ಮಂಗಳೂರಿನಲ್ಲಿ ಸೈಕ್ಲೋಥಾನ್‌: ವಿದ್ಯಾರ್ಥಿಗಳು, ಸೈಕ್ಲಿಸ್ಟ್‌ಗಳು ಸೇರಿ 1,200ಕ್ಕೂ ಅಧಿಕ ಮಂದಿ ಭಾಗಿ

Update: 2024-12-22 15:53 GMT

ಮಂಗಳೂರು: ಮಂಗಳೂರಿನಲ್ಲಿ ರವಿವಾರ ಬೆಳಗ್ಗೆ ಆಯೋಜಿಸಲಾದ ಮಂಗಳೂರು ಸೈಕ್ಲೋಥಾನ್‌ನಲ್ಲಿ ಶಾಲಾ ಮಕ್ಕಳು, ವೃತ್ತಿಪರ ಸೈಕ್ಲಿಸ್ಟ್‌ಗಳು ಮತ್ತು ವಿವಿಧ ಕ್ಲಬ್‌ಗಳ ಸೈಕ್ಲಿಸ್ಟ್‌ಗಳು ಸೇರಿದಂತೆ ಸುಮಾರು 1,200 ಅಧಿಕ ಮಂದಿ ಭಾಗವಹಿಸಿದ್ದರು.

ಕ್ರಾಸ್ ಸೈಕಲ್ಸ್, ಐಡಿಯಲ್ ಐಸ್ ಕ್ರೀಂ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಕಶರ್ಪ್ ಫಿಟ್ನೆಸ್, ಗೃಹಿಣಿ ಮಸಾಲಾ, ಕೆನರಾ ಬ್ಯಾಂಕ್ ಮತ್ತು ತಾಜ್ ಸೈಕಲ್‌ಗಳ ಸಹಯೋಗದಲ್ಲಿ ‘ವೀ ಆರ್ ಸೈಕ್ಲಿಂಗ್’ ತಂಡ ಈ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು.

ಸೈಕ್ಲೋಥಾನ್‌ಗೆ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಫಿಟ್ನೆಸ್, ರಸ್ತೆ ಜಾಗೃತಿ ಮತ್ತು ಸುರಕ್ಷತೆಯ ಉದ್ದೇಶದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿರುವುದು ಶ್ಲಾಘನೀಯ ಎಂದರು.

ಸೈಕ್ಲೋಥಾನ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ರಸ್ತೆ ಸುರಕ್ಷತೆ ಹಾಗೂ ಜವಾಬ್ದಾರಿಯುತ ಸೈಕ್ಲಿಂಗ್ ಬಗ್ಗೆ ಅರಿವು ಮೂಡಿಸಲು ಸೈಕಲ್ ರ‍್ಯಾಲಿ ಆಯೋಜಿಸಲಾಗಿದೆ ಎಂದು ವಿ ಆರ್ ಸೈಕ್ಲಿಂಗ್‌ನ ಹರ್ನಿಶ್ ರಾಜ್ ತಿಳಿಸಿದರು.

ಬೆಳಗ್ಗೆ 7:15ಕ್ಕೆ ಮಂಗಳಾ ಸ್ಟೇಡಿಯಂನಿಂದ ಆರಂಭಗೊಂಡ ಸೈಕಲ್ ರ‍್ಯಾಲಿಯು ನಗರದ ಪ್ರಮುಖ ಸ್ಥಳಗಳಾದ ಶ್ರೀ ನಾರಾಯಣ ಗುರು ವೃತ್ತ, ಲಾಲ್‌ಬಾಗ್ , ಜೈಲು ರಸ್ತೆ ಮತ್ತು ಕರಂಗಲ್ಪಾಡಿ ಮಾರುಕಟ್ಟೆಯ ಮೂಲಕ 6.5 ಕಿ.ಮೀ ದೂರವನ್ನು ಕ್ರಮಿಸಿ, 8:15 ರ ಸುಮಾರಿಗೆ ಬೋಳೂರಿನ ಅಮೃತ ವಿದ್ಯಾಲಯ ಶಾಲಾ ಮೈದಾನದಲ್ಲಿ ಸಮಾಪನಗೊಂಡಿತು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ಕ್ರಾಸ್ ಬೈಕ್ ರೆನಲ್ ಸೇಲ್ಸ್ ಹೆಡ್ ಆರ್‌ಎಸ್ ಜಮಾಲ್, ಐಡಿಯಲ್ ಐಸ್ ಕ್ರೀಂನ ಮುಕುಂದ್ ಕಾಮತ್, ಐಒಸಿಎಲ್‌ನ ವಿಭಾಗೀಯ ಮಾರಾಟ ವಿಭಾಗದ ಮುಖ್ಯಸ್ಥ ಯೋಗೇಶ್ ಪಾಟೀದಾರ್ , ಕಶರ್ಪ್ ಫಿಟ್ನೆಸ್‌ನ ಆನಂದ್ ಪ್ರಭು, ಗೃಹಿಣಿ ಮಸಾಲದ ಶುಭಾನಂದ ಮತ್ತು ಶಿವಾನಂದ ರಾವ್ ಮತ್ತು ತಾಜ್ ಸೈಕಲ್ ಕಂಪನಿಯ ಎಸ್ ಎಂ ಮುತ್ತಲಿಬ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ರಾಷ್ಟ್ರೀಯ ಸೈಕ್ಲಿಂಗ್ ಕ್ರೀಡಾಕೂಟದಲ್ಲಿ ಹಿರಿಯ ಮಹಿಳಾ ಸೈಕ್ಲಿಂಗ್ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಸೈಕ್ಲಿಸ್ಟ್ ಗ್ಲಿಯೋನಾ ಡಿ ಸೋಜ ಮತ್ತು ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆ ಮತ್ತು ಪುಣೆಯಿಂದ ಗೋವಾವರೆಗಿನ 642 ಕಿ.ಮೀ ಡೆಕ್ಕನ್ ಕ್ಲಿಫ್ ಹ್ಯಾಂಗರ್ ಸಹಿಷ್ಣುತೆ ಓಟದಲ್ಲಿ ಭಾಗವಹಿಸಿದ್ದ ಹಾರ್ದಿಕ್ ರೈ ಅವರ ಸಾಧನೆಗಾಗಿ ಅವರನ್ನು ಸನ್ಮಾನಿಸಲಾಯಿತು.

ರಾಜ್ಯಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಯುವ ಸೈಕ್ಲಿಸ್ಟ್ ಶಮಂತ್ ಭಟ್ ಅವರನ್ನು ಅಭಿನಂದಿಸಲಾಯಿತು. ವಿ ಆರ್ ಸೈಕ್ಲಿಂಗ್‌ನ ಅಧ್ಯಕ್ಷ ಸರ್ವೇಶ ಸಾಮಗ ಅವರು ಮಂಗಳೂರು ಸೈಕ್ಲೋಥಾನ್‌ನಲ್ಲಿ ಭಾಗವಹಿಸಿದವರನ್ನು ಅಭಿನಂದಿಸಿದರು.

ಸೈಕಲ್ ರ‍್ಯಾಲಿಗೆ ನೋಂದಾಯಿಸಿ ಪಾಲ್ಗೊಂಡವರಿಗೆ ಲಕ್ಕಿ ಡ್ರಾವನ್ನು ನಡೆಸಲಾಯಿತು. ಇದರಲ್ಲಿ ವಿಜೇತರಾದ ಮುಹಮ್ಮದ್ ದಿಯಾನ್ ಮತ್ತು ಇವಾನ್ ಡಿಸೋಜ ಅವರಿಗೆ ಎರಡು ಸೈಕಲ್‌ಗಳನ್ನು ಬಹುಮಾನವಾಗಿ ನೀಡಲಾಯಿತು.

















Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News