ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ ಸೇವೆಗೆ ಒತ್ತು ನೀಡಿ: ಉಪ ರಾಷ್ಟ್ರಪತಿ ಜಗದೀಪ್ ಧನಕರ್
ಧರ್ಮಸ್ಥಳ: ದೇಶದ ಗ್ರಾಮೀಣ ಪ್ರದೇಶದ ಶಿಕ್ಷಣ, ಆರೋಗ್ಯ ಸೇವೆಗೆ ಒತ್ತು ನೀಡುವ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಗಮನಹರಿಸುವಂತೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಕರೆ ನೀಡಿದ್ದಾರೆ.
ಅವರು ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಮೃತ ವರ್ಷಿಣಿ ಸಭಾಭವನದಲ್ಲಿ ಭಕ್ತರ ಸರತಿ ಸಾಲಿನ ಸುಸಜ್ಜಿತ ವ್ಯವಸ್ಥೆಗಳನ್ನೊಳಗೊಂಡ ಸಂಕೀರ್ಣ ಶ್ರೀ ಸಾನ್ನಿಧ್ಯ ಇದರ ಉದ್ಘಾಟನೆ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ 2024- 25ರ ಜ್ಞಾನದೀಪ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ದೇಶದ ಹೃದಯ ಭಾಗದಂತಿರುವ ಹಳ್ಳಿ ಗಳಿಗೆ ಶಿಕ್ಷಣ ಸೌಲಭ್ಯಗಳನ್ನು ವಿಸ್ತರಿಸುವುದು ಪುಣ್ಯದ ಕೆಲಸ. ಧಾರ್ಮಿಕ ಕೇಂದ್ರಗಳ ಮೂಲಕ ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರ ಗಳ ಅಭಿವೃದ್ಧಿ ಕೊಡುಗೆ ನೀಡುತ್ತಿದೆ. ಜೊತೆಗೆ ಧಾರ್ಮಿಕ ಕೇಂದ್ರಗಳು ಪ್ರಾಚೀನ ನಮ್ಮ ಪರಂಪರೆಯನ್ನು ಉಳಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು. ಭಾರತ ಜಗತ್ತಿನ ಆಧ್ಯಾತ್ಮಿಕ ಕೇಂದ್ರವಾಗಿದೆ. ಜಗತ್ತನ್ನು ಒಂದು ಕುಟುಂಬವೆಂದು ನೋಡಬೇಕೆನ್ನುವ ಚಿಂತನೆ ಹೊಂದಿರುವ ದೇಶ. ಪ್ರಜಾ ಪ್ರಭುತ್ವದಲ್ಲಿ ಸಮರ್ಪಕವಾದ ಮಾತುಕತೆಯ ಅಗತ್ಯವಿದೆ. ಹಲವು ಸಮಸ್ಯೆ ಗಳಿಗೆ ಸರಕಾರಿ ಸೊತ್ತುಗಳನ್ನು ಹಾನಿ ಮಾಡುವುದು ಪರಿಹಾರವಲ್ಲ. ಅರ್ಥಪೂರ್ಣ ವಾದ ಮಾತುಕತೆಯ ಮೂಲಕ ಸಮಸ್ಯೆ ಪರಿಹಾರ ಸಾಧ್ಯ. ಉದ್ಯಮಿಗಳು ತನ್ಮ ಸಿಎಸ್ ಆರ್ ನಿಧಿಯಿಂದ ಶಿಕ್ಷಣ, ಆರೋಗ್ಯ , ಧಾರ್ಮಿಕ, ಸಾಂಸ್ಕೃತಿಕ ಕೇಂದ್ರಗಳ ಅಭಿವೃದ್ಧಿ ಗೆ ಕೊಡುಗೆ ನೀಡುವಂತಾಗಬೇಕು ಎಂದರು.
ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳ ಜನರೊಂದಿಗೆ ಉತ್ತಮ ಮಾತುಕತೆ ನಡೆಸಬೇಕು. ದೇಶದ ವೈವಿಧ್ಯತೆ ಯ ಸಂಸ್ಕೃತಿಯನ್ನು ಉಳಿಸಿಕೊಂಡು ದೇಶದ ಸೌಹಾರ್ದ ತೆಯನ್ನು ಕಾಪಾಡಿಕೊಂಡು ವಿಶ್ವ ಭ್ರಾತೃತ್ವವನ್ನು ತೋರಿಸಬೇಕಾಗಿದೆ. ದೇಶದ ಪ್ರಜೆಗಳು ತಮ್ಮ ಹಕ್ಕುಗಳ ಜೊತೆ ಸಂವಿಧಾನದ ಮೂಲಕ ತಮಗೆ ನೀಡಿರುವ ಕರ್ತವ್ಯ ವನ್ನು ಮರೆಯಬಾರದು. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೊಡುಗೆ ನೀಡುವಂತಾಗಬೇಕು ಎಂದು ಧನಕರ್ ಕರೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಶ್ರೀ ಕ್ಷೇತ್ರದಲ್ಲಿ ದೇವಾಲಯದ ನಿರ್ವಹಣೆ ಮತ್ತು ಭಕ್ತರ ಆರೈಕೆಗಾಗಿ ಒಂದು ಮಾದರಿ ಧಾರ್ಮಿಕ ಕ್ಷೇತ್ರವೆಂದು ಪರಿಗಣಿಸಲಾಗಿದೆ. ಸರತಿ ಸಾಲಿನಲ್ಲಿ ಕಾಯುವ ಅವಧಿಯಲ್ಲಿ ಭಕ್ತರಿಗೆ ಇನ್ನೂ ಹೆಚ್ಚಿನ ಸುಧಾರಿತ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ, ನೂತನ ಸೌಲಭ್ಯದೊಂದಿಗೆ ಹೊಸ ಸರತಿ ಸಾಲಿನ ಸಂಕೀರ್ಣ 'ಶ್ರೀ ಸಾನ್ನಿಧ್ಯವನ್ನು ನಿರ್ಮಿಸಲಾಗಿದೆ. ನೂತನ ಸರತಿ ಸಾಲಿನ ಸಂಕೀರ್ಣದ ವಿಸ್ತೀರ್ಣ 2,75,177 ಚದರ ಅಡಿ ಆಗಿದ್ದು ಇದು ವೃತ್ತಾಕಾರದಲ್ಲಿದೆ. 15 ಸಭಾಂಗ ಣಗಳೊಂದಿಗೆ ಎರಡು ಅಂತಸ್ತಿನ ರಚನೆಯಾಗಿದೆ. ಪ್ರತಿ ಸಭಾಂಗಣದಲ್ಲಿ 600 ರಿಂದ 800 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಏಕ ಕಾಲಕ್ಕೆ ಒಟ್ಟು 10,000-12,000 ಜನರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಸಂಕೀರ್ಣವು ವಿಶಾಲವಾದ ಸಭಾಂಗಣಗಳನ್ನು ಹೊಂದಿದ್ದು, ಭಕ್ತಾದಿಗಳು ಉದ್ದನೆಯ ಸಾಲುಗಳಲ್ಲಿ ನಿಲ್ಲುವ ಬದಲು ಆರಾಮವಾಗಿ ಕಾಯಬಹುದು.
ಪ್ರತಿ ಸಭಾಂಗಣವು ಪ್ರವೇಶ, ನಿರ್ಗಮನ ಮತ್ತು ತುರ್ತು ನಿರ್ಗಮನ ದ್ವಾರಗಳು, ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳು, ಶಿಶುಪಾಲನಾ ಕೊಠಡಿ ಮತ್ತು ಕೆಫೆಟೇರಿಯಾ ಸೌಲಭ್ಯಗಳನ್ನು ಹೊಂದಿದೆ. ಡಿಜಿಟಲ್ ಟಿ.ವಿ.ಗಳ ಮೂಲಕ ಮಾಹಿತಿ, ಮಾರ್ಗದರ್ಶನಗಳನ್ನು ನೀಡಲಾಗುತ್ತದೆ.
ಕ್ಯೂ ಕಾಂಪ್ಲೆಕ್ಸ್‌ನ ಕಾರ್ಯಾಚರಣೆಯು ಸುಧಾರಿತ ತಂತ್ರಜ್ಞಾನದೊಂದಿಗೆ ಸಂಯೋಜಿಸಲ್ಪಟ್ಟಿದ್ದು, ಪ್ರತಿ ಹಂತದಲ್ಲೂ ದಕ್ಷತೆ ಮತ್ತು ನಾವೀನ್ಯತೆಯನ್ನು ಕಾಣಬಹುದಾಗಿದೆ. ಸಂಪೂರ್ಣ ತಂತ್ರಜ್ಞಾನ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಸುಸಜ್ಜಿತವಾದ 160 ಎಐ ಆಧಾರಿತ ಕ್ಯಾಮೆರಾಗಳ ಮೂಲಕ ನಿಖರವಾಗಿ ಜನರ ಎಣಿಕೆ, ಕಣ್ಣಾವಲು ಮತ್ತು ಸುಧಾರಿತ ಕಾರ್ಯಗಳನ್ನು ಮಾಡಲಾಗುತ್ತದೆ. ಈ ಸ್ಕಾರ್ಟ್ ಕ್ಯಾಮೆರಾಗಳನ್ನು ಸೂಕ್ತ ಸಾಫ್ಟ್‌ವೇರ್ ಮತ್ತು ಅಪ್ಲಿಕೇಶನ್‌ಗಳೊಂದಿಗೆ ಅಳವಡಿಸಲಾಗಿದೆ. ಇವುಗಳಿಂದ ಭಕ್ತಾದಿಗಳಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡುವುದರೊಂದಿಗೆ ಆತಂಕ ಮುಕ್ತ ವಾತಾವರಣವನ್ನು ಕಲ್ಪಿಸಲಾಗುತ್ತದೆ ಎಂದರು.
ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ
ಗ್ರಾಮೀಣ ಭಾರತ, ನಿಜವಾದ ಭಾರತ ಎನ್ನುತ್ತೇವೆ. ಗ್ರಾಮೀಣ ಶಿಕ್ಷಣವನ್ನು ಬಲಪಡಿಸುವುದು ಗ್ರಾಮೀಣ ಅಭಿವೃದ್ಧಿಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಅದರಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರಕಾರಗಳು ಸರಕಾರಿ ಶಾಲೆಗಳ ಮೂಲಕ ಗುಣಮಟ್ಟದ ಗ್ರಾಮೀಣ ಶಿಕ್ಷಣವನ್ನು ನೀಡಲು ಪ್ರಯತ್ನಗಳನ್ನು ಮಾಡುತ್ತಿವೆ. ನಾನಾ ಕಾರಣಗಳಿಂದ ಇಂದಿನ ದಿನಗಳಲ್ಲಿ ಸರಕಾರಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಶಿಕ್ಷಕರ ಕೊರತೆ, ಮೂಲಭೂತ ಸೌಕರ್ಯಗಳ ಕೊರತೆ, ಆಟದ ಮೈದಾನಗಳು, ಶೌಚಾಲಯಗಳು ಮತ್ತು ಇತರ ಸೌಲಭ್ಯ ಗಳ ಕೊರತೆಯಿಂದ ಕರ್ನಾಟಕ ರಾಜ್ಯದಲ್ಲಿ ಗ್ರಾಮೀಣ ಶಿಕ್ಷಣವನ್ನು ಬಲಪಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮದಡಿಯಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ.
ಗ್ರಾಮೀಣ ವಿದ್ಯಾರ್ಥಿಗಳಿಗೆ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿವೇತನ. ಶಿಕ್ಷಕರ ತೀರಾ ಕೊರತೆ ಇರುವ ಗ್ರಾಮೀಣ ಶಾಲೆಗಳಿಗೆ ಅಗತ್ಯವಿರುವ ಶಿಕ್ಷಕರ ನೇಮಕಾತಿ. ಶಾಲೆಗಳಿಗೆ ಬೆಂಚ್-ಡೆಸ್ಕ್ ಗಳ ಪೂರೈಕೆ. ಶಾಲಾ ಕಟ್ಟಡಗಳು, ಆಟದ ಮೈದಾನಗಳು, ಶೌಚಾಲಯಗಳ ನಿರ್ಮಾಣಕ್ಕೆ ಆರ್ಥಿಕ ನೆರವು.
ಪ್ರಸ್ತುತ ಸಾಲಿನಲ್ಲಿ ನಮ್ಮ ಸ್ವಸಹಾಯ ಗುಂಪುಗಳ ಸದಸ್ಯರ ಮಕ್ಕಳ ಪೈಕಿ ಸುಮಾರು 65,000 ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾಸಿಕ ವಿದ್ಯಾರ್ಥಿವೇತನವನ್ನು ನೀಡಲು ಬಜೆಟ್ ನಿಗದಿಪಡಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ಗ್ರಾಮೀಣ ಶಾಲೆಗಳಿಗೆ 1,028 ಶಿಕ್ಷಕರನ್ನು ನೇಮಿಸಲಾಗಿದೆ. ಇದುವರೆಗೆ 9.278 ಶಿಕ್ಷಕರನ್ನು ನೇಮಕ ಮಾಡಲಾಗಿದೆ.
* ಪ್ರಸ್ತುತ ಸಾಲಿನಲ್ಲಿ ಗ್ರಾಮೀಣ ಶಾಲೆಗಳಿಗೆ 4,000 ಬೆಂಚ್-ಡೆಸ್ಟ್‌ಗಳ ವಿತರಣೆಯನ್ನು ಮಾಡಲಾಗಿದೆ. ಇದುವರೆಗೆ 71,454 ಜೊತೆ ಬೆಂಚ್-ಡೆಸ್ಟ್‌ಗಳನ್ನು ವಿತರಿಸಲಾಗಿದೆ. ಪ್ರತೀ ಶಾಲೆಗೆ 8-10 ಜೊತೆ ಬೆಂಚ್ ಡೆಸ್ಟ್‌ಗಳನ್ನು ಒದಗಿಸಲಾ ಗುತ್ತಿದೆ. ಪೀಠೋಪಕರಣಗಳ ಕೊರತೆ ಇರುವ 6,821 ಪ್ರಾಥಮಿಕ ಶಾಲೆಗಳು, 1,019 ಅಂಗನವಾಡಿಗಳು/ಬಾಲವಾಡಿ ಗಳು, 4,982 ಆಟದ ಮೈದಾನಗಳು, 787 ಶೌಚಾಲಯಗಳು ಇತ್ಯಾದಿಗಳ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾ ಗಿದೆ. ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಮಕ್ಕಳ ಶಿಕ್ಷಣದ ಮಹತ್ವದ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತದೆ ಹಾಗೂ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಇರುವಂತೆ ನೋಡಿಕೊಳ್ಳಲಾ ಗುತ್ತದೆ ಎಂದರು.
ಸಮಾರಂಭದ ವೇದಿಕೆಯಲ್ಲಿ ಸಂಸದ ಬ್ರಿಜೇಶ್ ಚೌಟ, ಡಾ.ಸುದೇಶ ಧನಕರ್, ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಸುರೇಂದ್ರ ಕುಮಾರ್, ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ , ಹೇಮಾವತಿ ಹೆಗ್ಗಡೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶನ ಅನಿಲ್ ಕುಮಾರ್ ಎಸ್ ಎಸ್ ಮೊದಲಾದವರು ಉಪಸ್ಥಿತರಿದ್ದರು.