ಗುಜ್ಜರಕೆರೆ ನೀರು ಬಳಕೆಗೆ ಯೋಗ್ಯವಲ್ಲ: ಪ್ರಯೋಗಾಲಯ ವರದಿಯಲ್ಲಿ ಮತ್ತೆ ಉಲ್ಲೇಖ
ಮಂಗಳೂರು, ಜ.8: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಲುಷಿತ ನೀರು ಪೂರೈಕೆಯ ಆರೋಪಗಳ ನಡುವೆಯೇ ಇತಿಹಾಸ ಪ್ರಸಿದ್ಧ ಗುಜ್ಜರಕೆರೆ, ಸ್ಮಾರ್ಟ್ ಸಿಟಿಯಿಂದ ಅಭಿವೃದ್ಧಿ ಪಡಿಸಲಾಗಿದ್ದರೂ, ಕೆರೆಯ ನೀರು ಕಲುಷಿತವಾಗಿಯೇ ಮುಂದುವರಿದಿರುವುದು ಇತ್ತೀಚಿನ ಪ್ರಯೋಗಾಲಯದ ವರದಿಯಲ್ಲಿ ಕಂಡು ಬಂದಿದೆ. ಪ್ರಯೋಗಾಲಯದ ವರದಿಯಲ್ಲಿ ನೀರು ಬಳಕೆ ಯೋಗ್ಯವಲ್ಲ ಎಂಬುದು ಮತ್ತೊಮ್ಮೆ ಉಲ್ಲೇಖವಾಗಿದೆ.
ಗುಜ್ಜರ ಕೆರೆಯನ್ನು ಅಭಿವೃದ್ಧಿಗೊಳಿಸುವ ಸಂದರ್ಭ ಕೆರೆಗೆ ಕಲುಷಿತ ನೀರು ಸೇರುವ ಬಗ್ಗೆ ಸಮರ್ಪಕ ವ್ಯವಸ್ಥೆ ಕೈಗೊಳ್ಳದೆ ದುಂದು ವೆಚ್ಚ ಮಾಡಿರುವ ಕಾರಣ ಕೆರೆ ಕಲುಷಿತವಾಗಿಯೇ ಮುಂದುವರಿಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆರೆಯ ನೀರಿನಲ್ಲಿ ವಿಷಕಾರಿ ಅಂಶಗಳಿರುವುದು ಪ್ರಯೋಗಾಲಯದ ವರದಿಯೇ ಸಾಬೀತುಪಡಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೆರೆಯ ಸಂರಕ್ಷಣೆ, ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವದ ಉಳಿವಿಗೆ ಕಳೆದ ಎರಡು ದಶಕಗಳಿಂದ ಹೋರಾಡುತ್ತಿರುವ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ ರಿ. ವತಿಯಿಂದ ಇತ್ತೀಚೆಗೆ ನೀರಿನ ಗುಣಮಟ್ಟ ಪರೀಕ್ಷೆ ಮಾಡಲಾಗಿದ್ದು, ಡಿ. 12ರ ಪ್ರಯೋಗಾಲಯದ ವರದಿಯ ಪ್ರಕಾರ ನೀರಿನಲ್ಲಿ ಇರಬೇಕಾದ ಕಾಲಿಫಾರಂ ಮತ್ತು, ಫೇಶಲ್ ಕೋಲಿಫಾರಂ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿರುವುದು ಪತ್ತೆಯಾಗಿದೆ.
ಕೆರೆಯ ನೀರಿನಲ್ಲಿ ವಿಷಕಾರಿ ಅಂಶ ಪತ್ತೆಯಾಗಲು ಕಾರಣವೇನು? ಕೆರೆಗೆ ಒಳಚರಂಡಿ ನೀರು ಅಥವಾ ಇತರ ಮೂಲಗಳಿಂದ ಕೊಳಚೆ ನೀರು ಸೇರುತ್ತಿದೆಯೇ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳುವಲ್ಲಿ ನಗರ ಪಾಲಿಕೆ ಆಡಳಿತ ವಿಫಲವಾಗಿದೆ ಎಂದು ಸ್ಥಳೀಯರು ಆಕ್ಷೇಪಿಸಿದ್ದಾರೆ.
ಗುಜ್ಜರಕೆರೆಯು ಯೋಗಿ ಗೋರಕ್ಷನಾಥರಿಂದ ನಿರ್ಮಿತವಾಗಿದ್ದು , ಸ್ಥಳೀಯ ಬೋಳಾರ ಹಳೇಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ತೀರ್ಥಕೆರೆಯೂ ಆಗಿದೆ. ಸ್ಥಳೀಯ ಪರಿಸರಕ್ಕೆ ಅಂತರ್ಜಲ ಸಂರಕ್ಷಣಾ ಆಗರವಾಗಿದ್ದು , ಈ ಕೆರೆಯ ಪರಿಸರವೂ ತನ್ನದೇ ಆದ ಧಾರ್ಮಿಕ ಮಹತ್ವವನ್ನು ಹೊಂದಿದೆ. ಕೆರೆಯ ಮಹತ್ವಕ್ಕೆ ಸಂಬಂಧಿತ ಅಭಿವೃದ್ಧಿ ಕಾರ್ಯಗಳನ್ನು ನಡೆಸದೇ ಮೇಲ್ನೋಟಕ್ಕೆ ನಯನ ಮನೋಹರವಾಗಿ ಕಾಣುವಂತಹ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ . ಕೆರೆಯ ನೀರಿನಲ್ಲಿ ಪ್ಲಾಸ್ಟಿಕ್ ಚೀಲ, ಬಾಟಲಿಗಳನ್ನು ಎಸೆದು ಜಲಚರಗಳ ಜೀವಕ್ಕೂ ಕುತ್ತು ತರುವ ಸ್ಥಿತಿ ನಿರ್ಮಾಣವಾಗಿದ್ದು, ಕೆರೆಯ ಸಂಪೂರ್ಣ ಪರಿಸರದ ರಕ್ಷಣೆಗೆ ಆದ್ಯತೆ ನೀಡಿಲ್ಲ. ರಾತ್ರಿಯ ವೇಳೆಯಲ್ಲಿ ಕೆರೆ ಪರಿಸರದಲ್ಲಿ ಅನೈತಿಕವಾಗಿ ವರ್ತಿಸುವವರ ಸಂಖ್ಯೆಯೂ ಮಿತಿ ಮೀರಿದ್ದು, ಕೆರೆಯ ಪರಿಸರದಲ್ಲಿ ರಾತ್ರಿ ವೇಳೆಯಲ್ಲಿ ಬಾಟಲಿ, ಪ್ಲಾಸ್ಟಿಕ್ ಚೀಲಗಳನ್ನು ಎಸೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆಯಲ್ಲಿ ಅಗತ್ಯ ಸಂರಕ್ಷಣಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ನಿಗದಿತ ಅವಧಿ ಬಳಿಕ ಕೆರೆ ಪರಿಸರಕ್ಕೆ ಪ್ರವೇಶ ನಿಷೇಧಿಸ ಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಳೆದ ಇಪ್ಪತ್ತು ವರ್ಷಗಳಿಂದ ಗುಜ್ಜರಕೆರೆ ಸಂರಕ್ಷಣಾ ವಿಚಾರವಾಗಿ ಹೋರಾಟ ಮಾಡುತ್ತಿರುವ ವೇದಿಕೆಯು ಈ ಬಗ್ಗೆ ಪ್ರಧಾನಿ ಕಚೇರಿಯ ಕದವನ್ನೂ ತಟ್ಟಿತ್ತು. ಪ್ರಧಾನಿ ಕಛೇರಿಯಿಂದ ಪೂರಕ ಸ್ಪಂದನೆ ದೊರೆತರೂ ಸ್ಥಳೀಯ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.