ಮೂಡುಬಿದಿರೆ: ಚಿನ್ನದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಬಂಧನ
ಮಂಗಳೂರು, ಸೆ.21: ಮೂಡುಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ವೃದ್ಧೆಯರ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತರನ್ನು ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆಯ ಹಬೀಬ್ ಹಸನ್ (42) ಮತ್ತು ಬಿ.ಸಿ.ರೋಡ್ ಸಮೀಪದ ಪರ್ಲ್ಯದ ಉಮ್ಮರ್ ಸಿಯಾಫ್ (29) ಎಂದು ಗುರುತಿಸಲಾಗಿದೆ.
ಆ.15ರಂದು ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದ ಬಳಿ ನಿರ್ಮಾಲ ಪಂಡಿತ್ (70)ರ ಕುತ್ತಿಗೆಯಿಂದ ಸುಮಾರು 24 ಗ್ರಾಂ ಮೌಲ್ಯದ ಚಿನ್ನದ ಸರವನ್ನು ಹಾಗೂ ಸೆ.2ರಂದು ಮೂಡು ಮಾರ್ನಾಡು ಗ್ರಾಮದ ಬಸದಿಯ ಬಳಿ ಪ್ರೇಮಾ (82) ಎಂಬವರ ಕುತ್ತಿಗೆಯಿಂದ ಸುಮಾರು 3 ಪವನ್ ತೂಕದ ಚಿನ್ನದ ಸರವನ್ನು ಸ್ಕೂಟರ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಕಸಿದುಕೊಂಡು ಪರಾರಿಯಾದ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಶನಿವಾರ ಇಬ್ಬರನ್ನು ಬಂಧಿಸಿ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ವಶಪಡಿಸಿ ಕೊಂಡಿದ್ದಾರೆ. ಇವುಗಳ ಮೌಲ್ಯ 2.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ವಶಪಡಿಸಿಕೊಂಡ ಸ್ಕೂಟರ್ ಈ ಹಿಂದೆ ಕಳವುಗೈದಿದ್ದಾಗಿದ್ದು, ಕದ್ರಿ ಠಾಣೆಯಲ್ಲಿ ಕಳವಾದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪೈಕಿ ಹಬೀಬ್ ಹಸನ್ ವಿರುದ್ಧ ಅಂತರ್ ಜಿಲ್ಲಾ ಪೊಲೀಸ್ ಠಾಣೆಗಳಲ್ಲಿ ದರೋಡೆ, ಕಳ್ಳತನ, ಸುಲಿಗೆ ಸಹಿತ 42 ಪ್ರಕರಣಗಳು ದಾಖಲಾಗಿದೆ. ಈತನು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾರಣ 15 ಬಂಧನದ ವಾರೆಂಟ್ ಎದುರಿಸುತ್ತಿದ್ದಾನೆ. ಉಮ್ಮರ್ ಸಿಯಾಫ್ ವಿರುದ್ಧ ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಮೂಡುಬಿದಿರೆ ಠಾಣೆಯ ನಿರೀಕ್ಷಕ ಸಂದೇಶ್ ಪಿ.ಜಿ., ಎಎಸ್ಸೈಗಳಾದ ಪ್ರಶಾಂತ್, ಮೋಹನ್‌ದಾಸ್ ಕೋಟ್ಯಾನ್, ಅಪರಾಧ ವಿಭಾಗದ ಸಿಬ್ಬಂದಿ ಮುಹಮ್ಮದ್ ಇಕ್ಬಾಲ್, ಮುಹಮ್ಮದ್ ಹುಸೈನ್, ಅಕೀಲ್ ಅಹ್ಮದ್, ನಾಗರಾಜ್, ವೆಂಕಟೇಶ್ ಪಾಲ್ಗೊಂಡಿದ್ದರು.