ಮಂಗಳೂರಿನಲ್ಲಿ ಶುದ್ಧೀಕರಿಸದ ನೀರು ಪೂರೈಕೆ ಆರೋಪ: ಕಾಂಗ್ರೆಸ್ ನ ಸತ್ಯಶೋಧನಾ ಸಮಿತಿ ಭೇಟಿ; ಪರಿಶೀಲನೆ
ಮಂಗಳೂರು, ಜ.7: ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಶುದ್ಧೀಕರಿಸದೇ ನೀರು ಪೂರೈಕೆ ಮಾಡುತ್ತಿರುವ ಬಗ್ಗೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಿಪಕ್ಷ ನಾಯಕ ಹಾಗೂ ಸದಸ್ಯರು ಆರೋಪಿಸಿದ ಬೆನ್ನಲ್ಲೇ ಕಾಂಗ್ರೆಸ್ ಸತ್ಯಶೋಧನಾ ಸಮಿತಿ ರಚಿಸಲಾಗಿದ್ದು, ಮಂಗಳವಾರ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದೆ.
ಶನಿವಾರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಶೇ.50ರಷ್ಟು ವಾರ್ಡುಗಳಿಗೆ ಶುದ್ಧೀಕರಿಸದೇ ನೀರು ಸರಬರಾಜು ಮಾಡುವ ಮೂಲಕ ಬಿಜೆಪಿ ನಗರಪಾಲಿಕೆ ಆಡಳಿತ ಜನರನ್ನು
ವಂಚಿಸುತ್ತಿದೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದ್ದರು. ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸತ್ಯಶೋಧನಾ ಸಮಿತಿಗೆ ಆಗ್ರಹಿಸಿರುವ ನಡುವೆ, ಇದೀಗ ಕಾಂಗ್ರೆಸ್ ವಿರೋಧ
ಪಕ್ಷದ ನಾಯಕ ಅನಿಲ್ ಕುಮಾರ್ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿಯನ್ನು ರಚಿಸಲಾಗಿದೆ. ಈ ಸತ್ಯಶೋಧನಾ ಸಮಿತಿಯು ಮಂಗಳವಾರ ಬೆಳಗ್ಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರ ನೇತೃತ್ವದಲ್ಲಿ ಮನಪಾ ವಿಪಕ್ಷ ನಾಯಕ, ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರ ತಂಡ
ಪಚ್ಚನಾಡಿಯಲ್ಲಿರುವ ಎಸ್.ಟಿ.ಪಿ.ಗೆ ಭೇಟಿ ನೀಡಿತು. ತಂಡವು ಅಲ್ಲಿ ಕಂಡ ನ್ಯೂನತೆಗಳನ್ನು ವರದಿ ರೂಪದಲ್ಲಿ ತರಲು ತೀರ್ಮಾನಿಸಿದ್ದು, ಅಧಿಕಾರಿಗಳ ಜೊತೆ ಚರ್ಚೆ ನಡೆಸಿದೆ.
ನೀರು ಪೂರೈಕೆ ಘಟಕಕ್ಕೆ ಭೇಟಿ ನೀಡಿದ ಸಂದರ್ಭ ಪೈಪ್ ಲೈನ್ ನೇರವಾಗಿ ಪಣಂಬೂರು ಕಡೆಗೆ, ಇನ್ನೊಂದು ಪೈಪ್ಲೈನ್ ಶುದ್ಧೀಕರಿಸಿ, ನಗರಕ್ಕೆ ಸರಬರಾಜು ಮಾಡುವ ವಿಷಯವನ್ನು ತಿಳಿದು, ಇಲ್ಲಿಯ ನೀರನ್ನು ಸಂಗ್ರಹಿಸಿ, ಪರಿಶೀಲನಾ ವರದಿ ತರಿಸಲು ತೀರ್ಮಾನಿಸಲಾಯಿತು.
ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಅನಿಲ್ ಕುಮಾರ್, ಸದಸ್ಯರಾದ ಶಶಿಧರ್ ಹೆಗ್ಡೆ, ಪ್ರವೀಣ್ಚಂದ್ರ ಆಳ್ವ, ಲ್ಯಾನ್ಸಿಲ್ಯಾಟ್ ಪಿಂಟೋ, ನವೀನ್ ಡಿಸೋಜ, ಕೇಶವ ಮರೋಳಿ, ಅಶ್ರಫ್ ಬಜಾಲ್, ಶಂಸುದ್ದೀನ್ ಕುದ್ರೋಳಿ, ನಾಮನಿದೇಶಿತ ಸದಸ್ಯರಾದ ಸತೀಶ್ ಪೆಂಗಲ್, ಚೇತನ್ ಕುಮಾರ್, ಕಿಶೋರ್ ಕುಮಾರ್ ಶೆಟ್ಟಿ, ಹೇಮಂತ್ ಗರೋಡಿ ಜತಗೆ ನಿಯೋಗದಲ್ಲಿ ಎಇಇ ಶಿವಲಿಂಗಪ್ಪ, ಜೆ.ಇ.ಯತೀಶ್, ಜೆಕೆಡಬ್ಲ್ಯು ಕನ್ಸ್ಲೆಂಟ್ ಜಯಪ್ರಕಾಶ್ ಉಪಸ್ಥಿತರಿದ್ದರು.