ಜ.11-12ರಂದು ಮಂಡ್ಯದಲ್ಲಿ ಸಕಾಡೋತ್ಸವ: ದ.ಕ ಜಿಲ್ಲೆಯಿಂದ 36 ಮಕ್ಕಳು ಭಾಗಿ

Update: 2025-01-08 08:31 GMT

ಮಂಗಳೂರು, ಜ.8: ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಕಾಡೆಮಿ ಫಾರ್ ಡಿಫರೆಂಟ್ಲಿ ಏಬಲ್ಡ್ (ಸಕಾಡ) ವತಿಯಿಂದ ಜ. 11 ಮತ್ತು 12ರಂದು ಭಿನ್ನ ಸಾಮರ್ಥ್ಯದ ಮಕ್ಕಳ ರಾಜ್ಯ ಮಟ್ಟದ ಜನಪದ ನೃತ್ಯ ಸ್ಪರ್ಧೆ ‘ಸಕಾಡೋತ್ಸವ 2025’ ನಡೆಯಲಿದೆ. ದ.ಕ. ಜಿಲ್ಲೆಯಲ್ಲಿ ಮೂರು ಶಾಲೆಗಳ 36 ಮಕ್ಕಳು ಭಾಗವಹಿಸಲಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸಕಾಡದ ಗೌರವ ಅಧ್ಯಕ್ಷ ಮಹಾಬಲ ಮಾರ್ಲ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 30 ಶಾಲೆಗಳು ಭಾಗವಹಿಸಲಿದ್ದು, ಒಟ್ಟು 300 ವಿಶೇಷ ಮಕ್ಕಳು, 200ಕ್ಕೂ ಅಧಿಕ ಅವರ ಸಹಾಯಕರು ಭಾಗವಹಿಸುವ ನಿರೀಕ್ಷೆ ಇದೆ. ಮಂಡ್ಯದ ಆಶಾಸದನ ವಿಶೇಷ ಶಾಲೆಯ ಸಹಯೋಗದೊಂದಿಗೆ ಅಲ್ಲಿನ ಸುಭಾಷ್‌ನಗರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಾಂಥೊಂ ಪಬ್ಲಿಕ್ ಸ್ಕೂಲ್‌ನನಲ್ಲಿ ಎರಡು ದಿನ ವಾಸ್ತವ್ಯವದ ವ್ಯವಸ್ಥೆ ಮಾಡಲಾಗಿದೆ. ಸಾಂತೋಮೆ ಪಬ್ಲಿಕ್ ಸ್ಕೂಲ್‌ನ 50 ಮಂದಿ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಸಹಕರಿಸಲಿದ್ದಾರೆ ಎಂದು ಸಕಾಡದ ಪ್ರಧಾನ ಕಾರ್ಯದರ್ಶಿ ಡಾ. ವಸಂತ ಕುಮಾರ್ ಶೆಟ್ಟಿ ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು.

11ರಂದು ಬೆಳಗ್ಗೆ 9ಕ್ಕೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯುದ್ಯಾನವದದಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನಕ್ಕೆ ಪಥ ಸಂಚಲನ ನಡೆಯಲಿದೆ. 10.30ಕ್ಕೆ ಸೆಂಟ್ ಥಾಮಸ್ ಮಿಷನ್ ಸೊಸೈಟಿ ವಲಯ ನಿರ್ದೇಶಕ ವಂ. ಸೋಜನ್ ಎಂ.ಎಸ್.ಟಿ. ಆಶೀರ್ವಚನ ನೀಡಲಿದ್ದು, ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ಉದ್ಘಾಟನೆ ನೆರವೇರಿಸಲಿದ್ದಾರೆ. ರಾಜ್ಯ ಸರಕಾರದ ವಿಕಲಚೇತನರ ಮತ್ತು ಹಿರಿಯನಾಗರಿಕರ ಸಬಲೀಕರಮ ನಿರ್ದೇಶನಾಲಯದ ನಿರ್ದೇಶಕ ರಾಘವೇಂದ್ರ ಟಿ. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಕಾಡೋತ್ಸವದ ಪ್ರಥಮ ಸ್ಥಾನ ವಿಜೇತರಿಗೆ 15,000 ರೂ., ದ್ವಿತೀಯ ತಂಡಕ್ಕೆ 12,000 ರೂ. ಹಾಗೂ ತೃತೀಯ ಸ್ಥಾನ ವಿಜೇತರಿಗೆ 10,000 ರೂ. ನಗದು ಬಹುಮಾನ ನೀಡಲಾಗವುದು. 10 ಸಮಧಾನಕರ ಬಹುಮಾನವಲ್ಲದೆ, ಪ್ರತಿ ತಂಡಕ್ಕೆ ತಲಾ 2000 ರೂ ನಗದು ನೀಡಲಾಗುವುದು ಎಂದು ಅವರು ಹೇಳಿದರು.

ಗೋಷ್ಟಿಯಲ್ಲಿ ಸಕಾಡೋತ್ಸವ ಸಂಚಾಲಕರಾದ ಡಾ. ಕಾಂತಿ ಹರೀಶ್, ಮುಹಮ್ಮದ್ ಬಶೀರ್, ಆ್ಯಗ್ನೆಸ್ ಕುಂದರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News