ಕ್ರೀಡಾಪಟುಗಳಲ್ಲಿ ಕ್ರೀಡಾ ಸ್ಫೂರ್ತಿ, ಕ್ರೀಡಾ ಮನೋಭಾವ ಅಗತ್ಯ: ಸಚಿವ ಡಾ.ಎಂ.ಸಿ.ಸುಧಾಕರ
ಮಂಗಳೂರು, ಜ.7: ಕ್ರೀಡಾಕೂಟಗಳಲ್ಲಿ ಸೋಲು ಗೆಲುವು ಸಾಮಾನ್ಯ. ಕ್ರೀಡಾಪಟುಗಳು ಕ್ರೀಡಾ ಸ್ಫೂರ್ತಿ ಮತ್ತು ಕ್ರೀಡಾಮನೋಭಾವದಿಂದ ಭಾಗವಹಿಸಬೇಕಾಗಿದೆ ಎಂದು ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಹೇಳಿದ್ದಾರೆ.
ನಗರದ ಮಂಗಳಾ ಕ್ರೀಡಾಂಗಣದಲ್ಲಿ ಮಂಗಳವಾರ ಕರ್ನಾಟಕ (ಸರಕಾರಿ) ಪಾಲಿಟೆಕ್ನಿಕ್ ನ ಅಮೃತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ 45ನೇ ರಾಜ್ಯಮಟ್ಟದ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಕ್ರೀಡಾಕೂಟವು ವಿದ್ಯಾರ್ಥಿಗಳಿಗೆ ತಮ್ಮಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರತರಲು ವೇದಿಕೆಯಾಗಿದೆ. ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಕರ್ನಾಟಕ (ಸರಕಾರಿ) ಪಾಲಿಟೆಕ್ನಿಕ್ ರಾಜ್ಯಮಟ್ಟದ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ ಎಂದರು.
ರಾಜ್ಯದ ಅತ್ಯುತ್ತಮ ಪಾಲಿಟೆಕ್ನಿಕ್ ಗಳಲ್ಲಿ ಕರ್ನಾಟಕ ಪಾಲಿಟೆಕ್ನಿಕ್ ಒಂದಾಗಿದೆ. ಕರ್ನಾಟಕ ಪಾಲಿಟೆಕ್ನಿಕ್ ಎಐಸಿಟಿಇಯಿಂದ ಸ್ವಾಯತ್ತತೆ ಪಡೆದ ಪ್ರಥಮ ಸರಕಾರಿ ಪಾಲಿಟೆಕ್ನಿಕ್ ಎನ್ನುವುದು ಹೆಮ್ಮೆಯ ವಿಚಾರ ಎಂದರು.
ಅಮೃತಮಹೋತ್ಸವದ ಸವಿನೆನಪಿಗಾಗಿ ಕರ್ನಾಟಕ ಪಾಲಿಟೆಕ್ನಿಕ್ನ ಹಿರಿಯ ವಿದ್ಯಾರ್ಥಿಗಳು 3 ಕೋಟಿ ರೂ. ವೆಚ್ಚದಲ್ಲಿ ಅಮೃತಭವವನ ನಿರ್ಮಿಸುವ ಯೋಜನೆ ರೂಪಿಸಿರುವುದು ಶ್ಲಾಘನೀಯ ಎಂದರು.
'ಅಮೃತಯಾನ' ಸ್ಮರಣ ಸಂಚಿಕೆಯನ್ನು ಇದೇ ಸಂದರ್ಭದಲ್ಲಿಸಚಿವ ಡಾ.ಎಂ.ಸಿ.ಸುಧಾಕರ್ ಅನವಾರಣಗೊಳಿಸಿದರು.
ಮಂಗಳೂರು ದಕ್ಷಿಣ ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ್ ಭಂಡಾರಿ, ಮೇಯರ್ ಮನೋಜ್ ಕುಮಾರ್, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಜೋಕಿಂ ಸ್ಟಾನ್ಲಿ ಅಲ್ವಾರಿಸ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಮುಖ್ಯ ಅತಿಥಿಯಾಗಿದ್ದರು.
ಕರ್ನಾಟಕ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಪ್ರಸನ್ನ ಎಚ್., ತಾಂತ್ರಿಕ ಶಿಕ್ಷಣ ಇಲಾಖೆಯ ಆಡಳಿತಾಧಿಕಾರಿ ರಜನಿಕಾಂತ್, ಜಂಟಿ ನಿರ್ದೇಶಕರಾದ ಶೇಖರ್ ಮತ್ತು ಶ್ರೀಕಾಂತ್ ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ (ಸರಕಾರಿ) ಪಾಲಿಟೆಕ್ನಿಕ್ನ ಪ್ರಾಂಶುಪಾ ಹರೀಶ್ ಶೆಟ್ಟಿ ಸ್ವಾಗತಿಸಿದರು. ಗಿರೀಶ್ ಬಾಬು ವಂದಿಸಿದರು.
ಕ್ರೀಡಾಕೂಟಕ್ಕೂ ಮುನ್ನ ರಾಜ್ಯದ ವಿವಿಧ ಪಾಲಿಟೆಕ್ನಿಕ್ಗಳ ಕ್ರೀಡಾಪಟುಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
*3 ಕೋಟಿ ರೂ. ವೆಚ್ಚದ ಅಮೃತಭವನ: ಕರ್ನಾಟಕ ಪಾಲಿಟೆಕ್ನಿಕ್ನ ಅಮೃತ ಮಹೋತ್ಸವ ಅಂಗವಾಗಿ ಹಳೆ ವಿದ್ಯಾರ್ಥಿಗಳು ನಿರ್ಮಿಸಿಕೊಡಲಿರುವ 3 ಕೋಟಿ ರೂ. ವೆಚ್ಚದ ಅಮೃತ ಮಹೋತ್ಸವ ಭವನಕ್ಕೆ ಶಿಲಾನ್ಯಾಸ, ನೂತನ ವಿದ್ಯಾರ್ಥಿ ನಿಲಯ ಮತ್ತು ಶೈಕ್ಷಣಿಕ ಸ್ವಾಯತ್ತತೆಯ ಉದ್ಘಾಟನೆ ನಡೆಯಿತು.