ಜ.11ರಂದು ಉಳ್ಳಾಲ ನರಿಂಗಾನ ಕಂಬಳೋತ್ಸವ: ಸ್ಪೀಕರ್ ಯು.ಟಿ.ಖಾದರ್

Update: 2025-01-08 15:07 GMT

ಮಂಗಳೂರು, ಜ.8: ವಿಧಾನಸಭೆ ಸ್ಪೀಕರ್, ಶಾಸಕ ಯು.ಟಿ.ಖಾದರ್ ನೇತೃತ್ವದ ನರಿಂಗಾನ ಕಂಬಳ ಸಮಿತಿ ಆಶ್ರಯದಲ್ಲಿ ನರಿಂಗಾನ ಗ್ರಾಮ ಪಂಚಾಯತ್ ಸಹಕಾರದಲ್ಲಿ ನರಿಂಗಾನ ಗ್ರಾಮದ ಮೋರ್ಲ-ಬೋಳದಲ್ಲಿ ತೃತೀಯ ವರ್ಷದ ಹೊನಲು ಬೆಳಕಿನ ಲವ-ಕುಶ ಜೋಡುಕರೆ ನರಿಂಗಾನ ಕಂಬಳೋತ್ಸವ ಜ.11ರಂದು ಬೆಳಗ್ಗೆ 8.30ರಿಂದ ನಡೆಯಲಿದೆ.

ಈ ಬಾರಿ ವಿಶೇಷ ಆಕರ್ಷಣೆಯಾಗಿ ಸಿಎಂ ಸಿದ್ದರಾಮಯ್ಯ ಸಂಜೆ 4.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸ್ಪೀಕರ್ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಪಜೀರಿನಲ್ಲಿ 25 ವರ್ಷ ಕಂಬಳ ನಡೆಸಿದ, ಕೋಣದ ಯಜಮಾನ ವೆಂಕಪ್ಪ ಕಾಜವ ಮಿತ್ತಕೋಡಿ ಗೌರವಾಧ್ಯಕ್ಷತೆಯಲ್ಲಿ ಅದೇ ಅನುಭವ ಪಡೆದುಕೊಂಡಿರುವ ಅವರ ಪುತ್ರ ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ ಕಾರ್ಯಧ್ಯಕ್ಷತೆಯಲ್ಲಿ ಎರಡು ವರ್ಷ ನಡೆದ ಕಂಬಳ ಯಶಸ್ಸು ಕಂಡಿದೆ ಎಂದರು.

ಕಂಬಳ ಕೋಣಗಳ ಯಜಮಾನ ದಿವಂಗತ ಸುಧಾಕರ ಆಳ್ವ ಮೋರ್ಲ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸ್ಪರ್ಧಾ ಕೂಟದಲ್ಲಿ ಭಾಗವಹಿಸಿದ ಕೋಣದ ಯಜಮಾನರಿಗೆ ಬೆಳ್ಳಿಯ ಪದಕ ಹಾಗೂ ಟ್ರೋಫಿ ಕೊಟ್ಟು ಗೌರವಿಸಲಾಗುವುದು. ವಿಜೇತ ಕೋಣಗಳನ್ನು ಓಡಿಸಿದ ಓಟಗಾರರಿಗೆ ಪ್ರಶಸ್ತಿ ಪತ್ರದೊಂದಿಗೆ ಬಹುಮಾನ ನೀಡಿ ಗೌರವಿಸಲಾಗುವುದು ಎಂದರು.

ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಕಂಬಳೋತ್ಸವ ಉದ್ಘಾಟಿಸಲಿದ್ದು, ಶಾಂತಿಪಳಿಕೆ ಕ್ಷೇತ್ರದ ಪ್ರಧಾನ ತಂತ್ರಿ ವರ್ಕಾಡಿ ಹೊಸಮನೆ ರಾಜೇಶ್ ತಾಳಿತ್ತಾಯ ದ್ವೀಪ ಪ್ರಜ್ವಲನ ಮಾಡಲಿದ್ದಾರೆ. ಡಿಸಿ ಮುಲ್ಲೈ ಮುಗಿಲನ್, ಸಯ್ಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಪಿ.ಜಿ.ಹನೀಫ್, ಬೋಳ ಸಂತ ಲಾರೆನ್ಸ್ ಚರ್ಚ್ ಧರ್ಮಗುರು ಫಾದರ್ ಫೆಡ್ರಿಕ್ ಕೊರೆಯ ಮತ್ತಿತರರು ಭಾಗವಹಿಸಲಿದ್ದಾರೆ. ನರಿಂಗಾನ ಗ್ರಾಪಂ ಅಧ್ಯಕ್ಷ ನವಾಝ್ ನರಿಂಗಾನ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಹೇಳಿದರು.

ಸಮಾರೋಪದಲ್ಲಿ ಮುಖ್ಯಮಂತ್ರಿ ಸಹಿತ ಗಣ್ಯರು, ಚಲನಚತ್ರ ನಟರಾದ ಸುನಿಲ್ ಶೆಟ್ಟಿ, ರೂಪೇಶ್ ಶೆಟ್ಟಿ, ಅರವಿಂದ್ ಬೋಳಾರ, ಪ್ರದೀಪ್ ಆಳ್ವ ಕದ್ರಿ, ದೇವದಾಸ್ ಕಾಪಿಕಾಡ್, ಮಂಜು ಎಂ.ರೈ, ಭೋಜರಾಜ್ ವಾಮಂಜೂರು, ಸೂರಜ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು ಎಂದರು.

ನರಿಂಗಾನ ಗ್ರಾಮೋತ್ಸವ

ಜ.13ರಂದು ಸ್ನೇಹ ಸಮ್ಮಿಲನ, ಪ್ರತಿಭಾ ಪುರಸ್ಕಾರ, ಜಿಲ್ಲೆಯ ಪ್ರಸಿದ್ದ ಕಲಾವಿದರಿಂದ ನತ್ಯ ವೈಭವ, ನಾನಾ ಸ್ಪರ್ಧೆಗಳ ಸಹಿತ ನರಿಂಗಾನ ಗ್ರಾಮೋತ್ಸವ ನಡೆಯಲಿದೆ ಎಂದು ಅವರ ಹೇಳಿದರು.

ತುಳುವಿಗೆ 2ನೇ ಸ್ಥಾನ ಸಿಎಂ ಸಂವಾದ

ತುಳು ಭಾಷೆಗೆ ರಾಜ್ಯದ ಎರಡನೇ ಭಾಷೆ ಸ್ಥಾನ ನೀಡುವ ಕುರಿತು ಎಲ್ಲ ವರದಿ ತರಿಸಿಕೊಂಡಿದ್ದು, ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಜತೆ ಕರಾವಳಿಯ ಸಾಹಿತಿ, ಕಲಾವಿದರ ಜತೆ ಶೀಘ್ರ ಸಂವಾದ ಏರ್ಪಡಿಸಲಾಗುವುದು. ಉಳ್ಳಾಲ ಕ್ಷೇತ್ರ ಒಂದು ಸಾವಿರ ಕೋಟಿಯ ನಾನಾ ಯೋಜನೆಗಳ ಶಿಲಾನ್ಯಾಸ ಸಂದರ್ಭದಲ್ಲಿ ಸಿಎಂ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಯು.ಟಿ.ಖಾದರ್ ಹೇಳಿದರು.

ನಕ್ಸಲರು ಶರಣಾದರೆ ತಪ್ಪೇನು?

ಕಾಡಿನಲ್ಲಿದ್ದ ನಕ್ಸಲರು ಶರಣಾಗತರಾಗಿ ಮುಖ್ಯವಾಹಿನಿಗೆ ಬಂದು ಒಳ್ಳೆಯ ಬದುಕು ನಡೆಸಿದರೆ ತಪ್ಪೇನು ಎಂದು ಸ್ಪೀಕರ್ ಯು.ಟಿ.ಖಾದರ್ ಪ್ರಶ್ನಿಸಿದರು.

ಹಿಂದೆ ದೇಶಮಟ್ಟಲ್ಲೇ ನಕ್ಸಲರ ಶರಣಾಗತಿ ನಡೆದಿತ್ತು. ರಕ್ತಪಾತ ಬಿಟ್ಟು ಯಾರಾದರೂ ಒಳ್ಳೆಯವರಾದರೆ ಆಗಲಿ. ಕೇಸುಗಳು ನಡೆಯುತ್ತಿರುತ್ತವೆ. ಧನಾತ್ಮಕವಾಗಿ ಯೋಚಿಸಿ ಎಂದು ಪತ್ರಕರ್ತರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News