ದ.ಕ.ಜಿಲ್ಲೆಯ ಯಾವುದೇ ಕಚೇರಿಯಲ್ಲಿ ಸ್ಥಿರಾಸ್ತಿ ನೋಂದಣಿಗೆ ಅವಕಾಶ: ಡಿಸಿ ಮುಲ್ಲೈ ಮುಗಿಲನ್
ಮಂಗಳೂರು, ಆ.29: ಸ್ಥಿರಾಸ್ತಿ ನೋಂದಣಿ ಪ್ರಕ್ರಿಯೆಯನ್ನು ಸರಳೀಕೃತಗೊಳಿಸುವ ಭಾಗವಾಗಿ ದ.ಕ. ಜಿಲ್ಲೆಯ ಯಾವುದೇ ಕಚೇರಿಯಲ್ಲಿ ಸ್ಥಿರಾಸ್ತಿ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ. 2011ರಲ್ಲಿ ಬೆಂಗಳೂರು ನಗರ ಜಿಲ್ಲೆ ಮತ್ತು 2024 ರಲ್ಲಿ ಮಾರ್ಚ್‌ನಲ್ಲಿ ತುಮಕೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಇದು ಆ ಜಿಲ್ಲೆಯಲ್ಲಿ ಯಶಸ್ವಿಯಾಗುತ್ತಿರುವ ಕಾರಣ ರಾಜ್ಯಾದ್ಯಂತ ಇದನ್ನು ವಿಸ್ತರಿಸಲಾಗಿದೆ. ಅದರಂತೆ ಜಿಲ್ಲೆಯ ಉಪನೋಂದಣಿ ಕಚೇರಿಯಲ್ಲೂ ನೋಂದಣಿಗ ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು ಸಮೀಪದಲ್ಲಿರುವ ಉಪನೋಂದಣಿ ಕಚೇರಿಯಲ್ಲಿ ದಸ್ತಾವೇಜನ್ನು ನೋಂದಾಯಿಸಬಹುದು, ಸ್ಲಾಟ್ ಲಭ್ಯವಿರುವಂತಹ ಕಚೇರಿಯನ್ನು ನೋಂದಣಿಗೆ ಆಯ್ಕೆ ಮಾಡಿಕೊಳ್ಳಬಹುದು.
ಉದಾಹರಣೆಗೆ: ಮಂಗಳೂರು ನಗರದ ಆಸ್ತಿಯನ್ನು ಮಾರಾಟ ಅಥವಾ ಖರೀದಿ ಮಾಡಲು ಮಂಗಳೂರು ತಾಲೂಕು, ಮುಲ್ಕಿ, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ವಿಟ್ಲ, ಸುಳ್ಯ, ಮೂಡುಬಿದಿರೆ ಉಪನೋಂದಣಿ ಕಚೇರಿಗಳ ಪೈಕಿ ಯಾವುದೇ ಕಚೇರಿಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಮಾಡಿಕೊಳ್ಳಬಹುದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.