ಮಂಗಳೂರು: ತುಳು ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಪ್ರಚೋದನಕಾರಿ ಹೇಳಿಕೆ; ವೀಡಿಯೋ ವೈರಲ್

Update: 2023-07-31 15:20 GMT

ದಯಾನಂದ ಕತ್ತಲ್‌ಸಾರ್

ಮಂಗಳೂರು: ತುಳು ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಅವರು ಈ ಹಿಂದೆ ಮಾಡಿದ್ದ ಭಾಷಣವೊಂದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುವ ದಯಾನಂದ ಕತ್ತಲ್‌ಸಾರ್ “ಕೆಂಬೂತದ ಸಂತತಿ ಅಳಿಯಬಾರದು. ಕೆಂಬೂತದ ಗೂಡಿನಲ್ಲಿ ಸಂಜೀವಿನಿಯ ಕಡ್ಡಿ ಇದೆ. ಆದ್ದರಿಂದ ಕೆಂಬೂತದ ಸಂತತಿ ಉಳಿಯಬೇಕು ಎಂದು ನಮ್ಮ ಹಿರಿಯರು ಹೇಳ್ತಾರೆ. ಆದರೆ ನಮ್ಮ ಈಗಿನ ಯುವಕರು ‘ನಮ್ಮ ಹಿರಿಯರಿಗೆ ಹುಚ್ಚು. ಸಂಜೀವಿನಿಯ ಕಡ್ಡಿ ಇದ್ದರೆ ಅದನ್ನು ತೆಗೆದುಕೊಂಡು ಹೋಗಿ ಸ್ಮಶಾನದಲ್ಲಿಟ್ಟರೆ ಎಲ್ಲಾ ಶವಗಳು ಎದ್ದೇಳುವುದಿಲ್ವಾ? ಚರ್ಚ್ ನ ಸ್ಮಶಾನದಲ್ಲೋ, ಮಸೀದಿಯ ಖಬರ್ ಸ್ಥಾನದಲ್ಲೋ ಹೊತ್ತಿಸಿದರೆ ಶವಗಳು ಪೆಟ್ಟಿಗೆಯಿಂದ ಎದ್ದು ಕುಣಿಯಬಹುದು’ ಎಂದು ಗೇಲಿ ಮಾಡ್ತಾರೆ.

ಕೆಂಬೂತದ ಸಂತತಿ ಉಳಿಯಬೇಕು ಏಕೆಂದರೆ, ಹೊತ್ತು ಮುಳುಗುವ ಹೊತ್ತಲ್ಲಿ ಮಂಡಲದ ಹಾವು ನೂರಕ್ಕಿಂತ ಹೆಚ್ಚು ಮರಿಗಳನ್ನಿಡುತ್ತದೆ. ಒಂದು ಮಂಡಲದ ಹಾವು ಬದುಕಿದರೆ ಮನುಷ್ಯನಿಗೆ ನಡೆದಾಡಲು ಸಾಧ್ಯವಿಲ್ಲ. ಇನ್ನು ನೂರಕ್ಕಿಂತ ಹೆಚ್ಚಿನ ಮಂಡಲದ ಹಾವುಗಳು ಬದುಕಿದರೆ ಮನುಷ್ಯ ಸಂತತಿಯೇ ನಶಿಸಬಹುದು.

ಮಂಡಲದ ಹಾವು ಮರಿಗಳನ್ನಿಡುವಾಗ ಚಕ್ಕುಲಿ ಕರಿದ ವಾಸನೆ ಬರುತ್ತದೆ. ಅದು ಓತಿಕ್ಯಾತಕ್ಕೆ ಗೊತ್ತಾಗುತ್ತೆ. ಆಗ ಓತಿಕ್ಯಾತ ಶಿಳ್ಳೆ ಹೊಡೆಯುತ್ತದೆ. ತಕ್ಷಣವೇ ಕೆಂಬೂತ ಬಂದು ಮಂಡಲದ ಹಾವಿನ ಮರಿಗಳನ್ನು ಕುಕ್ಕಿ ಕುಕ್ಕಿ ಕೊಲ್ಲುತ್ತದೆ. ಎಂತಹ ಪ್ರಕೃತಿಯ ಅದ್ಭುತ. ಇದು ಭಗವಂತನ ಲೀಲೆ. ಇದು ಶ್ರೀಕೃಷ್ಣನ ಲೀಲೆ.

ಆದ್ದರಿಂದ ಯಾವ ಮಂಡಲದ ಹಾವಿನ ಜಾತಿಯವರು ದನಕರುಗಳನ್ನು ಕಡಿದು ತಿನ್ನುತ್ತಾರೋ, ಮಹಿಳೆಯರ ಅತ್ಯಾಚಾರ ಮಾಡುತ್ತಾರೋ, ಲವ್ ಜಿಹಾದ್ ಮಾಡ್ತಾರೋ, ಆ ಮೂಲಕ ಸ್ವಂತ ಮಗಳು ತಾಯಿಗೇ ಚೂರಿ ಇರಿದು ಕೊಲ್ಲುವ ಪರಿಸ್ತಿತಿ ನಿರ್ಮಾಣವಾಗುತ್ತೋ, ಆ ಹೊತ್ತಿಗೆ ಅಂತಹ ಪಾಪಿಗಳಿಗೆ ಉತ್ತರ ಕೊಡಲು ಅಮರೇಂದ್ರ ಆಗಿರುವಂತಹ ಸುರೇಂದ್ರ, ನರೇಂದ್ರನಾಗಿ ಕೇಂದ್ರದಲ್ಲಿ ಕೂತು ಜಗತ್ತನ್ನು ಕಾಯುತ್ತಿದ್ದಾನೆ. ಆದ್ದರಿಂದ ನಾವು ನಮ್ಮೆರಡೂ ಕೈಗಳನ್ನು ಎತ್ತಿ ನಮಸ್ಕರಿಸುತ್ತಾ ನಿರಂತರವಾಗಿ ನಮೋ ನಮೋ ಎಂಬ ಮಂತ್ರೋಚ್ಛಾರಣೆ ಮಾಡುತ್ತಿರಬೇಕು. ಆಗ ರಾಮರಾಜ್ಯ ನಿರ್ಮಾಣವಾಗುತ್ತೆ. ನಮ್ಮನ್ನ ಹೆದರಿಸಲು ಡಬ್ಬಕ್ಕೆ ಬಡಿಯುತ್ತಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದಿಲ್ಲ ಎಂಬ ಆ ತರ್ಕವನ್ನು ತೆಗೆದು ಬಿಸಾಡಲಾಗಿದೆ. ನಮಗೆ ರಾಮ ಮಂದಿರ ನಿರ್ಮಾಣಕ್ಕೆ ನ್ಯಾಯ ದೊರಕಿದೆ.

ನಿಮಗೆ ಬಾಂಬ್ ಹಾಕುತ್ತೇವೆ ಎಂದು ಪಾಕಿಸ್ತಾನದವರು ಹೆದರಿಸುತ್ತಿದ್ದರು. ಆದರೆ ಅವರ ಬಳಿ ಕಲ್ಲು ಹುಡಿ ಮಾಡಲು ಬಳಸುವ ತೋಟೆ ಕೂಡಾ ಇಲ್ಲ. ಅಂತಹವರ ಬೆನ್ನಿಗೆ ಬಾರಿಸಿ ನಾಯಿಗಳನ್ನು ಓಡಿಸುವಂತೆ ಓಡಿಸಿ ಆಗಿದೆ. ಅವರ ಎದೆಯಲ್ಲಿ ಭಯ ನಿರ್ಮಾಣವಾಗಿದೆ. ಇನ್ನು ಪಾಪಿ ಚೀನಾಕ್ಕೆ ಒಂದು ಕಡೆಯಿಂದ ಭಗವಂತ ಹಾಗೂ ಇನ್ನೊಂದು ಕಡೆಯಿಂದ ನಮ್ಮ ದೇಶದ ಮೂಲಕ ತಕ್ಕ ಶಾಸ್ತಿ ಮಾಡಲಾಗಿದೆ. ಇದು ಧರ್ಮ ಪ್ರತಿಷ್ಠಾಪನೆ. ಇದು ಬದಲಾವಣೆಯ ಭಾರತ ಎಂಬುವುದನ್ನು ನೀವು ಅರ್ಥಮಾಡಿಕೊಳ್ಳಬೇಕು” ಎಂದು ಹೇಳುತ್ತಿರುವುದು ಕಾಣಬಹುದಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದಯಾನಂದ ಕತ್ತಲ್‌ಸಾರ್, “ಇದು ನಾನು ಬಹಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತಾಡಿರುವ ವೀಡಿಯೋ ಆಗಿದೆ. ನಾನು ಯಾವುದೇ ಸಮುದಾಯದ ದ್ವೇಷಿಯಲ್ಲ. ನಾನು ಕೇವಲ ಗೋವಿನ ಪ್ರೇಮದ ಬಗ್ಗೆ ಮತ್ತು ಗೋವನ್ನು ಕಡಿಯುವವರ ಬಗ್ಗೆ ಮಾತ್ರ ಮಾತುಗಳನ್ನು ಹೇಳಿದ್ದೆ. ಯಾವುದೇ ಧರ್ಮದವರೊಂದಿಗೆ ನನಗೆ ದ್ವೇಷವಿಲ್ಲ. ಯಾರೋ ದುರುದ್ದೇಶದಿಂದ ತುಂಬಾ ಹಳೆಯದಾದ ವೀಡಿಯೋವನ್ನು ಈಗ ವೈರಲ್ ಮಾಡುತ್ತಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News