ಪಿಲಿಕುಳ: ವಿಶ್ವ ಶಾಂತಿ ದಿನದ ಅಂಗವಾಗಿ ವಾಕಥಾನ್

Update: 2024-09-21 16:21 GMT

ಮಂಗಳೂರು : ಅಹಿಂಸಾತ್ಮಕ ಹೋರಾಟದಿಂದ ಸ್ವಾತಂತ್ರ್ಯ ಪಡೆದ ಭಾರತವು ವಿಶ್ವಕ್ಕೆ ಶಾಂತಿಯ ಸಂದೇಶ ಪಸರಿಸಿದೆ. ಶಾಂತಿ, ಸೌಹಾರ್ದ ನೆಲೆಸಿದರೆ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ವಿ. ರಾವ್ ಹೇಳಿದರು.

ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ ಮತ್ತು ಯುವ ರೆಡ್‌ಕ್ರಾಸ್ ಮಂಗಳೂರು ವಿಶ್ವವಿದ್ಯಾಲಯದ ವತಿಯಿಂದ ವಿಶ್ವ ಶಾಂತಿ ದಿನದ ಅಂಗವಾಗಿ ಶನಿವಾರ ನಡೆದ ವಾಕಥಾನ್‌ನ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಇಂದು ಎಲ್ಲಾ ದೇಶಗಳಲ್ಲಿ ಕೋಟ್ಯಂತರ ಹಣ ರಕ್ಷಣಾ ವ್ಯವಸ್ಥೆಗಾಗಿ ವಿನಿಯೋಗವಾಗುತ್ತಿದೆ. ವಿಶ್ವದಲ್ಲಿ ಶಾಂತಿ ನೆಲೆಸಿದರೆ ಅದೇ ಹಣವನ್ನು ಶಿಕ್ಷಣ, ಆರೋಗ್ಯ ಸಹಿತ ಮೂಲಭೂತ ಸೌಕರ್ಯಗಳಿಗೆ ಬಳಸಬಹುದು ಎಂದರು.

ರೆಡ್‌ಕ್ರಾಸ್ ರಾಜ್ಯ ಘಟಕದ ಖಜಾಂಚಿ ಯತೀಶ್ ಬೈಕಂಪಾಡಿ ಮಾತನಾಡಿ ಯುವಶಕ್ತಿಯೇ ದೇಶದ ಅತೀ ದೊಡ್ಡ ಶಕ್ತಿ ಹಾಗೂ ಭವಿಷ್ಯದ ಭರವಸೆಯಾಗಿದೆ. ವಿದ್ಯಾರ್ಥಿಗಳು ಧರ್ಮ ಪ್ರೇರಿತ, ರಾಜಕೀಯ ಪ್ರೇರಿತ ವಿಚಾರಗಳಿಂದ ದೂರವಿದ್ದು ಶಾಂತಿದೂತರಾಗಿ ನಾಡಿನ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.

ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಿಲಿಕುಳ ಮುಖ್ಯ ವೃತ್ತದಿಂದ ಪ್ರಾದೇಶಿಕ ವಿಜ್ಞಾನ ಕೇಂದ್ರದವರೆಗೆ ನಡೆದ ವಾಕಥಾನ್‌ಗೆ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಚಾಲನೆ ನೀಡಿದರು.

ರೆಡ್‌ಕ್ರಾಸ್ ಜಿಲ್ಲಾ ಘಟಕದ ಖಜಾಂಚಿ ಮೋಹನ್ ಶೆಟ್ಟಿ ಕೆ., ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ, ಮಂಗಳೂರು ವಿ.ವಿ.ಯುವ ರೆಡ್‌ಕ್ರಾಸ್‌ನ ನೋಡಲ್ ಅಧಿಕಾರಿ ಡಾ. ಗಾಯತ್ರಿ ಎನ್., ಯುವ ರೆಡ್‌ಕ್ರಾಸ್‌ನ ನಿರ್ದೇಶಕ ಸಚೇತ್ ಸುವರ್ಣ, ಸಂಪನ್ಮೂಲ ವ್ಯಕ್ತಿ ಮೈಮ್ ರಾಮದಾಸ್ ಉಪಸ್ಥಿತರಿದ್ದರು. ಉಪನ್ಯಾಸಕ ನಟೇಶ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News