ಆಫ್ ರೋಡಿಂಗ್ ಸ್ಪರ್ಧೆಯ ಮೂಲಕ ಪ್ರವಾಸೋದ್ಯಮಕ್ಕೂ ಉತ್ತೇಜನ: ಯು.ಟಿ.ಖಾದರ್

Update: 2024-09-21 12:38 GMT

ಕೊಣಾಜೆ: ದೇಶದಲ್ಲೇ ಮೊದಲ ಬಾರಿಗೆ ಇಂತಹ ದೊಡ್ಡಮಟ್ಟಿನ ಆಫ್ ರೋಡಿಂಗ್ ಸ್ಪರ್ಧೆಯನ್ನು ಮುಡಿಪುವಿನಲ್ಲಿ ಆಯೋಜಿಸುವ ಮೂಲಕ ಮುಡಿಪು ದೇಶದಲ್ಲೇ ವಿಶೇಷವಾಗಿ ಗುರುತಿಸುವಂತಾಗಿದೆ. ಯುವ ಸಮುದಾಯಕ್ಕೆ ಆಕರ್ಷಕ ವಾಗುವ ಇಂತಹ ಒಂದು ಸಾಹಸಮಯ ಸ್ಪರ್ಧೆಯ ಮೂಲಕ ಪರೋಕ್ಷವಾಗಿ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಿದಂತಾಗಿದೆ ಎಂದು ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಹೇಳಿದರು.

ಅವರು ಶನಿವಾರ ಮುಡಿಪುವಿನಲ್ಲಿ ನಾರ್ಯಗುತ್ತು ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ 19-20 ಯುನೈಟೆಡ್ ಆಫ್ ರೋಡರ್ಸ್ ಆಯೋಜಿಸಿರುವ ಕುಡ್ಲ ಚಾಲೆಂಜ್ ಸೀಸನ್-4 ಆಫ್ ರೋಡಿಂಗ್ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

19-20 ಯುನೈಟೆಡ್ ಆಫ್ ರೋಡರ್ಸ್ ವತಿಯಿಂದ ನಡೆಯುತ್ತಿರುವ ಕುಡ್ಲ ಚಾಲೆಂಜ್ ಸೀಸನ್-4 ಆಫ್ ರೋಡಿಂಗ್ ಸ್ಪರ್ಧೆಯು ಯಶಸ್ವಿಯಾಗಿ ನಡೆಯಲಿ. ಇಂತಹ ಆಫ್ ರೋಡಿಂಗ್ ಸ್ಪರ್ಧೆಯ ಆಯೋಜನೆ ತುಂಬಾ ಕಷ್ಟ. ಇದಕ್ಕೆ ಸಹಕಾರ ಅಗತ್ಯ. ಹಾಗೂ ಇಂತಹ ಸಾಹಸಮಯ ಸ್ಪರ್ಧೆಗೆ ಮುಂದಿನ ದಿನಗಳಲ್ಲಿ ಸರಕಾರದಿಂದಲೂ ಪ್ರೋತ್ಸಾಹ ಸಿಗುವಂತಾಗಬೇಕು ಎಂದು ಹೇಳಿದರು.

ಕಣಂತೂರಿನ ಅನುವಂಶಿಕ ಆಡಳಿತ ಮೊಕ್ತೇಸರ ಪದ್ಮನಾಭ ರೈ ಯಾನೆ ಮಂಜು ಭಂಡಾರಿ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಮುಡಿಪು ಭಾಗದಲ್ಲಿ ಇಂತಹ ಸ್ಪರ್ಧೆಯು ನಡೆಯುತ್ತಿರುವುದು ಈ ಭಾಗದ ಯುವಕರಲ್ಲಿ ಉತ್ಸಾಹ ಹೆಚ್ಚಾಗಿದೆ. ಪ್ರತೀ ವರ್ಷವೂ ಇಂತಹ ಸ್ಪರ್ಧೆ ನಡೆಯುವಂತಾಗಲಿ ಎಂದರು.

ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಇಂತಹ ಸಾಹಸಮಯ ರೈಡಿಂಗ್ ಸ್ಪರ್ಧೆಯು ಯುವಕರ ಉತ್ಸಾಹವನ್ಬು ಇಮ್ಮಡಿ ಗೊಳಿಸುತ್ತದೆ. ಮುಡಿಪುವಿನಂತಹ ಗ್ರಾಮೀಣ ಪ್ರದೇಶದಲ್ಲಿ ಇಂತಹ ಕ್ರೀಡಾಕೂಟವು ನಡೆಯುತ್ತಿರುವುದು ಹೆಚ್ಚು ಪರಿಣಾಮಕಾರಿಯಾಗಿದೆ ಎಂದರು.

ನರಿಂಗಾನ ಲವ ಕುಶ ಕಂಬಳದ ಕಾರ್ಯಾಧ್ಯಕ್ಷರಾದ ಪ್ರಶಾಂತ್ ಕಾಜವ, ರತ್ನ ಎಜ್ಯುಕೇಶನ್ ಟ್ರಸ್ಟ್ ನ ರವೀಂದ್ರ ಶೆಟ್ಟಿ ಉಳಿದೊಟ್ಟು, ಮುಖಂಡರಾದ ಜಗದೀಶ್ ಆಳ್ವ ಕುವೆತ್ತಬೈಲ್, ಪ್ರವೀಣ್ ಆಳ್ವ ಮಯ್ಯಲ , ಮುಖಂಡರಾದ ಸಂತೋಷ್ ಕುಮಾರ್ ಬೋಳಿಯಾರ್, ಬಾಳೆಪುಣಿ ಪಂಚಾಯಿತಿ ಅಧ್ಯಕ್ಷ ಎ ಸುಕನ್ಯಾ ಶೆಟ್ಟಿ ಮುಖಂಡರಾದ ಸೀತಾರಾಂ , ಹರಿ ಪ್ರಸಾದ್ ರೈ ಕೊದಂಟಿ, ಪಂಚಾಯಿತಿ ಸದಸ್ಯೆ ನಮಿಮಾ , ನವೋದಯ ಪ್ರಾಂಶುಪಾಲರು ರಾಜೇಶ್ ಪಿ.,ಪಂಚಾಯಿತಿ ಸದಸ್ಯ ಕುಂಞಿಮೋನು, ಜುಬೈರ್, ಸೂಫಿಕುಂಞಿ, ಗೀತಾ ಭಂಡಾರಿ, ಅರುಣ್ ಡಿಸೋಜ, ದಿನೇಶ್ ಮಂಗಳೂರು, ಗಣೇಶ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆಯೋಜಕರಾದ ಅವಿನಾಶ್ ಅಡಪ, ನಾಸೀರ್ ಎನ್ ಎಸ್ ನಡುಪದವು, ವಿಜೇಶ್ ನಾಯ್ಕ್, ಋಷಿತ್ ಕುಮಾರ್ ಇದ್ದರು. ದಿವ್ಯರಾಜ್ ಕಾರ್ಯಕ್ರಮ ನಿರೂಪಿಸಿದರು.

ಸಾಹಸಮಯ ಜೀಫ್ ರೇಸಿಂಗ್ ಗೆ ವೇದಿಕೆಯಾದ ಮುಡಿಪು

ಗ್ರಾಮೀಣ ಪ್ರದೇಶವಾದ ಮುಡಿಪುವಿನಲ್ಲಿ ಇದೇ ಪ್ರಥಮ ಭಾರಿಗೆ ಇಂತಹ .ಎ 19-20 ಯುನೈಟಡ್ ಆಫ್ ರೋಡರ್ಸ್ ಕುಡ್ಲ ಚಾಲೆಂಜ್ ಸೀಸನ್ ೪ ಹೆಸರಿನಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಸಾಹಸಮಯ ಜೀಫ್ ರೇಸಿಂಗ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

ಈಗಾಗಲೇ 105 ವಾಹನಗಳು ಎಂಟ್ರಿಯನ್ನು ಪಡೆದಿದ್ದು, ಪೆಟ್ರೋಲ್ ಸ್ಟಾಕ್, ಡಿಸೀಲ್ ಸ್ಟಾಕ್, ಸೇರಿದಂತೆ ಐದು ವಿಧ ಗಳಲ್ಲಿ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಅಲ್ಲದೆ ಮಹಿಳೆಯರಿಗೂ ಉತ್ತೇಜನ ನೀಡುವ ಸಲುವಾಗಿ ಮಹಿಳಾ ಕ್ಲಾಸ ನ್ನು ಸ್ಪರ್ಧೆಯಲ್ಲಿ ಆಯೋಜಿಸಲಾಗಿದ್ದು, ಮಹಿಳಾ ಸ್ಪರ್ಧಿಗಳು ಕೂಡಾ ಭಾಗವಹಿಸಿದ್ದು ವಿಶೇಷವಾಗಿತ್ತು. ಪೆಟ್ರೋಲ್ ಸ್ಟಾಕ್, ಡಿಸೀಲ್ ಸ್ಟಾಕ್ ಸೇರಿದಂತೆ ಐದು ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತಿದೆ.

 ಬ್ರಿಜೇಶ್ ಚೌಟ ಹಾಗೂ ಯು.ಟಿ.ಖಾದರ್ ಆಫ್ ರೋಡ್ ಜೀಪ್ ರೈಡಿಂಗ್

ಮುಡಿಪುವಿನ ನಾರ್ಯಗುತ್ತು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕುಡ್ಲ ಚಾಲೆಂಜ್ ಸೀಸನ್-4 ಆಫ್ ರೋಡಿಂಗ್ ಸ್ಪರ್ಧೆಯ ಆರಂಭದಲ್ಲಿ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹಾಗೂ ಸಂಸದ ಬ್ರಿಜೇಶ್ ಚೌಟ ಅವರು ಸಾಹಸಮಯ ರಸ್ತೆಯಲ್ಲಿ ಆಕರ್ಷಕವಾಗಿ ಜೀಪ್ ಚಲಾಯಿಸಿ ಸಾಹಸ ಮೆರೆದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News