34 ನೆಕ್ಕಿಲಾಡಿ | ಮೈಂದಡ್ಕದಲ್ಲಿ ಕಟ್ಟಡದ ದಾಖಲೆಯ ಬಗ್ಗೆ ಮತ್ತೊಂದು ವಿವಾದ ಸೃಷ್ಟಿ

Update: 2025-01-07 07:56 GMT

ಉಪ್ಪಿನಂಗಡಿ, ಜ.7: 34 ನೆಕ್ಕಿಲಾಡಿ ಗ್ರಾಮದ ಮೈಂದಡ್ಕದಲ್ಲಿ ಅಂಗನವಾಡಿ ಕಾರ್ಯಾಚರಿಸುತ್ತಿರುವ ಕಟ್ಟಡಕ್ಕೆ ಸಂಬಂಧಿಸಿ ಇದ್ದ ಭೂ ವಿವಾದ ಭೂ ಸರ್ವೇ ಮೂಲಕ ಬಗೆಹರಿದಿದೆ. ಆದರೆ ಈ ಮೊದಲು ಈ ಕಟ್ಟಡಕ್ಕೆ ನಮ್ಮೂರು- ನಮ್ಮವರು ಸಂಘದ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ನೀಡಲು ಮೆಸ್ಕಾಂಗೆ ನೀಡಿದ್ದ ನಿರಾಕ್ಷೇಪಣಾ ಪತ್ರವನ್ನು ನಿಗದಿತ ದಾಖಲೆಗಳು ಇಲ್ಲದಿರುವ ಕಾರಣ ರದ್ದುಪಡಿಸಿ ಎಂದು 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಮೆಸ್ಕಾಂಗೆ ಪತ್ರ ಬರೆದಿದೆ. ಆ ಮೂಲಕ ಕಟ್ಟಡದ ದಾಖಲೆಯ ಬಗ್ಗೆ ಮತ್ತೊಂದು ವಿವಾದ ಸೃಷ್ಟಿಯಾಗಿದೆಯಲ್ಲದೆ, ಸರಕಾರಿ ಜಾಗದಲ್ಲಿ ಯಾವುದೇ ದಾಖಲೆಗಳಿಲ್ಲದೆ ಕಟ್ಟಡವೊಂದು ನಿರ್ಮಾಣವಾಗುವಾಗ ಅಧಿಕಾರಿಗಳು ಯಾಕೆ ಮೌನವಾಗಿದ್ದರೂ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಮೈಂದಡ್ಕಕ್ಕೊಂದು ಅಂಗನವಾಡಿ ಮಂಜೂರುಗೊಳಿಸಬೇಕೆಂಬ ಬೇಡಿಕೆ 34 ನೆಕ್ಕಿಲಾಡಿ ಗ್ರಾಮ ಸಭೆಯಲ್ಲಿ ಹಲವು ಬಾರಿ ಪ್ರಸ್ತಾವವಾಗಿತ್ತು. ಕೊನೆಗೂ ಅಂಗನವಾಡಿ ಇಲ್ಲಿಗೆ ಮಂಜೂರುಗೊಂಡಿದ್ದು, ಸ್ವಂತ ಕಟ್ಟಡವಿಲ್ಲದ್ದರಿಂದ ಅಲ್ಲೇ ಸಮೀಪದಲ್ಲಿ ಖಾಸಗಿ ವ್ಯಕ್ತಿಯೋರ್ವರಿಗೆ ಸೇರಿದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿತ್ತು. ಈ ನಡುವೆ ಅಂಗನವಾಡಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಿವೇಶನ ಕೋರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಕಂದಾಯ ಇಲಾಖೆಗೆ ಪತ್ರ ಬರೆದಿದ್ದರು. ಇನ್ನೊಂದೆಡೆ ಮೈಂದಡ್ಕದಲ್ಲಿರುವ 88/1ರ ಸರಕಾರಿ ಜಾಗದಲ್ಲಿ ಕಟ್ಟಡವೊಂದು ನಿರ್ಮಾಣವಾಗಿತ್ತು. ಬಳಿಕ ಅದರಲ್ಲಿ ಅಂಗನವಾಡಿ ಕಾರ್ಯನಿರ್ವಹಿಸುತ್ತಿತ್ತು. ಕಂದಾಯ ಇಲಾಖೆಯು ಸರ್ವೇ ನಂ.88/1ರಲ್ಲಿ 5 ಸೆಂಟ್ಸ್ ಜಾಗವನ್ನು ಅಂಗನವಾಡಿಗೆ ಮಂಜೂರುಗೊಳಿಸಿತು. ಆದರೆ ಇತ್ತೀಚೆಗೆ ಅಂಗನವಾಡಿ ಕಾರ್ಯಾಚರಿಸುತ್ತಿರುವ ಕಟ್ಟಡಕ್ಕೆ ತಮ್ಮ ಸಂಘದ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ಕೋರಿ ‘ನಮ್ಮೂರು- ನಮ್ಮವರು’ ಸಂಘನೆ ಮೆಸ್ಕಾಂಗೆ ಅರ್ಜಿ ಸಲ್ಲಿಸಿತ್ತು. ಆದರೆ ಇದಕ್ಕೆ ಆಕ್ಷೇಪ ಸಲ್ಲಿಸಿದ್ದ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಈ ಜಾಗವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಂಜೂರುಗೊಂಡಿದ್ದು, ಇಲ್ಲಿ ಬೇರೆ ಯಾವುದೇ ಕಾಮಗಾರಿ ನಡೆಯದಂತೆ ಕಾರ್ಯಪ್ರವೃತರಾಗಬೇಕು ಎಂದು ಉಲ್ಲೇಖಿಸಿದ್ದರು. ಅಲ್ಲಿಂದ ಅಂಗನವಾಡಿ ಮತ್ತು ಸಂಘದ ನಡುವೆ ಸಂಘರ್ಷ ಆರಂಭಗೊಂಡಿದ್ದು, ಬಳಿಕ ಭೂ ಸರ್ವೇ ನಡೆಸಿದಾಗ ಆ ಕಟ್ಟಡವನ್ನು ಬಿಟ್ಟು ಐದು ಸೆಂಟ್ಸ್ ಜಾಗವನ್ನು ಅಂಗನವಾಡಿಗೆ ಮಂಜೂರಾಗಿರುವುದೆಂದು ತಿಳಿದು ಬಂತು.

ಸಂಶಯಕ್ಕೆ ಕಾರಣವಾದ ಗ್ರಾಪಂ ನಡೆ!:

‘ಮೈಂದಡ್ಕದ ನಮ್ಮೂರು- ನಮ್ಮವರು ಸಂಘ ಸರ್ವೇ ನಂ. 88/1ರಲ್ಲಿ 0.5 ಸೆಂಟ್ಸ್ ವಿಸ್ತೀರ್ಣದ ಕಟ್ಟಡಕ್ಕೆ ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆಯಲು 14.05.2024ರಂದು ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸಿತ್ತು. ಈ ವೇಳೆ "ಗ್ರಾಪಂ ಸ್ಥಳ ಪರಿಶೀಲನೆ ನಡೆಸಿದ್ದು, ವಿದ್ಯುತ್ ಸಂಪರ್ಕಕ್ಕೆ ಗ್ರಾಪಂನಿಂದ ಯಾವುದೇ ಆಕ್ಷೇಪ ಇರುವುದಿಲ್ಲ' ಎಂದು 34 ನೆಕ್ಕಿಲಾಡಿ ಗ್ರಾಪಂ ಪಿಡಿಒ ಅವರು ಮೆಸ್ಕಾಂಗೆ ನಿರಾಕ್ಷೇಪಣಾ ಪತ್ರ ನೀಡಿದ್ದರು. ಆದರೆ ಆ ಬಳಿಕ ಅಂಗನವಾಡಿ ಮತ್ತು ಸಂಸ್ಥೆಯ ನಡುವೆ ವಿದ್ಯುತ್ ಸಂಪರ್ಕದ ವಿಷಯದಲ್ಲಿ ವಿವಾದ ತಾರಕಕ್ಕೇರುತ್ತಿದ್ದಂತೆಯೇ 34 ನೆಕ್ಕಿಲಾಡಿ ಗ್ರಾಪಂ ಯೂಟರ್ನ್ ಹೊಡೆದಿದ್ದು, ಮೆಸ್ಕಾಂಗೆ ನೀಡಿರುವ ನಿರಾಕ್ಷೇಪಣಾ ಪತ್ರ ರದ್ದತಿ ಕೋರಿ 21.12.2024ರಂದು ಪತ್ರ ಬರೆದಿದೆ.

‘‘ಪುತ್ತೂರು ತಾಲೂಕು 34 ನೆಕ್ಕಿಲಾಡಿ ಗ್ರಾ.ಪಂ.ನ ಮೈಂದಡ್ಕ ಎಂಬಲ್ಲಿರುವ ನಮ್ಮೂರು- ನಮ್ಮವರು ಸಂಘದ ಸರ್ವೇ ನಂಬರ್ 88/1ರಲ್ಲಿನ ಕಟ್ಟಡಕ್ಕೆ ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆಯಲು 14.05.2024ರಂದು ಗ್ರಾಮ ಪಂಚಾಯತ್ ಗೆ ಸಲ್ಲಿಸಿರುವ ಅರ್ಜಿಯ ಪ್ರಕಾರ ಸ್ಥಳ ಪರಿಶೀಲನೆ ನಡೆಸಿದ್ದು, ನಿಗದಿತ ದಾಖಲೆಗಳು ಇಲ್ಲದಿರುವುದರಿಂದ ನಿರಾಕ್ಷೇಪಣಾ ಪ್ರಮಾಣಪತ್ರ ರದ್ದುಪಡಿಸುವರೇ ಈ ಮೂಲಕ ವಿನಂತಿಸಲಾಗಿದೆ’’ ಎಂದು ಗ್ರಾಪಂ ಪಿಡಿಒ ಅವರು ಮೆಸ್ಕಾಂಗೆ ಪತ್ರ ಬರೆದಿದ್ದಾರೆ.

ಏಳು ತಿಂಗಳ ಬಳಿಕ ಗ್ರಾಪಂನ ಈ ನಡೆ ಈಗ ಸಂಶಯಕ್ಕೆ ಕಾರಣವಾಗುತ್ತಿದ್ದು, ಈಗ ನಿಗದಿತ ದಾಖಲೆಗಳು ಇಲ್ಲವೆಂದು ನಿರಾಕ್ಷೇಪಣಾ ಪತ್ರ ರದ್ದತಿ ಕೋರಿ ಪತ್ರ ಬರೆದಿರುವ ಗ್ರಾಪಂ ಅಂದು ಯಾವುದೇ ನಿಗದಿತ ದಾಖಲೆಗಳಿಲ್ಲದೇ ಈ ಕಟ್ಟಡಕ್ಕೆ ಸಂಘದ ಹೆಸರಿನಲ್ಲಿ ವಿದ್ಯುತ್ ಸಂಪಕಕ್ಕೆ ನಿರಾಕ್ಷೇಪಣಾ ಪತ್ರ ನೀಡಿತ್ತೇ ? ಆ ಮೂಲಕ ಗ್ರಾಪಂ ಅಧಿಕಾರ ದುರುಪಯೋಗ ಮಾಡಿತ್ತೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣ?:

ಇಲ್ಲಿರುವ ಕಟ್ಟಡಕ್ಕೆ ಯಾವುದೇ ನಿಗದಿತ ದಾಖಲೆಗಳು ಇಲ್ಲವೆಂಬುದು ವಿದ್ಯುತ್ ನಿರಾಕ್ಷೇಪಣಾ ಪತ್ರ ರದ್ದತಿ ಕೋರಿ ಗ್ರಾಪಂ ಮೆಸ್ಕಾಂಗೆ ಬರೆದಿರುವ ಪತ್ರದಲ್ಲೇ ಉಲ್ಲೇಖಿಸಲಾಗಿದೆ. ಅಂದರೆ ಇಲ್ಲಿ ಜಮೀನಿಗೆ ಸಂಬಂಧಿಸಿ ಯಾವುದೇ ದಾಖಲೆಗಳಿಲ್ಲದಿದ್ದರೂ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದು ಯಾರು? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಒಟ್ಟಿನಲ್ಲಿ ಈ ಕಟ್ಟಡದ ಸುತ್ತ ಹೊಸ ಹೊಸ ವಿವಾದಗಳು ಹುಟ್ಟುತ್ತಿದ್ದು, ಯಾವುದೇ ಜಮೀನಿನ ದಾಖಲೆಗಳಿಲ್ಲದೇ ಸರಕಾರಿ ಜಮೀನಿನಲ್ಲಿರುವ ಈ ಕಟ್ಟಡವು ಕಾನೂನಿನ ಪ್ರಕಾರ ಅನಧಿಕೃತ ಕಟ್ಟಡವೆಂಬ ಹಣೆಪಟ್ಟಿಯನ್ನು ಹೊತ್ತು ನಿಲ್ಲುವಂತಾಗಿದೆ.

34 ನೆಕ್ಕಿಲಾಡಿಯ ಮೈಂದಡ್ಕದಲ್ಲಿ ಅಂಗನವಾಡಿ ಕಾರ್ಯಾಚರಿಸುತ್ತಿರುವ ಕಟ್ಟಡದ ವಿವಾದದ ಬಗ್ಗೆ ತಿಳಿದಿದೆ. ಭೂ ಸರ್ವೇ ನಡೆಸಿ ಅಂಗನವಾಡಿಗೆ ಅಲ್ಲೇ ಪಕ್ಕದಲ್ಲಿ ಜಾಗವನ್ನು ಗುರುತಿಸಲಾಗಿದೆ. ಈಗ ಆ ಕಟ್ಟಡದ ಜಮೀನು ಸರಕಾರಿ ಭೂಮಿಯಾಗಿದೆ. ಅದನ್ನು ಯಾರಿಗೂ ಮಂಜೂರುಗೊಳಿಸಲಾಗಿಲ್ಲ. ಹಾಗಾಗಿ ಇದು ಅನಧಿಕೃತ ಕಟ್ಟಡ. ಅಂಗನವಾಡಿಗೆ ಕಟ್ಟಡ ನಿರ್ಮಾಣವಾಗಲಿ. ಆ ಬಳಿಕ ಈ ಬಗ್ಗೆ ತೀರ್ಮಾನಿಸಲಾಗುವುದು.

- ಪುರಂದರ ಹೆಗ್ಡೆ

ತಹಶೀಲ್ದಾರರು, ಪುತ್ತೂರು

ಭೂ ಸರ್ವೇ ನಡೆಸಿದಾಗ ಅಂಗನವಾಡಿಗೆ ಮಂಜೂರುಗೊಳಿಸಿದ ಜಾಗ ಅಲ್ಲೇ ಪಕ್ಕದಲ್ಲಿ ಬರುತ್ತದೆ. ಈಗ ಇಲ್ಲಿ ನಿರ್ಮಾಣವಾಗಿರುವ ಕಟ್ಟಡದ ಅರ್ಧ ಭಾಗ ಜಿಲ್ಲಾ ಪಂಚಾಯತ್ ರಸ್ತೆ ಮಾರ್ಜಿನ್ನಲ್ಲಿ ಬರುತ್ತಿದೆ.

-ಮೋಹನ್, ಭೂಮಾಪಕರು

ಭೂಮಾಪನ ಇಲಾಖೆ ಪುತ್ತೂರು

2024ರ ಜೂನ್ ತಿಂಗಳಲ್ಲಿ 34 ನೆಕ್ಕಿಲಾಡಿಯ ಕನ್ನಡಿಮಾರ್ ಎಂಬಲ್ಲಿ ಮಮತಾ ಎಂಬವರು ಭಾಗಶಃ ನಿರ್ಮಿಸಿದ ಮನೆಯನ್ನು ಕಿಡಿಗೇಡಿಗಳು ಸಂಪೂರ್ಣ ಧ್ವಂಸಗೊಳಿಸಿದ್ದರು. ಮಮತಾ ಮತ್ತದೇ ಜಾಗದಲ್ಲಿ ಮನೆ ಕಟ್ಟಲು ಮುಂದಾದಾಗ ಅದು ಸರಕಾರಿ ಜಾಗವೆಂದು ಕಂದಾಯ ಅಧಿಕಾರಿಗಳು ಅಡ್ಡಿಪಡಿಸಿದ್ದರು. ಈ ನಿಯಮ ಸಂಘ- ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲವೇ? ಇಲ್ಲಿ ಹಲವಾರು ಸಂಘ ಸಂಸ್ಥೆಗಳಿವೆ. ಅವರೆಲ್ಲಾ ಸರಕಾರಿ ಜಾಗದಲ್ಲಿ ಯಾವುದೇ ದಾಖಲೆಗಳಿಲ್ಲದೆ ಕಟ್ಟಡ ನಿರ್ಮಿಸಬಹುದೇ ಎಂದು ಕಂದಾಯ ಇಲಾಖೆಯವರು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕಿದೆ.

- ಕಲಂದರ್ ಶಾಫಿ

ಪ್ರಧಾನ ಕಾರ್ಯದರ್ಶಿ

ವಲಯ ಕಾಂಗ್ರೆಸ್, 34 ನೆಕ್ಕಿಲಾಡಿ

.

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News