ಜೇಸಿ ಸಪ್ತಾಹ: ಆರೋಗ್ಯ ಮತ್ತು ನೀರಿನ ಮಹತ್ವ ಕುರಿತು ಉಪನ್ಯಾಸ

Update: 2023-09-11 16:22 GMT

ಮಂಗಳೂರು, ಸೆ.11: ಭಾರತದಲ್ಲಿ ಅಸುರಕ್ಷಿತ ಕುಡಿಯುವ ನೀರು ಮತ್ತು ಅನೈರ್ಮಲ್ಯ ಕಾರಣದಿಂದ ಪ್ರತಿ ವರ್ಷ ಸುಮಾರು 8,29,000 ಜನರು ಅತಿಸಾರ ಕಾಯಿಲೆಗಳಿಂದ ಸಾಯುತ್ತಾರೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಕ್ಯಾನ್ಸರ್ ನಂತಹ ಕಾಯಿಲೆಗಳೂ ಹರಡುತ್ತವೆ. ಹಾಗಾಗಿ ಶುದ್ಧ ನೀರನ್ನು ಕುಡಿಯುವುದರ ಜೊತೆಗೆ, ಜಲ ಮೂಲಗಳ ಸಂರಕ್ಷಣೆಯ ಬಗ್ಗೆಯೂ ನಾವು ಕಾಳಜಿ ವಹಿಸಬೇಕು, ಎಂದು ಮಂಗಳೂರು ವಿವಿಯ ಜೀವವಿಜ್ಞಾನ ಪ್ರಾಧ್ಯಾಪಕ ಜೆ. ಎಫ್. ಎಂ. ಡಾ. ಪ್ರಶಾಂತ ನಾಯ್ಕ ಅಭಿಪ್ರಾಯಪಟ್ಟಿದ್ದಾರೆ

ಜೆಸಿಐ ಮಂಗಳಗಂಗೋತ್ರಿ ಕೊಣಾಜೆ ಇದರ ‘ಜೇಸಿ ಸಪ್ತಾಹ 2023’ರ ಎರಡನೇ ದಿನದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೊಣಾಜೆ ಪದವಿನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ನೀರಿನ ಮಹತ್ವ’ ಕುರಿತು ಉಪನ್ಯಾಸ ನೀಡಿದರು.

ಜೀವಾಮೃತವಾದ ನೀರು ವಿವಿಧ ದೈಹಿಕ, ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಔಷಧಿಯಾಗಿಯೂ ಕಾರ್ಯನಿರ್ವಹಿಸು ತ್ತದೆ. ಜೊತೆಗೆ ಸೌಂದರ್ಯವರ್ಧಕವಾಗಿಯೂ ನೆರವಾಗುತ್ತದೆ, ಎಂದರು.

ಮುಖ್ಯ ಅತಿಥಿ, ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಚ್ಚುತ ಗಟ್ಟಿ ಕೊಣಾಜೆ ಮಾತನಾಡಿ, ಬಡ ಮತ್ತು ಅತಿ ಬಡ ಕುಟುಂಬದ ಮಕ್ಕಳು ವಿದ್ಯಾಭಾಸ ಮಾಡುವ ಸರಕಾರಿ ಶಾಲೆಗಳನ್ನು ಉನ್ನತೀಕರಿಸುವ ಅಗತ್ಯವಿದೆ. ಇಂತಹ ಶಾಲೆಗಳಿಗೆ ಶುದ್ಧನೀರಿನ ಘಟಕವನ್ನು ಕೊಡುಗೆಯಾಗಿ ನೀಡಿರುವುದು ಒಂದು ಮಾದರಿ ಕಾರ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಜೆಸಿಐ ಮಂಗಳಗಂಗೋತ್ರಿ ಕೊಣಾಜೆ ಘಟಕದ ಅಧ್ಯಕ್ಷ ಜೆಎಫ್ ಎಂ. ಡಾ. ನರಸಿಂಹಯ್ಯ ಎನ್, ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ಅಂತರ್‌ರಾಷ್ಟ್ರೀಯ ಸಂಸ್ಥೆ ಜೆಸಿಐ, ವ್ಯಕ್ತಿತ್ವ ರೂಪಿಸುವ ಜೊತೆಗೆ ಸಮಾಜಸೇವೆಗೆ ಅವಕಾಶ ಮಾಡಿಕೊಟ್ಟಿದೆ, ಎಂದರು.

ಇದೇ ಸಂದರ್ಭದಲ್ಲಿ ಸೀತಾ ಆರ್ . ನಾಯ್ಕ ಬೈಂದೂರು ಶಾಲೆಗೆ ನೀರು ಶುದ್ಧೀಕರಣ ಘಟಕವನ್ನು ಕೊಡುಗೆಯಾಗಿ ನೀಡಿದರು.

ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ (ಎಸ್ . ಡಿ. ಎಂ. ಸಿ. ) ಅಧ್ಯಕ್ಷ ದಯಾನಂದ ಗಟ್ಟಿ ಕೆಳಗಿನ ಮನೆ ಇವರು ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು.

ಮಿನೆಜಸ್ ಶಾಲೆಯ ಮುಖ್ಯ ಶಿಕ್ಷಕಿ ಸಿಲ್ವಿಯಾ ಬಿ. ಎಂ. ಕೊಡುಗೆಯನ್ನು ಸ್ವೀಕರಿಸಿದರು.

ನಿಕಟಪೂರ್ವ ಅಧ್ಯಕ್ಷ ಜೇಸಿ ಕಮಲಾಕ್ಷ ಶೆಟ್ಟಿಗಾರ್, ಮಾಜಿ ಅಧ್ಯಕ್ಕ್ಷ ಜೇಸಿ ಫ್ರಾಂಕಿ ಫ್ರಾನ್ಸಿಸ್ ಕುಟಿನೋ, ಸ್ಥಾಪಕ ಅಧ್ಯಕ್ಷ ಜೇಸಿ ತ್ಯಾಗಂ ಹರೇಕಳ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಪುಷ್ಪಾ, ಶಿಕ್ಷಕಿ ಸುಗಂಧಿ ಕೆ., ಶಿಕ್ಷಕ ರಝಾಕ್, ಸಮಾಜ ಸೇವಕ ಮೊಹಮ್ಮದ್ ಇಕ್ಬಾಲ್, ಎಸ್.ಡಿ.ಎಂ.ಸಿ. ಸದಸ್ಯರುಗಳು, ಊರಿನ ನಾಗರಿಕರು, ಉಪಸ್ಥಿತರಿದ್ದರು. ಕಾರ್ಯಕ್ರಮ ನಿರ್ದೇಶಕರಾದ ಜೇಸಿ ಚನಿಯಪ್ಪ ನಾಯ್ಕ ಬಿ. ಜೇಸಿ ವಾಣಿ ವಾಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News