ಮಂಗಳೂರು: ಡ್ರಗ್ ಪೆಡ್ಲರ್ ನೈಜೀರಿಯಾ ಮೂಲದ ಮಹಿಳೆ ಸೆರೆ

Update: 2023-09-02 14:33 GMT

ಮಂಗಳೂರು, ಸೆ.2: ಡ್ರಗ್ಸ್ ಫ್ರಿ ಮಂಗಳೂರು ಮಾಡುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಮಂಗಳೂರು ಸಿಸಿಬಿ ಪೊಲೀಸರು ಮಾದಕ ವಸ್ತು ಎಂಡಿಎಂಎ ಮಾರಾಟ ಮತ್ತು ಸಾಗಾಟ ಜಾಲದ ಪ್ರಮುಖ ಡ್ರಗ್ಸ್ ಪೆಡ್ಲರ್ ನೈಜೀರಿಯಾ ದೇಶದ ಮಹಿಳೆಯನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ನೈಜೀರಿಯಾ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಅಡೆವೊಲೆ ಅಡೆಟುಟು ಆನು ಯಾನೆ ರೆಜಿನಾ ಜರಾ (33) ಎಂಬಾಕೆಯನ್ನು ವಶಕ್ಕೆ ಪಡೆದುಕೊಂಡು 400 ಗ್ರಾಂ ತೂಕದ 20 ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, ಐಫೋನ್, ನಗದು 2,910 ರೂ.ವನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಸೊತ್ತುಗಳ ಒಟ್ಟು ಮೌಲ್ಯ 20,52,910 ರೂ.ಆಗಬಹುದು ಎಂದು ಅಂದಾಜಿಸಲಾಗಿದೆ.

ನೈಜೀರಿಯಾ ದೇಶದ ಪ್ರಜೆಯಾಗಿರುವ ಈಕೆಯು ವ್ಯಾಸಂಗ ವೀಸಾದಡಿ ಭಾರತಕ್ಕೆ ಬಂದು ವಿದ್ಯಾಭ್ಯಾಸ ಮಾಡಿಕೊಂಡು ನಂತರ ಕೆಲಕಾಲ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದಳು. ಬಳಿಕ ಮಾದಕ ವಸ್ತುಗಳ ಮಾರಾಟ ದಂಧೆ ನಡೆಸುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈಕೆಯ ವಿರುದ್ಧ ಉಳ್ಳಾಲ, ಸೆನ್ ಪೊಲೀಸ್ ಠಾಣೆ, ಬಂದರು, ಕಂಕನಾಡಿ ನಗರ, ಕೊಣಾಜೆ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ 7 ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು ಈಕೆಯಿಂದಲೇ ಮಾದಕ ವಸ್ತು ವನ್ನು ಖರೀದಿಸಿದ್ದಾರೆ. ಈಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ತೆ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗಡೆ, ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಹೆಚ್ ಎಂ, ಎಸ್ಸೈಗಳಾದ ರಾಜೇಂದ್ರ ಬಿ, ಶರಣಪ್ಪ ಭಂಡಾರಿ, ಸುದೀಪ್ ಎಂ ವಿ, ನರೇಂದ್ರ ಮತ್ತಿತರರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News