ಮಂಗಳೂರು: ಅಂಬೇಡ್ಕರ್ ಪ್ರತಿಮೆಯೊಂದಿಗೆ ಆಕರ್ಷಕ ವೃತ್ತ

Update: 2024-08-29 11:09 GMT

ಅಂಬೇಡ್ಕರ್ ವೃತ್ತ ನಿರ್ಮಾಣದ ಮಾದರಿ ನೀಲ ನಕ್ಷೆಯ ಚಿತ್ರ

ಮಂಗಳೂರು: ನಗರದ ಹೃದಯ ಭಾಗವಾದ ಅಂಬೇಡ್ಕರ್ ವೃತ್ತದಲ್ಲಿ (ಹಿಂದಿನ ಜ್ಯೋತಿವೃತ್ತ) ಅಂಬೇಡ್ಕರ್ ಪ್ರತಿಮೆಯೊಂದಿಗೆ ವೃತ್ತ ನಿರ್ಮಾಣಕ್ಕೆ ಆಗ್ರಹಿಸಿದ್ದ ಪರಿಶಿಷ್ಟ ಜಾತಿಗಳ ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟವು ಮೇಯರ್‌ಗೆ ಮಾದರಿ ನೀಲ ನಕ್ಷೆ ಹಾಗೂ ವಿನ್ಯಾಸವನ್ನು ಸಲ್ಲಿಕೆ ಮಾಡಿದೆ.

ಈಗಿರುವ ಜಾಗದಲ್ಲಿಯೇ ಅಂಬೇಡ್ಕರ್‌ರವರ ಪ್ರತಿಮೆಯೊಂದಿಗೆ ಸುಂದರ ವೃತ್ತ ನಿರ್ಮಿಸಲು ನುರಿತ, ತಜ್ಞ ವಾಸ್ತು ಶಿಲ್ಪಿಗಳ ತಂಡದಿಂದ ಸಿದ್ಧ ಪಡಿಸಲಾದ ಮಾದರಿ ನೀಲ ನಕ್ಷೆ ಮತ್ತು ವಿನ್ಯಾಸವನ್ನು ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಅವರ ನೇತೃತ್ವದಲ್ಲಿ ನಾಗರಿಕ ಸಂಘಟನೆಗಳ ನಿಯೋಗವು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರಿಗೆ ಸಲ್ಲಿಸಿದ್ದಾರೆ.

ಕಾಮಗಾರಿಯನ್ನು ಶೀಘ್ರವೇ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ನಿಯೋಗವು, ಪಾಲಿಕೆಯ ಪ್ರತಿ ಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ, ಜಿಲ್ಲಾಧಿಕಾರಿ ಮತ್ತು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರನ್ನೂ ಭೇಟಿ ಮಾಡಿ ಪ್ರಸ್ತಾವಿತ ಅಂಬೇಡ್ಕರ್ ವೃತ್ತದ ಮಾದರಿ ನೀಲ ನಕ್ಷೆ ಮತ್ತು ವಿನ್ಯಾಸವನ್ನು ಸಲ್ಲಿಸಿದೆ.

ರಸ್ತೆ ಸುರಕ್ಷತಾ ಮಾರ್ಗಸೂಚಿಗೆ ಅನುಗುಣವಾಗಿ ಟ್ರಾಫಿಕ್ ಸಿಗ್ನಲ್ ಗಳು, ಗಾರ್ಡ್ ಸಹಿತ ಉತ್ತಮ ಫುಟ್ ಪಾತ್, ಪಾದಚಾರಿ ಸ್ನೇಹಿ ಸಿಗ್ನಲ್ ಮತ್ತು ಝೀಬ್ರಾ ಲೈನ್ ಹಾಗೂ ಪೊಲೀಸ್ ಚೌಕಿ ಸಹಿತ ಅತ್ಯಾಧುನಿಕ ರೀತಿಯಲ್ಲಿ ಅಂಬೇಡ್ಕರ್ ವೃತ್ತದ ಮಾದರಿ ನೀಲ ನಕ್ಷೆ ಮತ್ತು ವಿನ್ಯಾಸವನ್ನು ರೂಪಿಸಲಾಗಿದ್ದು, ಇದರಿಂದ ಈ ಪ್ರದೇಶದಲ್ಲಿ ರಸ್ತೆ ಬಳಕೆದಾರರ, ಸೈಕಲ್ ಸವಾರರ, ಪಾದಚಾರಿಗಳ ಸಂಪೂರ್ಣ ಸುರಕ್ಷೆ ಮತ್ತು ಎಲ್ಲ ವಾಹನಗಳ ವೇಗ ನಿಯಂತ್ರಣ ದೊಂದಿಗೆ ಸುಗಮ ಸಂಚಾರವನ್ನು ಖಾತರಿ ಮಾಡಬಹುದಾಗಿದೆ. ಇದು ಇಂದಿನ ತುರ್ತು ಅಗತ್ಯ ಕೂಡಾ ಎಂದು ಮೇಯರ್ ಅವರಿಗೆ ಮನವರಿಕೆ ಮಾಡಲಾಗಿದೆ ಎಂದು ಲೋಲಾಕ್ಷ ತಿಳಿಸಿದ್ದಾರೆ.

ಅಂಬೇಡ್ಕರ್ ವೃತ್ತದಲ್ಲಿ ವೃತ್ತ ನಿರ್ಮಾಣ ಮಾಡದೆ, ರಸ್ತೆ ಅಂಚಿನಲ್ಲಿ ಸ್ತೂಪದೊಳಗೆ ಪುಟ್ಟ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಟಾಪನೆ ಮಾಡಿ ಡಾ. ಅಂಬೇಡ್ಕರ್‌ರವರಿಗೆ ಅವಮಾನ ಮಾಡುವ ಯೋಜನೆಗೆ ಆ. 15ರಂದು ಶಿಲಾನ್ಯಾಸಕ್ಕೆ ಜಿಲ್ಲಾಡಳಿತ ಮುಂದಾಗಿತ್ತು. ಒಕ್ಕೂಟ ಅದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿದ್ದು, ಈ ಸಂದರ್ಭ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರ್, ಪ್ರತಿಪಕ್ಷದ ನಾಯಕರಾದ ಪ್ರವೀಣ್ ಚಂದ್ರ ಆಳ್ವ, ಮತ್ತು ಉಭಯ ಪಕ್ಷಗಳ ಕಾರ್ಪೋರೇಟರ್ ಗಳು ಮತ್ತು ಜಿಲ್ಲಾಧಿಕಾರಿ ಕೂಡಾ ಅಂಬೇಡ್ಕರ್ ವೃತ್ತದಲ್ಲಿಯೇ ಪ್ರತಿಮೆಯೊಂದಿಗೆ ಅಂಬೇಡ್ಕರ್ ವೃತ್ತ ನಿರ್ಮಿಸಬೇಕು ಎಂಬ ಬೇಡಿಕೆಗೆ ಸಹಮತ ವ್ಯಕ್ತ ಪಡಿಸಿದ್ದರು. ಅಂದು ಒಕ್ಕೂಟದ ಪ್ರತಿನಿಧಿಗಳು ಅವರಿಗೆಲ್ಲ ಕೊಟ್ಟ ಮಾತಿನಂತೆ, ತಜ್ಞ, ನುರಿತ ವಾಸ್ತುಶಿಲ್ಪಿಗಳ ತಂಡದಿಂದಲೇ ಸುಸಜ್ಜಿತವಾದ ರೀತಿಯಲ್ಲಿ ಅಂಬೇಡ್ಕರ್ ವೃತ್ತದ ನೀಲ ನಕ್ಷೆ ಮತ್ತು ವಿನ್ಯಾಸ ಸಿದ್ಧ ಪಡಿಸಿ ಸಲ್ಲಿಸಿದ್ದೇವೆ. ಇದೀಗ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ಲೋಲಾಕ್ಷ ಆಗ್ರಹಿಸಿದ್ದಾರೆ.

ನಿಯೋಗದಲ್ಲಿ ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಅಹಿಂದ ಜಿಲ್ಲಾಧ್ಯಕ್ಷ ಭರತೇಶ್, ಸರಕಾರದ ಗ್ಯಾರಂಟಿಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಶಾಂತಲಾಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತೇಜೋಮಯ, ಪರಿಶಿಷ್ಟ ಜಾತಿ, ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ಆದಿದ್ರಾವಿಡ ಮಹಾಸಭಾದ ರಾಜ್ಯಾಧ್ಯಕ್ಷ ಶಿವಾನಂದ, ಸಾಮಾಜಿಕ ಕಾರ್ಯಕರ್ತ ಹ್ಯಾರಿ ಹೆನ್ರಿ ಡಿಸೋಜ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಷ್ಮಣ್ ಕಾಂಚನ್, ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಮುಖಂಡರು, ಜಿಲ್ಲಾ ನಲಿಕೆ ಯಾನೇ ಪಾಣಾರ ಸಂಘದ ಅಧ್ಯಕ್ಷ ಪದ್ಮನಾಭ ಮೂಡಬಿದ್ರಿ, ಸಾಮಾಜಿಕ ಕಾರ್ಯಕರ್ತೆ ವಸಂತಿ ಅಂಚನ್, ಸತ್ಯ ಸಾರಮನಿ ದೇವಸ್ಥಾನದ ಅಧ್ಯಕ್ಷ ಅನಿಲ್ ಕಂಕನಾಡಿ, ಆರ್ ಟಿ ಐ ಕಾರ್ಯಕರ್ತ ಪ್ರಶಾಂತ್ ಭಟ್, ಕಲಾವಿದ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.


















Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News