ಮಂಗಳೂರು: ಆ್ಯಂಬುಲೆನ್ಸ್ ಪಲ್ಟಿ; ರೋಗಿ ಸ್ಥಳದಲ್ಲೇ ಮೃತ್ಯು

Update: 2024-09-25 17:14 GMT

ಮಂಗಳೂರು: ಪುತ್ತೂರಿನಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕರೆ ತರುತ್ತಿದ್ದ ಆ್ಯಂಬುಲೆನ್ಸ್ ಪಡೀಲು ಸಮೀಪ ಪಲ್ಟಿಯಾಗಿ ಗಂಭೀರ ಗಾಯಗೊಂಡ ರೋಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ವರದಿಯಾಗಿದೆ.

ಕಡಬ ಹಳೆನೇರೆಂಕಿ ಗ್ರಾಮದ ರಾಮಜಾಲು ನಿವಾಸಿ ದಾಸಪ್ಪ ರೈ (73) ಮೃತರು ಎಂದು ಗುರುತಿಸಲಾಗಿದೆ.

ದಾಸಪ್ಪ ರೈ ಅವರ ಪತ್ನಿ ನಳಿನಿ ರೈ (54), ಪುತ್ರ ಹರ್ಷಿತ್ (33) ಹಾಗೂ ಸಂಬಂಧಿಕ ಯುವಕ ಮನೀಷ್ (24) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಳೆನೇರೆಂಕಿ ಗ್ರಾಮದ ಕದ್ರ ನಿವಾಸಿ ದಾಸಪ್ಪ ರೈಯವರಿಗೆ ಸೆ.24ರಂದು ತಡರಾತ್ರಿ 1:30ರ ವೇಳೆಗೆ ಸ್ಟ್ರೋಕ್ ಆಗಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರ ಮನೆ ಸಮೀಪದ ನಿವಾಸಿ, ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮ್ಯಾನೇಜರ್ ರಮೇಶ್ ರೈಯವರು ತನ್ನ ಕಾರಿನಲ್ಲಿ ಪುತ್ತೂರಿನ ಆಸ್ಪತ್ರೆಗೆ ಕರೆ ತಂದಿದ್ದರು. ಅಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದಾಸಪ್ಪ ರೈ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗಿತ್ತು. ಮುಂಜಾನೆ 4 ಗಂಟೆ ವೇಳೆಗೆ ಆಂಬುಲೆನ್ಸ್ ಫಸ್ಟ್ ನ್ಯೂರೋ ಆಸ್ಪತ್ರೆ ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ವಿದ್ಯುತ್ ಕಂಬವೊಂದಕ್ಕೆ ಢಿಕ್ಕಿಯಾಗಿದೆ. ಅಸೌಖ್ಯದಿಂದ ಬಳಲುತ್ತಿದ್ದ ದಾಸಪ್ಪ ರೈ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅಪಘಾತದಲ್ಲಿ ಆ್ಯಂಬುಲೆನ್ಸ್ ನಜ್ಜು ಗುಜ್ಜಾಗಿದೆ. ವಿದ್ಯುತ್ ಕಂಬ ಮುರಿದು ನಿಂತಿದೆ. ಈ ಬಗ್ಗೆ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News