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಲಾಭಾಂಶವನ್ನು ಪಡೆಯಲು ಸಾಧ್ಯವಾಗಿದೆ ಇದು ದೇಶದಲ್ಲಿ ಪ್ರಥಮ. ಈ ನಿಟ್ಟಿನಲ್ಲಿ ಸಹಕಾರ ನೀಡಿದ ಕೇಂದ್ರ ಸರಕಾರದ ಸಚಿವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಮತ್ತು ಸ್ವಸಹಾಯ ಸಂಘಗಳ ಸದಸ್ಯರನ್ನು ಅಭಿನಂಧಿಸುವುದಾಗಿ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.
ಮುಖ್ಯ ಅತಿಥಿಗಳಾಗಿ ನಬಾರ್ಡ್ ಅಧ್ಯಕ್ಷ ಶಾಜಿ ಕೆ.ವಿ ಅವರು ಮಾತನಾಡುತ್ತಾ, ಸ್ವ ಸಹಾಯ ಸಂಘಗಳಿಗೆ 600 ಕೋಟಿಗೂ ಅಧಿಕ ಲಾಭಾಂಶವನ್ನು ಎಸ್ ಕೆಡಿಆರ್ ಡಿ ಪಿ ವಿತರಿಸಿರುವುದು ದೇಶಕ್ಕೆ ಮಾದರಿ. ಭಾರತ ಸರಕಾರದ ಹಲವಾರು ಯೋಜನೆಗಳನ್ನು ಅನುಷ್ಠಾನ ಗೊಳಿಸಿರುವ ಮೂಲಕ ಈ ಸಂಸ್ಥೆ ಸರಕಾರದ ಪಾಲುದಾರ ಸಂಸ್ಥೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ದೇಶದಲ್ಲಿ ಸ್ವ ಸಹಾಯ ಸಂಸ್ಥೆಗಳ ಮೂಲಕ ಶೇ 50ರಷ್ಟು ಗ್ರಾಮೀಣ ಭಾಗದ ಜನರನ್ನು ತಲುಪಲು ಸಾಧ್ಯವಾಗಿದೆ ಎಂದರು.
ಎಸ್ ಕೆಡಿಆರ್ ಡಿಪಿ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಹೇಮಾವತಿ ವೀ.ಹೆಗ್ಗಡೆ , ದ.ಕ ಲೋಕಸ ಭಾ ಸದಸ್ಯ ಕ್ಯಾ.ಬೃಜೇಶ್ ಚೌಟ,ಶಾಸಕ ಹರೀಶ್ ಪೂಂಜ,ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಸ್ವಾಗತಿಸಿದರು.ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ವಂದಿಸಿದರು. ಶಾಂತಾರಾಮ ಪೈ,ಪ್ರವೀಣ್ ಎಂ.ಸಿ ಕಾರ್ಯಕ್ರಮ ನಿರೂಪಿಸಿದರು.