ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ: ಲಕ್ಷಾಂತರ ರೂ. ಕಳೆದುಕೊಂಡ ಸಂತ್ರಸ್ತರ ಅಳಲು, ದೂರು
ಮಂಗಳೂರು, ನ. 8: ನಗರದ ಕಂಕನಾಡಿಯಲ್ಲಿ ಸಂಸ್ಥೆಯನ್ನು ಹೊಂದಿರುವ ವೀಸಾ ಏಜೆಂಟರೊಬ್ಬರು ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ. ಪಡೆದು ವೀಸಾ ಕೊಡಿಸದೆ, ಹಣವನ್ನೂ ವಾಪಸ್ ನೀಡದೆ ಕಳೆದ ಮೂರು ವರ್ಷಗಳಿಂದೀಚೆಗೆ ವಂಚನೆ ಮಾಡಿರುವುದಾಗಿ ಸಂತ್ರಸ್ತರು ಆರೋಪಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ತುಳುನಾಡ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಸುದ್ದಿಗೋಷ್ಠಿಯಲ್ಲಿ ವೀಸಾ ವಂಚನೆ ಕುರಿತಂತೆ ಆರೋಪ ಮಾಡಿದ ಸಂತ್ರಸ್ತ ಜೈಸನ್ ಡಿಸೋಜ, ಮೂರು ವರ್ಷಗಳ ಹಿಂದೆ ಪತ್ನಿ ಹಾಗೂ ತನಗೆ ಯುರೋಪ್ ದೇಶದಲ್ಲಿ ಉದ್ಯೋಗದ ಭರವಸೆಯೊಂದಿಗೆ ವೀಸಕ್ಕಾಗಿ 8.5 ಲಕ್ಷ ರೂ.ನ್ನು ಆಲ್ವಿನ್ ಡಿಮೆಲ್ಲೋ ಎಂಬವರಿಗೆ ನೀಡಿರುವುದಾಗಿ ಹೇಳಿದರು.
ಕೆಲಸ ಸಿಗದಿದ್ದರೆ ಹಣ ವಾಪಸ್ ನೀಡುವ ಭರವಸೆ ಮೇರೆಗೆ ಹಣ ಪಾವತಿಸಲಾಗಿತ್ತು. ಆದರೆ, ಕಳೆದ ಮೂರು ವರ್ಷಗಳಿಂದಲೂ ವೀಸಾ ಇನ್ನೆರಡು ತಿಂಗಳಲ್ಲಿ ಬರಲಿದೆ ಎಂದು ಹೇಳುತ್ತಾ ಬಂದಿದ್ದಾರೆ. ಕೊನೆಗೆ ಹಣ ವಾಪಸ್ ಕೇಳಿದರೆ, ಮಾನಸಿಕ ಒತ್ತಡದ ಮೂಲಕ ದೂರು ನೀಡದಂತೆ ತಡೆಯೊಡ್ಡಿದ್ದಾರೆ ಎಂದು ಜೈಸನ್ ಆರೋಪಿಸಿದ್ದಾರೆ.
ಇನ್ನೋರ್ವ ಸಂತ್ರಸ್ತ ಬ್ರಾಂಡನ್ ಪಿಂಟೋ ತಮ್ಮ ನೋವು ತೋಡಿಕೊಳ್ಳುತ್ತಾ, ದುಬೈನಲ್ಲಿ ಉದ್ಯೋಗಕ್ಕಾಗಿ 2022ರ ಜನವರಿಯಲ್ಲಿ 1,30,000 ರೂ.ಗಳನ್ನು ಪಾವತಿಸಿದ್ದೆ. ವೀಸಾ ಒಂದೆರಡು ತಿಂಗಳಲ್ಲಿ ಸಿಗಲಿದೆ ಎಂದು ಹೇಳುತ್ತಾ ಬಂದಿದ್ದು, 2022ರ ಸೆಪ್ಟಂಬರ್ನಲ್ಲಿ ದುಬೈಗೆ ಕಳುಹಿಸುವ ಭರವಸೆಯೂ ದೊರಕಿತ್ತು. 2023ರ ಫೆಬ್ರವರಿ ತಿಂಗಳಲ್ಲಿ ನೇಮಕಾತಿ ಆದೇಶವಾಗಿದೆ. ಜೂನ್, ಜುಲೈನಲ್ಲಿ ವೀಸಾ ಬರಲಿದೆ. ಆಗಸ್ಟ್ನಲ್ಲಿ ದುಬೈಗೆ ನೀವೆಲ್ಲಾ ಹಾರಲಿದ್ದೀರಿ ಎಂದು ಹೇಳಿ ತಮ್ಮ ಕಚೇರಿಯಲ್ಲಿ ನನ್ನಂತೆ 30 ಮಂದಿಗೆ ತರಬೇತಿಯನ್ನು ನೀಡಲಾಗಿತ್ತು. ಅದೂ ನೆರವೇರದಾಗ ನಮ್ಮ ಹಣ ವಾಪಸ್ ಕೊಡುವಂತೆ ಕೇಳಿದರೆ ದೇವರಿದ್ದಾನೆ ಎಂಬ ದೇವರ ವಾಕ್ಯಗಳನ್ನು ವಾಟ್ಸ್ ಆ್ಯಪ್ ಮೆಸೇಜ್ ಮೂಲಕ ಕಳುಹಿಸುತ್ತಾ ಮರುಳು ಮಾಡಲಾಗಿದೆ ಎಂದು ದೂರಿದರು.
ಗೋವಾದಲ್ಲಿ ನೆಲೆಸಿರುವ ಅನಿತಾ ಎಂಬ ಸಂತ್ರಸ್ತೆ ಮಾತನಾಡಿ, ದುಬೈನಲ್ಲಿ ಕಚೇರಿ ಉದ್ಯೋಗಕ್ಕಾಗಿ 75,000 ರೂ.ಗಳನ್ನು ಎರಡು ವರ್ಷಗಳ ಹಿಂದೆ ಪಾವತಿಸಿದ್ದೆ. ಆದರೆ ಉದ್ಯೋಗ ದೊರಕಿಲ್ಲ. ಹಣವೂ ವಾಪಸ್ ನೀಡಿಲ್ಲ ಎಂದು ದೂರಿದರು.
ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಮಾತನಾಡಿ, ಕಂಕನಾಡಿಯ ಲೆಜೆಂಡ್ ಐ.ಇ.ಎಲ್.ಟಿ.ಎಸ್. ಸಂಸ್ಥೆಯ ಆಲ್ವಿನ್ ಡಿಮೆಲ್ಲೋ ಎಂಬಾತ ಹಲವು ಮಂದಿಗೆ ಈ ರೀತಿ ಮೋಸ ಮಾಡಿದ್ದು, ಸುಮಾರು 60 ಮಂದಿ ನಮ್ಮ ಸಂಪರ್ಕದಲ್ಲಿದ್ದಾರೆ. ಆ ಸಂತ್ರಸ್ತರಿಗೆ ಆಗಿರುವ ಅನ್ಯಾಯದ ಬಗ್ಗೆ ಅವರ ಮನವಿಯ ಮೇರೆಗೆ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಸಂತ್ರಸ್ತರ ಪರ ಮನವಿ ಸಲ್ಲಿಸಲಾಗಿದೆ ಎಂದರು.
ಬೆಂಗಳೂರಿನ ನಿವಾಸಿ ಸ್ಟೀಫನ್ ಎಸ್. ಎಂಬವರು ಇದೇ ವೀಸಾ ಕೊಡಿಸುವ ಸಂಸ್ಥೆಯ ವಿರುದ್ಧ 2022ರ ಆಗಸ್ಟ್ನಲ್ಲಿ ನೀಡಿದ್ದ ದೂರಿನ ಮೇರೆಗೆ ಸ್ಪಂದಿಸಿರುವ ಭಾರತ ಸರಕಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧೀನದ ಬೆಂಗಳೂರಿನ ವಲಸಿಗರ ಸಂರಕ್ಷಕ (ಪ್ರೊಟೆಕ್ಟರ್ ಆಫ್ ಇಮಿಗ್ರೆಂಟ್) ಅಧಿಕಾರಿ ಅವನೀಶ್ ಶುಕ್ಲಾ, ಕಳೆದ ಸೆಪ್ಟಂಬರ್ 5ರಂದು ಮಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ವ್ಯವಹಾರ ನಡೆಸಿ ಕ್ರಮಕ್ಕೆ ನಿರ್ದೇಶನ ನೀಡಿದ್ದಾರೆ. ಆಯುಕ್ತರಿಗೆ ಮನವಿ ಸಲ್ಲಿಸುವ ಸಂದರ್ಭ ಈ ಪ್ರಕರಣದ ಅರಿವು ಇರುವುದಾಗಿ ಹೇಳಿರುವ ಪೊಲೀಸ್ ಆಯುಕ್ತರು ಕ್ರಮದ ಭರವಸೆ ನೀಡಿದ್ದಾರೆ ಎಂದು ಯೋಗೀಶ್ ಶೆಟ್ಟಿ ಜಪ್ಪು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಶಾಂತ್ ಭಟ್, ಶರಣ್ ರಾಜ್, ಮುನೀರ್ ಮುಕ್ಕಚ್ಚೇರಿ ಮೊದಲಾದವರು ಉಪಸ್ಥಿತರಿದ್ದರು.