ದೇರಳಕಟ್ಟೆ: 'ರತ್ನೋತ್ಸವ 2024' ಉದ್ಘಾಟನೆ

Update: 2024-12-22 14:42 GMT

ಕೊಣಾಜೆ: ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಕರಾವಳಿ ಕರ್ನಾಟಕದ ಸಾಹಿತ್ಯ - ಸಾಂಸ್ಕೃತಿಕ ಸಮ್ಮೇಳನ ನಾಡು-ನುಡಿ ವೈಭವದ ರತ್ನೋತ್ಸವ 2024 ಕಾರ್ಯಕ್ರಮದ ಉದ್ಘಾಟನೆ ರವಿವಾರ ದೇರಳಕಟ್ಟೆಯಲ್ಲಿ ನಡೆಯಿತು.

ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ವಿಕ್ರಮದತ್ತ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜಮುಖಿ ಕಾರ್ಯಗಳೊಂದಿಗೆ ನಮ್ಮ ಭಾಷೆ, ನಮ್ಮ ನಾಡು, ನುಡಿಯ ವಿಚಾರವನ್ನು ಆಧುನಿಕ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ರುವಾರಿ ರವೀಂದ್ರ ಶೆಟ್ಟಿ ಅವರು ಕಳೆದ ಹಲವು ವರುಷಗಳಿಂದ ರತ್ನೋತ್ಸವದ ಮೂಲಕ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದು, ಇಂತಹ ಕಾರ್ಯಗಳು ಶಿಕ್ಷಣ ಸಂಸ್ಥೆಗಳಲ್ಲಿ ನಡೆದಾಗ ವಿದ್ಯಾರ್ಥಿಗಳಲ್ಲಿ ಭಾಷಾಭಿಮಾನ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಾಂಸ್ಕೃತಿಕ ದಿಬ್ಬಣಕ್ಕೆ ಚಾಲನೆ ನೀಡಿದ ಕೈರಂಗಳ ಶಾರದಾ ವಿದ್ಯಾ ಗಣಪತಿ ವಿದ್ಯಾ ಸಂಸ್ಥೆಯ ಸಂಚಾಲಕ ಟಿ. ಜಿ. ರಾಜರಾಮ ಭಟ್ ಮಾತನಾಡಿ ಪ್ರತಿಯೊಂದು ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳು ತಮ್ಮ ತಮ್ಮ ಕ್ಷೇತ್ರದ ದೈನಂದಿನ ಕಾರ್ಯಗಳಲ್ಲಿ ಮಗ್ನರಾಗುತ್ತಾರೆ. ಆದರೆ ಕನ್ನಡ ತೇರನ್ನು ಎಳೆಯುವವರು ಕಡಿಮೆ ಇಂತಹ ಕಾರ್ಯವನ್ನು ನಡೆಸುತ್ತಿರುವ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರಿಗೆ ನಾವು ಬೆಂಗಾವಲು ಆಗಬೇಕು ಎಂದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿ ಆಂಗ್ಲ ಮಾಧ್ಯಮ ಶಿಕ್ಷಣ ಕಲಿಯಿವುದರೊಂದಿಗೆ ಕನ್ನಡ ಭಾಷೆಗೆ ಒತ್ತುಕೊಟ್ಟು, ಕನ್ನಡ ಭಾಷೆಯನ್ನು ಅಧ್ಯಯನ ಮಾಡಬೇಕು ಎಂದರು.

ಸಮ್ಮೇಳಾನಧ್ಯಕ್ಷ ಡಾ.ಪಾದೆಕಲ್ಲು ವಿಷ್ಣು ಭಟ್ಟ ಮಾತನಾಡಿ ಕನ್ನಡದ ನಾಡಿನಲ್ಲಿ ಕನ್ನಡವೇ ಇಲ್ಲ ಎನ್ನುವ ಆತಂಕ ಎಲ್ಲರ ಮನದಲ್ಲಿದೆ. ಆಧುನಿಕ ತಂತ್ರಜ್ಞಾನದಲ್ಲಿ ತಂತ್ರಾಂಶವನ್ನು ಬಳಸುವ ಕರ್ಯದೊಂದಿಗೆ ನಾವು ಕನ್ನಡವನ್ನು ಉದ್ಧಾರ ಮಾಡಲು ಆಗದಿದ್ದರೆ ಅದರ ಅಧ್ಯಯನವನ್ನು ನಡೆಸಬೇಕು ಎಂದರು.

ರತ್ನೋತ್ಸವದ ದ್ವಜಾರೋಹಣವನ್ನು ರತ್ನ ಎಜುಕೇಷನ್ ಟ್ರಸ್ಟಿನ ಕೋಶಾಧಿಕಾರಿ ರತ್ನವತಿ ಕೆ ಶೆಟ್ಟಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟದ ಪ್ರ. ಕಾರ್ಯದರ್ಶಿ ಸೂಡಿ ಸುರೇಶ್, ಅಂಬ್ಲ ಮೊಗರು ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕ ಮೋಹನ್‌ದಾಸ್ ಶೆಟ್ಟಿ ಉಳಿದೊಟ್ಟು, ಶಾಲಾ ಮುಖ್ಯ ಶಿಕ್ಷಕಿ ನಯೀಮ್ ಅಹಮ್ಮದ್, ಶಿಕ್ಷಕ ರವಿಕುಮಾರ್ ಕೋಡಿ, ವಿದ್ಯಾರ್ಥಿ ನಾಯಕ ಮಹಮ್ಮದ್ ಹಾಸಿಂ ಉಪಸ್ಥಿತರಿದ್ದರು.

ವಿದ್ಯಾರತ್ನ ವಿದ್ಯಾಸಂಸ್ಥೆಯ ಸಂಸ್ಥಾಪಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ತೋನ್ಸೆ ಪುಷ್ಕಲ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸೌಮ್ಯಾ ಆರ್. ಶೆಟ್ಟಿ ವಂದಿಸಿದರು.

ಸಾಂಸ್ಕೃತಿ ದಿಬ್ಬಣ : ಕಾರ್ಯಕ್ರಮದ ಪುರ್ವಭಾವಿಯಾಗಿ ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಬೆಳ್ಮ ಪಂಚಾಯತ್ ವಠಾರದಿಂದ ಪೂರ್ಣ ಕುಂಭ, ಕೊಂಬು ಕಹಳೆ, ಚೆಂಡೆ ವಾದನ, ಆಲಕ್ಕಿ, ಪೂಜಾ ಕುಣಿತ, ವೀರಗಾಸೆ, ಹುಲಿವೇಷ, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳ ಜೊತೆ ಸಮ್ಮೇಳನದ ಅಧ್ಯಕ್ಷರನ್ನು ಸಾಂಸ್ಕೃತಿಕ ದಿಬ್ಬಣದ ಮೂಲಕ ಸಮ್ಮೇಳನ ನಡೆಯುವ ಗ್ರೀನ್‌ಗ್ರೌಂಡ್‌ಗೆ ಕರೆತರಲಾಯಿತು.

ವಿಚಾರಗೋಷ್ಠಿ : ಕರಾವಳಿಯನ್ನು ಬೆಳಗಿದ ಮಹನೀಯರು ವ್ಯಕ್ತಿ-ಶಕ್ತಿ ವಿಷಯದಲ್ಲಿ ನಡೆಯುವ ವಿಚಾರ ಗೋಷ್ಠಿ ಯಲ್ಲಿ ದಲಿತೋದ್ಧಾರಕ ಕುದ್ಮಲ್ ರಂಗರಾಯರ ಬಗ್ಗೆ ಡಾ.ತ್ರಿವೇಣಿ ಅರಸ್, ಪ್ರಗತಿಶೀಲ ಸಾಹಿತಿ ನಿರಂಜನ ರವರ ಬಗ್ಗೆ ಡಾ. ಧನಂಜಯ ಕುಂಬ್ಳೆ, ಯುಗಪುರುಷ ಶಿವರಾಮ ಕಾರಂತ ರವರ ಬಗ್ಗೆ ಡಾ. ಸುಂದರ ಕೇನಾಜೆ, ಚಂದ್ರಗಿರಿಯ ಸಾಧಕಿ ಸಾರಾ ಅಬೂಬಕ್ಕರ್ ರವರ ಬಗ್ಗೆ ಡಾ.ಮೈತ್ರಿ ಭಟ್ ಮಾತನಾಡಿದರು.

ಬಹುಭಾಷಾ ಕವಿಗೋಷ್ಠಿ ಇರಾ ನೇಮು ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಗುಣಾಜೆ ರಾಮಚಂದ್ರ ಭಟ್, ಹುಸೈನ್ ಕಾಟಿಪಳ್ಳ ಗೀತಾ ಜೈನ್, ಸಿಹಾನ ಬಿ. ಎಮ್, ಎಚ್. ಬೀಮಾರಾವ್ ವಾಷ್ಠರ್, ವಾಣಿ ಲೋಕ್ಕಯ್ಯ, ವಿನೋದ್ ಪಿಂಟೋ ಭಾಗವಹಿಸಿ ಕಾವ್ಯ ವಾಚನ ಮಾಡಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News