ಸಂಚಾರ ನಿಯಮ ಉಲ್ಲಂಘನೆ ಆರೋಪ: 207 ಮಂದಿಯ ಡ್ರೈವಿಂಗ್ ಲೈಸನ್ಸ್ ಅಮಾನತಿಗೆ ಮಂಗಳೂರು ಕಮಿಷನರ್ ಶಿಫಾರಸು

Update: 2023-09-04 14:28 GMT

ಕುಲದೀಪ್ ಕುಮಾರ್ ಜೈನ್ 

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಆ.21ರಿಂದ ಸೆ.3ರ ಅವಧಿಯಲ್ಲಿ ಮೋಟಾರು ವಾಹನ ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ 207 ಮಂದಿಯ (ಚಾಲಕರು/ಸವಾರರು) ಚಾಲನಾ ಅನುಜ್ಞಾ ಪತ್ರ (ಡ್ರೈವಿಂಗ್ ಲೈಸನ್ಸ್) ಅಮಾನತುಪಡಿಸಲು ಪ್ರಾದೇಶಿಕ ಸಾರಿಗೆ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ತಿಳಿಸಿದ್ದಾರೆ.

ಅತೀವೇಗ, ದುಡುಕತನ ಮತ್ತು ನಿರ್ಲಕ್ಷ್ಯದ ಚಾಲನೆ ಮಾಡಿದ 59, ಮದ್ಯಸೇವಿಸಿ ವಾಹನ ಚಲಾಯಿಸಿದ 8, ಸರಕು ಸಾಗಾಟ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸಿರುವ 34, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದ 4, ಟ್ರಿಪಲ್ ರೈಡಿಂಗ್ ನಡೆಸಿದ 4, ಹೆಲ್ಮೆಟ್ ಧರಿಸದೆ ಸವಾರಿ ಮಾಡಿದ 79, ಸೀಟ್ ಬೆಲ್ಟ್ ಹಾಕದಿರುವ 6, ಏಕಮುಖ ಸಂಚಾರ, ನೋ ಎಂಟ್ರಿ ನಿಯಮ ಉಲ್ಲಂಘಿಸಿದ 13 ಹೀಗೆ ಅಮಾನತಿಗೆ ಪ್ರಸ್ತಾವನೆ ಸಲ್ಲಿಸಿರುವ ಪ್ರಕರಣಗಳು ಸೇರಿವೆ ಎಂದು ಆಯುಕ್ತರು ತಿಳಿಸಿದ್ದಾರೆ.

ಕಳೆದ 15 ದಿನಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ನಿಷೇಧಿತ ಸ್ಥಳದಲ್ಲಿ ವಾಹನ ಪಾರ್ಕಿಂಗ್ ವಿರುದ್ಧ 407, ಕರ್ಕಶ ಹಾರ್ನ್ ಬಳಕೆ ವಿರುದ್ಧ 45, ಟಿಂಟ್ ಗ್ಲಾಸ್ ಹಾಕಿರುವುದರ ವಿರುದ್ಧ 50 ಮತ್ತು ಬಸ್‌ಗಳ ಫುಟ್‌ಬೋರ್ಡ್‌ನಲ್ಲಿ ಸಂಚಾರ ಮಾಡಿದವರ ವಿರುದ್ಧ 174 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News