ಮನಪಾ ಕಲಾಪದಲ್ಲಿ ಒಳಚರಂಡಿ ಅವ್ಯವಸ್ಥೆಯ ಗದ್ದಲ, ಜೀವ ನದಿಗಳಿಗೆ ಕೊಳಚೆ ನೀರು; ಸದಸ್ಯರ ಆಕ್ರೋಶ

Update: 2023-10-31 13:55 GMT

ಮಂಗಳೂರು, ಅ. 31: ಪಾಲಿಕೆ ವ್ಯಾಪ್ತಿಯಲ್ಲಿ ಹದಗೆಟ್ಟಿರುವ ಒಳಚರಂಡಿ (ಡ್ರೈನೇಜ್) ವ್ಯವಸ್ಥೆ, ಸಮಸ್ಯೆಗಳು ಈ ಬಾರಿಯ ಮನಾಪ ಸಾಮಾನ್ಯ ಸಭೆಯಲಿಯ್ಲೂ ಸುದೀರ್ಘ ಚರ್ಚೆ, ಆಕ್ಷೇಪ, ಗದ್ದಲಕ್ಕೆ ಕಾರಣವಾಯಿತು.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಳಚರಂಡಿ ಅವ್ಯವಸ್ಥೆಯ ಬಗ್ಗೆ ಒಂದೂವರೆ ಗಂಟೆಗೂ ಅಧಿಕ ಅವಧಿ ಕಾಲ ಚರ್ಚೆ ನಡೆಯಿತು. ಬಳಿಕ ಈ ಬಗ್ಗೆ ನವೆಂಬರ್ 2ನೆ ವಾರದಲ್ಲಿ ವಿಶೇಷ ಸಭೆಯನ್ನು ನಡೆ ಸಲು ಮೇಯರ್ ನಿರ್ಧರಿಸಿದರು.

ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ ಅವರು ಸಭೆಯ ಆರಂಭದಲ್ಲಿಯೇ ಒಳಚರಂಡಿ ಅವ್ಯವಸ್ಥೆಗಳ ಬಗ್ಗೆ ಪ್ರಸ್ತಾಪಿಸಿದರು. ಒಳಚರಂಡಿಗಾಗಿ ಎಡಿಬಿ 1 ಹಾಗೂ 2ನೆ ಹಂತದ ಕಾಮಗಾರಿಯಲ್ಲಿ ಕೋಟಿಗಟ್ಟಲೆ ಹಣ ವ್ಯಯಿಸಲಾ ಗಿದೆ. ಕಳೆದ ಮೂರು ವರ್ಷಗಳಿಂದ ಈ ಬಗ್ಗೆ ಸದನದಲ್ಲಿ ನಿರಂತರವಾಗಿ ಚರ್ಚೆ, ಆಕ್ಷೇಪ ವ್ಯಕ್ತವಾಗುತ್ತಿದ್ದರೂ ಸಮಸ್ಯೆ ಬಗೆಹರಿಸಲು ಕ್ರಮ ಆಗಿಲ್ಲ ಎಂದು ಅವರು ದೂರಿದರು.

ಮನಪಾ ವ್ಯಾಪ್ತಿಯ ನಾಲ್ಕು ಒಳಚರಂಡಿ ಸಂಸ್ಕರಣಾ ಘಟಕ (ಎಸ್‌ಟಿಪಿ)ಗಳಲ್ಲಿ ಎರಡು ಘಟಕಗಳಿಗೆ ಪ್ರತಿಪಕ್ಷದ ಸದಸ್ಯರ ತಂಡ ಭೇಟಿ ನೀಡಿದಾಗ ಅಲ್ಲಿ ದಿಗ್ಭ್ರಮೆಯಾಗಿದೆ. ನಿಯಮ ಪ್ರಕಾರ ಒಳಚರಂಡಿ ನೀರು ಸಂಸ್ಕರಿಸಿದ ಬಳಿಕ ಅದರ ಪಿಎಚ್ ಮಟ್ಟ 6.5ರಿಂದ 8.5 ಇರಬೇಕು. ಆದರೆ ಬಜಾಲ್ ಘಟಕದಲ್ಲಿ ಪ್ರಯೋಗಾಲಯ ಕಾರ್ಯ ನಿರ್ವಹಿಸದಿದ್ದರೂ ವರದಿಯಲ್ಲಿ ಪಿಎಚ್ ಮಟ್ಟ 7ರಿಂದ 8ರ ನಡುವೆ ತೋರಿಸಲಾಗುತ್ತಿದೆ. ಆ ಕೊಳಚೆ ನೀರು ಮಾತ್ರ ನೇತ್ರಾವತಿ ನದಿಗೆ ಸೇರುತ್ತಿದೆ. ಇದು ಜನರ ಆರೋಗ್ಯದ ವಿಷಯ. ಪಚ್ಚನಾಡಿ, ಸುರತ್ಕಲ್‌ನ ಎಸ್‌ಟಿಪಿಯೂ ಅವ್ಯವಸ್ಥೆಯಿಂದ ಕೂಡಿದ್ದು, ಅಲ್ಲಿನ ಜೀವನದಿಗಳಿಗೆ ಕಲುಷಿತ ನೀರು ಸೇರುತ್ತಿದೆ ಎಂದು ಪ್ರವೀಣ್ ಚಂದ್ರ ಆಳ್ವ ಆರೋಪಿಸಿದರು.

ಸದಸ್ಯ ವಿನಯ ರಾಜ್ ಮಾತನಾಡಿ, ಬಜಾಲ್ ಎಸ್‌ಟಿಪಿ ನಿರ್ವಹಣೆಗೆ 1.35 ಕೋಟಿ ರೂ., ಸುರತ್ಕಲ್‌ಗೆ 1 ಕೋಟಿ 62 ಸಾವಿರ ರೂ., ಪಚ್ಚನಾಡಿಗೆ 90.27 ಲಕ್ಷರೂ. ಖರ್ಚು ಮಾಡಲಾಗುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರ ತೆರಿಗೆ ದುಡ್ಡು ಪೋಲಾಗುತ್ತಿದೆಯೇ ವಿನಹ, ಕೊಳಚೆ ನೀರು ಸಂಸ್ಕರಣೆ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುರತ್ಕಲ್ ಎಸ್‌ಟಿಪಿ ಬಗ್ಗೆ ಕಳೆದ ಹಲವು ಸಭೆಗಳಲ್ಲಿ ದೂರು ನೀಡಿದರೂ ಕ್ರಮ ಆಗಿಲ್ಲ ಎಂದು ಶ್ವೇತಾ ಪೂಜಾರಿ ಆಕ್ಷೇಪಿಸಿ ದಾಗ, ಎಸ್‌ಟಿಪಿಗಳ ನಿರ್ವಹಣೆಯ ಗುತ್ತಿಗೆ ಪಡೆದಿರುವವರಿಂದ ಲೋಪದೋಷ ಆಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮವಾಗಬೇಕು ಎಂದು ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಆಗ್ರಹಿಸಿದರು.

ಫ್ಲ್ಯಾಟ್‌ಗಳ ಒಳಚರಂಡಿಯಲ್ಲಿ ಸ್ಯಾನಿಟರಿ ಪ್ಯಾಡ್, ಬಟ್ಟೆ ಹಾಗೂ ಮಕ್ಕಳ ಪ್ಯಾಡ್‌ಗಳು ಸಿಗುತ್ತಿದ್ದು, ಇದಕ್ಕೆ ಮುಕ್ತಿ ದೊರೆಯಬೇಕಾಗಿದೆ ಎಂದು ಸದಸ್ಯೆ ಸಂಗೀತ ನಾಯಕ್ ಒತ್ತಾಯಿಸಿದರು.

ಸದಸ್ಯ ಅನಿಲ್ ಕುಮಾರ್ ಮಾತನಾಡಿ, ಕೂಳೂರು ಫಲ್ಗುಣಿ ನದಿಯ ತಟದಲ್ಲಿರುವ ಹಲವು ಕಾರ್ಖಾನೆಗಳ ರಾಸಾಯನಿಕ ನೀರು ಬಿಡಲಾಗುತ್ತಿದ್ದು, ಜಲಚರಗಳು ಅಪಾಯದಲ್ಲಿವೆ ಎಂದು ದೂರಿದರು. ಸದಸ್ಯ ಕಿರಣ್ ಅವರು ದನಿಗೂಡಿಸಿದರು.

ಒಳಚರಂಡಿ ಸಮಸ್ಯೆ ಬಗೆಹರಿಯದಿರುವುದರಿಂದ ಇದಕ್ಕಾಗಿ ಪ್ರತ್ಯೇಕ ವಿಭಾಗ ಮಾಡಿ ಪರಿಹಾರಕ್ಕೆ ಮುಂದಾಗಬೇಕು ಎಂದು ಹಿರಿಯ ಸದಸ್ಯ ಶಶಿಧರ ಹೆಗ್ಡೆ ಈ ಸಂದರ್ಭ ಸಲಹೆ ನೀಡಿದರು.

ಒಳಚರಂಡಿ ವ್ಯವಸ್ಥೆ ಸಾಕಷ್ಟು ಸುಧಾರಣೆ ಆಗಬೇಕಾಗಿದ್ದು, ಕಾವೂರು ಎಸ್‌ಟಿಪಿಯನ್ನು ಎಸ್‌ಇಝೆಡ್‌ನವರು ನಿರ್ವಹಣೆ ಮಾಡುತ್ತಿದ್ದಾರೆ. ಉಳಿದಂತೆ ಬಜಾಲ್, ಸುರತ್ಕಲ್, ಪಚ್ಚನಾಡಿ ಎಸ್‌ಟಿಪಿಗಳನ್ನು ಗ್ರೀನ್ ಎನ್ವಿರೋಟೆಕ್ ಸಂಸ್ಥೆ ನಿರ್ವಹಣೆ ಮಾಡುತ್ತಿದೆ. ಸುರತ್ಕಲ್ ಮತ್ತು ಪಚ್ಚನಾಡಿಯ ಟೆಂಡರ್ ಅವಧಿ ಪೂಣಗೊಂಡಿದ್ದು, ಹೊಸತಾಗಿ ಟೆಂಡರ್ ಕರೆಯಲಾಗಿದೆ. ಈ ನಡುವೆ ಪರಿಸರ ನಿಯಂತ್ರಣ ಮಂಡಳಿಯೂ ಜೀವನದಿಗಳಿಗೆ ಕಲುಷಿತ ನೀರು ಸೇರುತ್ತಿರುವ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿ, ಸಂಬಂಧಪಟ್ಟವರಿಗೆ ನೋಟೀಸು ಜಾರಿಗೊಳಿಸಿ ಎಚ್ಚರಿಕೆಯನ್ನೂ ನೀಡಿದೆ ಎಂದು ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ಹೇಳಿದರು.

ತಮ್ಮ ವಾರ್ಡ್‌ನಲ್ಲಿ ಹೊರ ವಾರ್ಡ್‌ನ, ಸಂಬಂಧವೇ ಇಲ್ಲದ ವ್ಯಕ್ತಿಗಳ ಶಿಫಾರಸ್ಸು ಪತ್ರದ ಆಧಾರದಲ್ಲಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಸದಸ್ಯರನೇಕರು ಸಭೆಯಲ್ಲಿ ಆಕ್ಷೇಪಿಸಿದಾಗ, ವಾರ್ಡ್‌ಗಳಲ್ಲಿನ ಕಾಮಗಾರಿಗೆ ಆ ವಾರ್ಡ್‌ನ ಸದಸ್ಯರ ಶಿಫಾರಸ್ಸು ಪತ್ರದ ಆಧಾರದಲ್ಲಿಯೇ ಕಾಮಗಾರಿ ನಡೆಸಬೇಕು ಎಂದು ಮೇಯರ್ ಸುಧೀರ್ ಶೆಟ್ಟಿ ಆದೇಶಿಸಿದರು.

ಹೊಯ್ಗೆಬಜಾರ್ ವಾರ್ಡ್‌ನಲ್ಲಿ ಕಳೆದ 8 ದಿನಗಳಿಂದ ನೀರು ಪೂರೈಕೆಯಾಗುತ್ತಿಲ್ಲ. ಅಧಿಕಾರಿಗಳಿಗೆ ಕರೆ ಮಾಡಿದರೆ ರಿಸೀವ್ ಮಾಡುವುದಿಲ್ಲ ಎಂದು ಸ್ಥಳೀಯ ಸದಸ್ಯೆ ದೂರಿದರೆ, ಹಿರಿಯ ಸದಸ್ಯ ಲ್ಯಾನ್ಸಿ ಲಾಟ್ ಪಿಂಟೋ ಅವರು ಮಾತ ನಾಡಿ ನೀರಿನ ಮೂಲವೇ ಇಲ್ಲದೆ ಜಲಸಿರಿ ಯೋಜನೆಯಡಿ ಮಾಡಲಾದ ಕಾಮಗಾರಿಯಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ಸದಸ್ಯರಾದ ಕಿರಣ್, ಜಯಾನಂದ ಅಂಚನ್, ಸಂಗೀತ ನಾಯಕ್, ಭಾಸ್ಕರ್, ಶಂಶಾದ್ ಮೊದಲಾದವರು ತಮ್ಮ ವಾರ್ಡ್‌ಗಳಲ್ಲಿ ಬೋರ್‌ವೆಲ್‌ಗೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಪ್ರತಿಪಕ್ಷದ ನಾಯಕರಾದ ಪ್ರವೀಣ್ ಚಂದ್ರ ಆಳ್ವ, ಈಗಾಗಲೇ ನಗರದಲ್ಲಿ ಅಂತರ್ಜಲ ತೀವ್ರ ಮಟ್ಟದಲ್ಲಿ ಕುಸಿದಿರುವ ಹಿನ್ನೆಲೆಯಲ್ಲಿ ಬೋರ್‌ವೆಲ್‌ಗಳಿಗೆ ಅತೀ ಅಗತ್ಯವಿದ್ದಲ್ಲಿ ಮಾತ್ರವೇ ಅನುಮತಿ ನೀಡಬೇಕು ಎಂದರು.

ಸಭೆಯಲ್ಲಿ ಉಪ ಮೇಯರ್ ಸುನೀತಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಹಿತ್ ಅಮೀನ್, ವರುಣ್ ಚೌಟ, ಭರತ್ ಕುಮಾರ್, ಗಣೇಶ ಮೊದಲಾದವರು ಉಪಸ್ಥಿತರಿದ್ದರು.

ಪಚ್ಚನಾಡಿಯಲ್ಲಿ ಈಗಾಗಲೇ ಭೂಭರ್ತಿಯಾಗಿರುವ ಪಾರಂಪರಿಕ ತ್ಯಾಜ್ಯದ ನಿರ್ವಹಣೆ ನಡೆಸಲು ಗುತ್ತಿಗೆ ನೀಡಲಾಗಿದೆ. ಈಗಾಗಲೇ ಇರುವ ಸಾವಿರಾರು ಟನ್ ತ್ಯಾಜ್ಯದ ಜತೆಗೆ 250 ಟನ್‌ನಷ್ಟು ತ್ಯಾಜ್ಯ ಪ್ರತೀ ದಿನ ಡಂಪ್ ಮಾಡಲಾಗುತ್ತಿದೆ. ಹೀಗಾದರೆ ತ್ಯಾಜ್ಯದ ಬಯೋಮೈನಿಂಗ್ ಯಾವಾಗ ಆಗುವುದು ಎಂದು ಪ್ರಶ್ನಿಸಿದ ಸದಸ್ಯ ಎಸಿ ವಿನಯರಾಜ್, ಒಣಕಸ ನಿರ್ವಹಣೆಯಲ್ಲಿಯೂ ಖಾಸಗಿ ಕಂಪನಿಗೆ ಲಾಭವಾಗುತ್ತಿದೆಯೇ ಹೊರತು ಪಾಲಿಕೆಗೆ ಆದಾಯ ಬರುತ್ತಿಲ್ಲ ಎಂದು ಸಭೆಯ ಗಮನ ಸೆಳೆದರು.

ಸದಸ್ಯೆ ಸಂಗೀತಾ ಆರ್.ನಾಯಕ್ ಮಾತನಾಡಿ, ಪಾರಂಪರಿಕ ತ್ಯಾಜ್ಯ ವ್ಯಾಪಿಸುತ್ತಲೇ ಇದೆ. ಅದನ್ನು ಈಗಿನ ಕ್ರಮದ ಪ್ರಕಾರ ನಿರ್ವಹಣೆ ಮಾಡುವುದು ಕಷ್ಟ. ಈ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ಪಾರಂಪರಿಕ ತ್ಯಾಜ್ಯ ನಿರ್ವಹಣೆಯ ಸಮಸ್ಯೆ ಕುರಿತಂತೆ ತಜ್ಞರ ಸಮಿತಿ ರಚಿಸಿ ಪರಿಶೀಲಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ತಿಳಿಸಿದರು.


 



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News