ವಿವಾದ ರಹಿತ ತೀರ್ಪುಗಳಿಗೆ ನ್ಯಾಯವಾದಿಗೆ ಎಚ್ಚರ ಅಗತ್ಯ: ಡಾ.ಆರ್.ವೆಂಕಟರಮಣಿ

Update: 2024-12-15 09:09 GMT

ಮಂಗಳೂರು, ಡಿ. 15: ನ್ಯಾಯ ತೀರ್ಪುಗಳು ವಿವಾದ ರಹಿತವಾಗಿದ್ದಾಗ ಮಾತ್ರವೇ ಅದು ನಿಜವಾದ ನ್ಯಾಯ ತೀರ್ಮಾನವಾಗುತ್ತವೆ. ಇದಕ್ಕಾಗಿ ನ್ಯಾಯವಾದಿಗಳು ಎಚ್ಚರಿಕೆಯಿಂದ ವಾದ-ಪ್ರತಿವಾದ ಮಂಡಿಸುವುದು ಅಗತ್ಯವಾಗಿರುತ್ತದೆ ಎಂದು ಭಾರತದ ಅಟಾರ್ನಿ ಜನರಲ್ ಡಾ.ಆರ್.ವೆಂಕಟರಮಣಿ ಹೇಳಿದ್ದಾರೆ.

ಅವರು ಮಂಗಳೂರಿನ ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ರವಿವಾರ ಎಸ್‌ಡಿಎಂ ಕಾನೂನು ವಿದ್ಯಾಲಯದ 50 ನೇ ವರ್ಷಾಚರಣೆ ಸಲುವಾಗಿ ಎರಡನೇ ದಿನ ನಡೆದ ಹಳೆ ವಿದ್ಯಾರ್ಥಿಗಳ ಸಮಾವೇಶದಲ್ಲಿ ಬೆಳ್ಳಿಹಬ್ಬದ ದತ್ತಿ ಉಪನ್ಯಾಸ ನೀಡಿದರು.

ಸಾಮಾಜಿಕ ಜಾಲತಾಣಗಳ ಭರಾಟೆಯ ಈ ದಿನಗಳಲ್ಲಿ ಮೂಲ ಉದ್ದೇಶಗಳು ದಾರಿತಪ್ಪುತ್ತಿವೆ. ತಾಂತ್ರಿಕತೆ ಮುಂದುವರಿದಷ್ಟೂ ತೊಂದರೆಗಳೂ ಕಾಣಿಸಿಕೊಳ್ಳುತ್ತಿವೆ. ಧರ್ಮ ಮತ್ತು ನ್ಯಾಯದ ಮೂಲಸಿದ್ಧಾಂತಗಳು ಪರಸ್ಪರ ಪೂರಕವಾಗಿರಬೇಕು. ಸಂವಿಧಾನದ ಆಶಯದಂತೆ ಆಡಳಿತ ಇರಬೇಕಾಗಿದ್ದು, ಧರ್ಮ, ತಂತ್ರಜ್ಞಾನಗಳೂ ಇದರಲ್ಲಿ ಹಾಸುಹೊಕ್ಕಾಗಿರಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

ನಮ್ಮ ಭಾಷೆ, ಸಂಸ್ಕೃತಿಗಳು ಸಮಾಜದ ಕೊಡುಗೆಯಾಗಿದ್ದು, ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಸವಾಲು ಆಗಿ ಪರಿಣಮಿಸಿದೆ ಎಂದರು.

ಹಳೆ ವಿದ್ಯಾರ್ಥಿಗಳ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ರಾಜ್ಯಸಭಾ ಸದಸ್ಯರೂ ಆಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ, ಕಾನೂನನ್ನು ಪೂರ್ಣಕಾಲಿಕವಾಗಿ ಅಧ್ಯಯನ ನಡೆಸಿ ವೃತ್ತಿಪರ ವಕೀಲರಾಗಿ ಸಮಾಜವನ್ನು ಸುಶಿಕ್ಷಿತವನ್ನಾಗಿಸುವ ಜೊತೆಗೆ ರಾಷ್ಟ್ರವನ್ನು ಪ್ರತಿನಿಧಿಸುವಂತರಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾನೂನು ವ್ಯಾಸಂಗ ಮೂರು ವರ್ಷ ಬದಲು ಐದು ವರ್ಷಗಳ ಕೋರ್ಸ್‌ನಿಂದ ಉತ್ತಮ ಜ್ಞಾನ ಹೊಂದಲು ಸಾಧ್ಯ. ಹುಬ್ಳಳ್ಳಿಯಲ್ಲಿ ಐದು ವರ್ಷ ಅವಧಿಯ ಕಾನೂನು ವ್ಯಾಸಂಗ ಅಷ್ಟಾಗಿ ಯಶಸ್ವಿಯಾಗದಿದ್ದರೂ ಮಂಗಳೂರಿನಲ್ಲಿ ಇದಕ್ಕೆ ಉತ್ತಮ ಸ್ಪಂದನ ದೊರಕುತ್ತಿದೆ. ಕಾನೂನು ಕಲಿಕೆ ಎಂದರೆ, ಬೆಳಗ್ಗೆ ಮತ್ತು ಸಂಜೆ ಮಾತ್ರ ಕಾಲೇಜಿಗೆ ಬಂದು ಹೋಗುವುದು ಅಲ್ಲ. ಅದನ್ನು ಗಂಭೀರವಾಗಿ ತೆಗೆದುಕೊಂಡರೆ ಮಾತ್ರ ಕಾನೂನು ಕಲಿಕೆಯಲ್ಲಿ ಯಶಸ್ಸು ಸಿಗಲು ಸಾಧ್ಯ. ಕಾಲೇಜಿನ ಆಡಳಿತ ಕೂಡ ಈ ವಿಚಾರವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದರಿಂದ ಐದು ವರ್ಷದ ಕಾನೂನು ಕೋರ್ಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

ಬಾಲ್ಯದಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಬದಲು ನಾನೊಬ್ಬ ವಕೀಲನಾಗಬೇಕು ಎಂಬ ಬಯಕೆಯನ್ನು ನನ್ನ ಹೆತ್ತವರು ಹೊಂದಿದ್ದರು. ಆದರೆ ಅದನ್ನು ಈಡೇರಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಆದರೆ ಕಾನೂನು ವಿದ್ಯಾಲಯ ತೆರೆದು ಉತ್ಕೃಷ್ಟ ಬೋಧನಾ ವೃಂದವನ್ನು ಅಳವಡಿಸಲಾಗಿದೆ. ಹೀಗಾಗಿ ನಮ್ಮ ಎಸ್‌ಡಿಎಂ ಕಾನೂನು ವಿದ್ಯಾಲಯ ಶಿಕ್ಷಣದಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ವೃತ್ತಿಪರತೆಯಿಂದ ಎಲ್ಲ ಕಡೆಗಳಲ್ಲಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಅವರು ಹೇಳಿದರು.

ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಾಧಕರಾದ ಡಾ.ಕೆ.ವೆಂಕಟರಮಣಿ, ನ್ಯಾಯವಾದಿಗಳಾದ ಶಾಹುಲ್ ಹಮೀದ್ ರಹಮಾನ್, ಶೇಖರ್ ದೇವಸ, ಸಾರ್ವಕಾಲಿಕ ಸಾಧಕರಾದ ನಿವೃತ್ತ ನ್ಯಾಯಾಧೀಶರಾದ ಆ್ಯಂಟನಿ ಡೊಮಿನಿಕ್, ಜಸ್ಟೀಸ್ ಜೆ. ಮೈಕೆಲ್ ಡಿಕುನ್ನಾ, ನಿವೃತ್ತ ಐಎಎಸ್ ಅಧಿಕಾರಿ ಶ್ಯಾಮ ಭಟ್, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ರಾಜೇಂದ್ರ ಶೆಟ್ಟಿ, ಹಿರಿಯ ನ್ಯಾಯವಾದಿ ಡಾ.ಶಶಿಕಲಾ ಗುರುಪುರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಸತೀಶ್, ಪುತ್ತೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಜಗನ್ನಾಥ ರೈ, ಮೂಡುಬಿದಿರೆ ಬಾರ್ ಅಸೋಸಿಯೇಷನ್ ಅಧ್ಯಕ್ಷ ಹರೀಶ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್‌ಚಂದ್ರ, ಹಳೆ ವಿದ್ಯಾರ್ಥಿ ಸಂಘದ ಸಲಹೆಗಾರ ದಿನಕರ ಶೆಟ್ಟಿ ಮತ್ತಿತರರಿದ್ದರು.

ನ್ಯಾಯವಾದಿ ಉದಯ ಪ್ರಕಾಶ್ ಮುಳಿಯ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಡಾ.ದೇವರಾಜ್ ಕೆ. ಪ್ರಾಸ್ತಾವಿಕ ಮಾತನಾಡಿದರು. ಎಸ್‌ಡಿಎಂ ಲಾ ಕಾಲೇಜು ಪ್ರಾಂಶುಪಾಲ ಡಾ.ತಾರನಾಥ್ ವಂದಿಸಿದರು.

 

ವಕೀಲರು ಸಂವಿಧಾನದ ರಾಯಭಾರಿಗಳು: ಸ್ಪೀಕರ್ ಖಾದರ್

ವಕೀಲರೆಂದರೆ ಅದು ಆಳವಾದ ಸಾಮಾಜಿಕ ಜವಾಬ್ದಾರಿಯಾಗಿದೆ. ವಕೀಲರು ಭಾರತೀಯ ಸಂವಿಧಾನದ ರಾಯಭಾರಿಗಳು. ವಿಶೇಷವಾಗಿ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ವಕೀಲರು ಹೊಂದಬೇಕು. ಪ್ರಜಾಸತ್ತಾತ್ಮಕ ತತ್ವಗಳು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅಭಿಪ್ರಾಯಿಸಿದರು.

ಒಂದು ಕಾಲದಲ್ಲಿ ತರಗತಿಯ ಕೊನೆಯ ಬೆಂಚ್‌ನಲ್ಲಿದ್ದ ನಾನು ಈಗ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಕುರ್ಚಿಯಲ್ಲಿ ಕುಳಿತುಕೊಳ್ಳುವಂತಾಗಿದೆ. ಇದು ಎಸ್‌ಡಿಎಂ ಕಾನೂನು ಕಾಲೇಜಿನಿಂದ ದೊರಕಿದ ಕೊಡುಗೆ ಎಂದು ನಾನು ತಿಳಿದಿದ್ದೇನೆ. ಎಸ್‌ಡಿಎ ಕಾಲೇಜು ನನ್ನ ಸಾಮರ್ಥ್ಯವನ್ನು ಪೋಷಿಸಿದ ಮತ್ತು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ನನ್ನ ಭವಿಷ್ಯವನ್ನು ರೂಪಿಸಿದ ಸ್ಥಳ ಎಂದು ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News