ಮಂಗಳೂರು : ಜ.11- 12ರಂದು ತಣ್ಣೀರುಬಾವಿಯಲ್ಲಿ 'ಬೀಚ್ ಉತ್ಸವ'

Update: 2025-01-07 09:37 GMT

ಮಂಗಳೂರು, ಜ.7: ಕರಾವಳಿ ಉತ್ಸವದ ಪ್ರಯುಕ್ತ ಜಿಲ್ಲಾಡಳಿತವು ಮುಡಾ, ಎನ್ಎಂಪಿಟಿ ಹಾಗೂ ರೋಹನ್ ಕಾರ್ಪೊರೇಶನ್ ಸಹಭಾಗಿತ್ವದಲ್ಲಿ ಆಯೋಜಿಸಿರುವ 'ಬೀಚ್ ಉತ್ಸವ' ತಣ್ಣೀರುಬಾವಿಯಲ್ಲಿ ಜ.11 ಮತ್ತು 12ರಂದ ಮರು ನಿಗದಿಪಡಿಸಲಾಗಿದೆ ಎಂದು ಬೀಚ್ ಉತ್ಸವ ಸಮಿತಿಯ ಅಧ್ಯಕ್ಷ, ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜ.11ರಂದು ಸಂಜೆ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, 6 ಗಂಟೆಗೆ ನೃತ್ಯ ಉತ್ಸವ ಆಯೋಜಿಸಲಾಗಿದೆ. ಬಳಿಕ ಕದ್ರಿ ಮಣಿಕಾಂತ್ ಕದ್ರಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಜ.12ರಂದು ಬೆಳಗ್ಗೆ 5:30ಕ್ಕೆ ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದಿಂದ ಕಾರ್ಯಕ್ರಮ, 6:30ಕ್ಕೆ ಉದಯರಾಗ, 9ರಿಂದ ಜಲಕ್ರೀಡೆಗಳು ಆರಂಭಗೊಳ್ಳಲಿದೆ. 9:30ಕ್ಕೆ ಮರಳು ಶಿಲ್ಪ ಸ್ಪರ್ಧೆ ನಡೆಯಲಿದೆ. ಸಂಜೆ 5:30ಕ್ಕೆ ನೃತ್ಯೋತ್ಸವ, 6:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಬಳಿಕ ರಘು ದೀಕ್ಷಿತ್ ರಿಂದ ಲೈವ್ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಅವರು ವಿವರಿಸಿದರು.

ಸುರಕ್ಷತೆಗೆ ಆದ್ಯತೆ

ಬೀಚ್ ಶುಚಿತ್ವಕ್ಕೆ ಸಂಬಂಧಿಸಿ ಮಂಗಳೂರು ಮಹಾನಗರ ಪಾಲಿಕೆಯಿಂದ ವ್ಯವಸ್ಥೆ ಮಾಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಸ್ಥಳೀಯ ಮೀನುಗಾರರ ಜೀವರಕ್ಷಕ ತಂಡ, ಕರಾವಳಿ ರಕ್ಷಣಾ ಪಡೆ, ಸ್ಥಳೀಯ ಪೊಲೀಸರ ತಂಡ ಮಾಡಲಾಗಿದೆ. ಅಗತ್ಯ ಲೈಟಿಂಗ್ ವ್ಯವಸ್ಥೆಯ ಜೊತೆ ಬ್ಯಾರಿಕೇಡ್ಗಳನ್ನು ಅಳವಡಿಸಲಾಗುವುದು. ಬೀಚ್ನಲ್ಲಿ ಸಮುದ್ರದ ಬಳಿ ಜಲ ಸಾಹಸ ಕ್ರೀಡೆಗಳಿಗೆ ಸಂಜೆ 6:30ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಬೀಚ್ ಉತ್ಸವ ರಾತ್ರಿ 9:30ರವರೆಗೆ ಇರಲಿದೆ ಎಂದು ಅವರು ಹೇಳಿದರು.

ಕರಾವಳಿ ಅಂದರೆ ಬೀಚ್. ಇಲ್ಲಿನ ಬೀಚ್ಗಳ ಮೂಲಕ ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಬೀಚ್ ಉತ್ಸವ ಪ್ರಮುಖ ಪಾತ್ರ ವಹಿಸಲಿದೆ. ಕರಾವಳಿ ಉತ್ಸವ ಈಗಾಗಲೇ ಜನಾಕರ್ಷಣೆ ಪಡೆದಿದ್ದು, ಬೀಚ್ ಉತ್ಸವದ ಮೂಲಕ ಈ ಉತ್ಸವವನ್ನು ಇನ್ನಷ್ಟು ಉತ್ತುಂಗಕ್ಕೆ ಏರಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನಗರವಾಸಿಗಳಿಗೆ ಕರೆ ನೀಡಿದರು.

ಈಸಂದರ್ಭ ಬೀಚ್ ಉತ್ಸವದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಅರುಣ್ ಕುಮಾರ್, ಮುಡಾ ಆಯುಕ್ತೆ ನೂರ್ ಜಹರಾ ಖಾನಂ, ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿಯ ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು.

ಕರಾವಳಿ ಉತ್ಸವಕ್ಕೆ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಕಳೆದ ರವಿವಾರ ಕರಾವಳಿ ಉತ್ಸವ ಮೈದಾನಕ್ಕೆ ಸುಮಾರು 12000ಕ್ಕೂ ಅಧಿಕ ಮಂದಿ ಹಾಗೂ ಶ್ವಾನ ಪ್ರದರ್ಶನದಲ್ಲಿ 3,500ಕ್ಕೂ ಅಧಿಕ ಮಂದಿ ಸೇರಿದ್ದರು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News