ಹರೇಕಳ ಗ್ರಾ.ಪಂ. ಅಧ್ಯಕ್ಷರಾಗಿ ಗುಲಾಬಿ, ಉಪಾಧ್ಯಕ್ಷರಾಗಿ ಅಬ್ದುಲ್ ಮಜೀದ್ ಆಯ್ಕೆ
ಕೊಣಾಜೆ: ಹರೇಕಳ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಗುಲಾಬಿ ಮತ್ತು ಉಪಾಧ್ಯಕ್ಷರಾಗಿ ಎಂ.ಪಿ.ಅಬ್ದುಲ್ ಮಜೀದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
18 ಸದಸ್ಯ ಬಲದ ಹರೇಕಳ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ 13, ಎಸ್‌ಡಿಪಿಐ ಬೆಂಬಲಿತರು ಮೂರು, ಸಿಪಿಐಎಂ ಮತ್ತು ಪಕ್ಷೇತರರು ತಲಾ ಒಂದು ಸ್ಥಾನ ಇದೆ. ಎರಡನೇ ಅವಧಿಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರ ಆಂತರಿಕ ಚುನಾವಣೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆದು ಚುನಾವಣೆ ಪ್ರಕ್ರಿಯೆ ನಡೆದಾಗ ಪ್ರತಿಸ್ಪರ್ಧಿಗಳು ಇಲ್ಲದ ಕಾರಣ ಅವಿರೋಧ ಆಯ್ಕೆ ನಡೆದಿದೆ.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮುಹಮ್ಮದ್ ಮುಸ್ತಫಾ ಮಲಾರ್, ಹರೇಕಳದಲ್ಲಿ ಮೊದಲ ಅಧಿಕಾರವಧಿಯಲ್ಲಿ ನಡೆದ ಅಭಿವೃದ್ಧಿ ಕೆಲಸ ರಾಜ್ಯ ಮಟ್ಟದಲ್ಲಿ ಗ್ರಾಮವನ್ನು ಗುರುತಿಸುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಗ್ರಾಮ ಮುಂದಕ್ಕೆ ಹೋಗಬೇಕಿದ್ದು ಹಿಂದಕ್ಕೆ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ನೂತನ ಆಡಳಿತಕ್ಕಿದೆ. ಹರೇಕಳ ನಲ್ಮೆಯ ಗ್ರಾಮವಾಗಿಯೇ ಇರಬೇಕು ಎಂದು ತಿಳಿಸಿದರು.
ನಿಕಟಪೂರ್ವ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ, ಹರೇಕಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಅನಿತಾ ಡಿಸೋಜ ಶುಭಹಾರೈಸಿದರು. ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಬಶೀರ್ ಉಂಬುದ, ಉಸ್ತುವಾರಿಗಳಾದ ಅಚ್ಚುತ ಗಟ್ಟಿ ಮತ್ತು ಎ.ಕೆ.ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು.