ಬಿ. ಅಹ್ಮದ್ ಹಾಜಿ ಮೊಹಿಯ್ಯುದ್ದೀನ್ ಮಸ್ಜಿದ್ ಉದ್ಘಾಟನೆ

Update: 2024-09-21 15:10 GMT

ಮಂಗಳೂರು: ತುಂಬೆ ಗ್ರೂಪ್‌ನ ಸ್ಥಾಪಕ ಡಾ. ತುಂಬೆ ಮೊಯ್ದಿನ್ ಅವರು ತನ್ನ ತಂದೆ ಮರ್ಹೂಂ ಬಿ. ಅಹ್ಮದ್ ಹಾಜಿ ಮೊಹಿಯ್ಯುದ್ದೀನ್ ಅವರ ಹೆಸರಿನಲ್ಲಿ ಕೊಣಾಜೆ ಸಮೀಪದ ಮುಡಿಪುವಿನ ಮಜ್ಲಿಸ್ ಎಜುಪಾರ್ಕ್‌ನಲ್ಲಿ ನಿರ್ಮಿಸಿದ ಬಿ. ಅಹ್ಮದ್ ಹಾಜಿ ಮೊಹಿಯ್ಯುದ್ದೀನ್ ಮಸ್ಜಿದ್‌ನ ಉದ್ಘಾಟನೆಯು ಶನಿವಾರ ನೆರವೇರಿತು.


ಉಡುಪಿ ಸಂಯುಕ್ತ ಖಾಝಿ ಅಲ್ಹಾಜ್ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಮಸೀದಿಯನ್ನು ಉದ್ಘಾಟಿಸಿ ದುಆಗೈದರು.

ಮುಸ್ಲಿಂ ಸಮುದಾಯಕ್ಕೆ ಸಮನ್ವಯ ಶಿಕ್ಷಣದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸ್ಥಾಪಿಸಲಾದ ಎಜುಪಾರ್ಕ್‌ಗೆ ಸರ್ವರ ಸಹಕಾರ ಲಭಿಸಿದೆ. ಇದೀಗ ಕೊಡುಗೈ ದಾನಿ, ತುಂಬೆ ಗ್ರೂಪ್‌ನ ಸ್ಥಾಪಕ ಡಾ. ತುಂಬೆ ಮೊಯ್ದಿನ್ ಅವರು ತನ್ನ ತಂದೆ ಮರ್ಹೂಂ ಬಿ. ಅಹ್ಮದ್ ಹಾಜಿ ಮೊಹಿಯ್ಯುದ್ದೀನ್ ಅವರ ಹೆಸರಿನಲ್ಲಿ ಮಸೀದಿಯನ್ನು ನಿರ್ಮಿಸಿಕೊಟ್ಟಿದ್ದಾರೆ. ಸಮಾಜದಲ್ಲಿ ಒಳ್ಳೆಯ ಮನಸ್ಸಿನ ಸಾಕಷ್ಟು ಮಂದಿ ಇದ್ದಾರೆ ಎಂಬುದಕ್ಕೆ ಡಾ. ತುಂಬೆ ಮೊಯ್ದಿನ್‌ರಂತಹವರು ಸಾಕ್ಷಿ ಎಂದು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಜ್ಲಿಸ್ ಎಜುಪಾರ್ಕ್‌ನ ಸಂಸ್ಥಾಪಕ ಶರಫ್ಫುಸ್ಸಾದಾತ್ ಸಯ್ಯಿದ್ ಅಶ್ರಫ್ ಅಸ್ಸಖಾಫ್ ಅಲ್ ಮದನಿ ತಂಙಳ್ ಆದೂರು ಹೇಳಿದರು.


ತುಂಬೆ ಗ್ರೂಪ್‌ನ ಸ್ಥಾಪಕ ಡಾ. ತುಂಬೆ ಮೊಯ್ದಿನ್ ಅವರು ತನ್ನ ತಂದೆ ಮರ್ಹೂಂ ಬಿ. ಅಹ್ಮದ್ ಹಾಜಿ ಮೊಹಿಯ್ಯುದ್ದೀನ್ ಅವರ ಹೆಸರಿನಲ್ಲಿ ಉಳ್ಳಾಲ ತಾಲೂಕಿನ ಮುಡಿಪು ಹೋಬಳಿ ಕೇಂದ್ರದಲ್ಲಿ ಸುಮಾರು 1.35 ಕೋ.ರೂ. ವೆಚ್ಚದಲ್ಲಿ ಭವ್ಯ ಮಸೀದಿಯನ್ನು ನಿರ್ಮಿಸಿಕೊಟ್ಟಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಈ ಮಸೀದಿಯು ಉನ್ನತ ಕೇಂದ್ರವಾಗಿ ರೂಪುಗೊಳ್ಳಲಿ ಎಂದು ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಆಶಿಸಿದರು.


ಯೆನೆಪೊಯ ಕುಟುಂಬದ ಪ್ರಥಮ ಮೊಮ್ಮಗ ತುಂಬೆ ಗ್ರೂಪ್‌ನ ಸ್ಥಾಪಕ ಡಾ. ತುಂಬೆ ಮೊಯ್ದಿನ್ ತನ್ನ ತಂದೆ ಮರ್ಹೂಂ ಬಿ. ಅಹ್ಮದ್ ಹಾಜಿ ಮೊಹಿಯ್ಯುದ್ದೀನ್‌ರ ಹೆಸರಿನಲ್ಲಿ ಈ ಪರಿಸರದಲ್ಲಿ ಮಸೀದಿ ನಿರ್ಮಿಸಿರುವುದು ಅರ್ಥಪೂರ್ಣವಾಗಿದೆ. ತುಂಬೆ ಕುಟುಂಬವು ನಾಡಿನ ಅನೇಕ ಮಸೀದಿ, ಮದ್ರಸಗಳ ನಿರ್ಮಾಣಕ್ಕೆ ಸಾಕಷ್ಟು ನೆರವು ನೀಡಿದೆ. ತುಂಬೆ ಹಾಜಿಯ ಪರಿಶ್ರಮ, ದೂರದೃಷ್ಟಿ, ಸಮಯ ಪ್ರಜ್ಞೆಯು ನಮಗೆ ಆದರ್ಶಪ್ರಾಯವಾಗಿದೆ. ಮುಂದಿನ ದಿನಗಳಲ್ಲಿ ಇದು ಧಾರ್ಮಿಕ ಶಕ್ತಿ ಕೇಂದ್ರವಾಗಲಿ ಎಂದು ಯೆನೆಪೊಯ ವಿವಿ ಕುಲಾಧಿಪತಿ ಡಾ. ಯೆನೆಪೊಯ ಅಬ್ದುಲ್ಲಾ ಕುಂಞಿ ಹೇಳಿದರು.


ಸುಮಾರು 27 ವರ್ಷದಿಂದ ಯುಎಇಯಲ್ಲಿರುವ ನಾನು ವರ್ಷಕ್ಕೆ ಮೂರ್ನಾಲ್ಕು ಬಾರಿ ಊರಿಗೆ ಬರುತ್ತಿರುವೆ. ಹೀಗೆ ಬಂದಾಗಲೆಲ್ಲಾ ಸ್ಪೀಕರ್ ಯು.ಟಿ.ಖಾದರ್ ಮತ್ತವರ ಸಹೋದರ ಯು.ಟಿ. ಇಫ್ತಿಕಾರ್ ಅಲಿ ಅವರನ್ನು ಭೇಟಿಯಾಗುವು ದುಂಟು. ಹಿಂದೊಮ್ಮೆ ಊರಿಗೆ ಬಂದಾಗ ಖಾದರ್‌ರ ಮನೆಗೆ ಹೋಗಿದ್ದೆ. ಅಲ್ಲಿ ಆದೂರು ತಂಙಳ್ ಕೂಡಾ ಇದ್ದರು. ಮೂವರು ಮುಡಿಪುವಿನಲ್ಲಿ ಮಸೀದಿ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದರು. ಅದರಂತೆ ನಾನು ನನ್ನ ತಂದೆಯ ಹೆಸರಿನಲ್ಲಿ ಮಸೀದಿಯ ನಿರ್ಮಿಸಿಕೊಡುವ ಬಗ್ಗೆ ಭರವಸೆ ನೀಡಿದೆ. ಇಂದು ಈ ಮಸೀದಿಯು ಉದ್ಘಾಟನೆಗೊಂಡಿವೆ. ಹಾಗಾಗಿ ನನ್ನ ಪಾಲಿಗೆ ಇಂದು ತುಂಬಾ ಸಂತೋಷದ ದಿನವಾಗಿದೆ. ನನ್ನ ತಂದೆ ಬಿ. ಅಹ್ಮದ್ ಹಾಜಿ ಮೊಹಿಯ್ಯುದ್ದೀನ್ ಮತ್ತು ಈ ಎಜುಪಾರ್ಕ್‌ನ ಸಂಸ್ಥಾಪಕ ಆದೂರು ತಂಙಳ್ ಇಬ್ಬರೂ ಶಿಕ್ಷಣ ಪ್ರೇಮಿಗಳು ಎಂದು ಹೇಳಲು ನನಗೆ ತುಂಬಾ ಖುಷಿಯಾಗುತ್ತಿವೆ ಎಂದು ತುಂಬೆ ಗ್ರೂಪ್‌ನ ಸ್ಥಾಪಕ ಡಾ. ತುಂಬೆ ಮೊಯ್ದಿನ್ ಹೇಳಿದರು.


ಕಾರ್ಯಕ್ರಮದಲ್ಲಿ ತುಂಬೆ ಗ್ರೂಪ್‌ನ ಸ್ಥಾಪಕ ಡಾ. ತುಂಬೆ ಮೊಯ್ದಿನ್ ಹಾಗೂ ಯೆನೆಪೊಯ ವಿವಿ ಕುಲಾಧಿಪತಿ ಡಾ. ಯೆನೆಪೊಯ ಅಬ್ದುಲ್ಲಾ ಕುಂಞಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ತುಂಬೆ ಕುಟುಂಬದ ಬಿ.ಎ. ಅಶ್ರಫ್, ಸಯ್ಯಿದ್ ಶಹೀರ್ ಅಲ್ ಬುಖಾರಿ ಮಳ್‌ಹರ್ ತಂಳ್, ಡಾ. ಎಂಎಸ್‌ಎಂ ಅಬ್ದುರ‌್ರಶೀದ್ ಝೈನಿ ಕಾಮಿಲ್, ಬಾದುಷ ಸಖಾಫಿ ಆಲಪುಝ, ಮುಹಮ್ಮದಲಿ ಸಖಾಫಿ ಅಶ್‌ಹರಿಯ್ಯ, ಕೊಲಂಬಾಡಿ ಸಅದಿ, ಉಳ್ಳಾಲ ದಗಾದ ಅಧ್ಯಕ್ಷ ಹನೀಫ್ ಹಾಜಿ, ಅಶ್ರಫ್ ಸಅದಿ ಅಲ್ ಮಳ್‌ಹರಿ, ಮಹ್ಮೂದ ಹಾಜಿ, ಎಸ್.ಎಂ. ರಶೀದ್ ಹಾಜಿ, ಸಂತೋಷ್ ಕುಮಾರ್ ರೈ ಬೋಳಿಯಾರ್, ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಎಸ್.ಕೆ. ಅಬ್ದುಲ್ ಖಾದರ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.


ಹಾಫಿಝ್ ಇರ್ಫಾನ್ ಕಿರಾಅತ್ ಪಠಿಸಿದರು. ಆಸ್ಟ್ರೇಲಿಯಾದ ಅಮೀರ್ ಹಸ್ಸನ್ ಕಾರ್ಯಕ್ರಮ ನಿರೂಪಿಸಿದರು. ಸಯ್ಯಿದ್ ಮಿರಾಜ್ ಅಲ್ ಹಾದಿ ತಂಳ್ ವಂದಿಸಿದರು.





































Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News