ಮಂಗಳೂರು| ಸೆ.6ರಿಂದ ಅಂತರ್‌ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್

Update: 2024-09-05 12:25 GMT

ಮಂಗಳೂರು: ನಗರದ ಕುಲಶೇಖರದ ಕೋರ್ಡೆಲ್ ಚರ್ಚ್ ಮೈದಾನದಲ್ಲಿ ಸೆ. 6ರಿಂದ 8ರ ತನಕ ಸೆಲ್ಫ್ ಡಿಫೆನ್ಸ್ ‘ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮಂಗಳೂರು ಡೊಜೊ ಇದರ ಆಶ್ರಯದಲ್ಲಿ ‘ಶೌರ್ಯ ಅಂತರ್‌ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್ -2024 ಆಯೋಜಿಸಲಾಗಿದೆ.

ಕುಲಶೇಖರ ಚರ್ಚ್ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ವಿಧಾನ ಸಭಾಧ್ಯಕ್ಷ ಹಾಗೂ ಅಂತರ್‌ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್-2024ರ ಚೀಫ್-ಡಿ- ಮಿಸನ್ ಯು.ಟಿ.ಖಾದರ್ ಅವರು ಅಂತರ್‌ ರಾಷ್ಟ್ರೀಯ ಕರಾಟೆ ತಂಡಗಳು ಹಾಗೂ ದೇಶದ ಪ್ರಮುಖ ಕರಾಟೆ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದು 1,500 ಮಂದಿ ಕರಾಟೆ ಪಟುಗಳು ಈಗಾಗಲೇ ಹೆಸರು ನೋಂದಾಯಿಸಿಕೊಂಡಿದ್ದಾರೆ. 2,000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿವರಿಸಿದರು.

ಸಂಘಟನಾ ಸಮಿತಿಯ ಅಧ್ಯಕ್ಷ ಮತ್ತು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾವಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸುವರು. ಮಂಗಳೂರು ವಂ.ಡಾ. ಪೀಟರ್ ಪಾಲ್ ಸಲ್ದಾನ ಆಶೀರ್ವನ ನೀಡಲಿರುವರು ಎಂದು ವಿವರಿಸಿದರು.

ಕರಾಟೆ ಪಂದ್ಯಾವಳಿಯ ಆರಂಭಕ್ಕೂ ಮುನ್ನ ಕರಾವಳಿ ಕರ್ನಾಟಕದ ಬಗ್ಗೆ ವಿಶೇಷವಾಗಿ ಯಕ್ಷಗಾನ, ಜಾನಪದ ಗೀತೆ, ಪಿಳಿಕುಳ ನಿಸರ್ಗ ಧಾಮದ ವಿಶೇಷತೆ ಬಗ್ಗೆ 30 ನಿಮಿಷಗಳನ್ನು ದೃಶ್ಯ ಮಾಧ್ಯಮದ ಮೂಲಕ ಪ್ರದರ್ಶಿಸಲಾಗುವುದು. ಇದು ವಿದೇಶಿಯರಿಗೆ ಆಕರ್ಷಣೀಯವಾಗಲಿದೆ. ಅಲ್ಲದೆ ಸ್ಪರ್ಧೆಯ ಬಳಿಕ ಸಂಜೆ 6 ಗಂಟೆಗೆ ಸುಮಾರು 2 ಗಂಟೆಗಳ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಮೂಡಬಿದಿರೆಯ ಆಳ್ವಾಸ್‌ನ ಸಾಂಸ್ಕೃತಿಕ ತಂಡಗಳು ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯವನ್ನು ನಡೆಸಿಕೊಡಲಿದೆ. ಈ ಈ ಕಾರ್ಯಕ್ರಮಗಳಿಗೆ ಮೂಡಬಿದಿರೆಯ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವರವರು ಉಚಿತವಾಗಿ ಅಗತ್ಯದ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿದ್ದಾರೆ ಎಂದು ಖಾದರ್ ಹೇಳಿದರು.

ಚಾಂಪಿಯನ್‌ಶಿಪ್‌ನ ಸಂಚಾಲಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕರಾಟೆ ಸಂಘಟನೆಯ ಸ್ಥಾಪಕ ಅಧ್ಯಕ್ಷ ಕೆ. ತೇಜೊಮಯ ಅವರು ಸತತ ಮೂರು ವರ್ಷಗಳಿಂದ ವಿಶ್ವ ಚಾಂಪಿಯನ್ ಆಗಿರುವ ಜೋರ್ಡಾನ್‌ನ ಮುಹಮ್ಮದ್ ಅಲ್ ಝೂಫರ್ ಭಾಗವಹಿಸುವುದು ವಿಶೇಷವಾಗಿದೆ. ಈಗಲೂ ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಲು ಅವಕಾಶವಿರುವುದರಿಂದ ಕರಾಟೆ ಪಟುಗಳ ಸಂಖ್ಯೆಯು ಏರಿಕೆಯಾಗುವುದು ಸಂಭವವಿದೆ ಎಂದು ಮಾಹಿತಿ ನೀಡಿದರು.

ಏಳು ದೇಶಗಳಿಂದ ಕರಾಟೆ ಪಟುಗಳು ಈಗಾಗಲೇ ಹೆಸರು ನೋಂದಾಯಿಸಿಕೊಂಡಿದ್ದಾರೆ. ಸಿಲೋನ್, ಅಮೆರಿಕ, ಜಪಾನ್, ಮಲೇಷ್ಯ ಮತ್ತಿತರ ದೇಶಗಳ ಕರಾಟೆಪಟುಗಳು ಭಾಗವಹಿಸಲಿದ್ದಾರೆ.

ಭಾಗವಹಿಸುವ ಅಂತರ್‌ರಾಷ್ಟ್ರೀಯ ಕರಾಟೆ ತಂಡಗಳಿಗೆ ಉಚಿತವಾಗಿ ತಂಗಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಊಟ ಹಾಗೂ ಅಗತ್ಯವಿರುವ ಪ್ರಯಾಣಕ್ಕೂ ಉಚಿತ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರೀಯ ಕರಾಟೆ ಪಟುಗಳಿಗೆ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಿಂದ ಸ್ಪರ್ಧೆ ನಡೆಯುವ ತಾಣದ ತನಕ ಉಚಿತ ಪ್ರಯಾಣ ಮತ್ತು ಊಟ ತಿಂಡಿ ಗಳಿಗೆ ವ್ಯವಸ್ಥೆ ಕಲ್ಪಸಲಾಗಿದೆ. ರಾಷ್ಟ್ರೀಯ ಕರಾಟೆ ಪಟುಗಳು ತಂಗಲು ತಮ್ಮದೇ ವ್ಯವಸ್ಥೆ ಮಾಡಬೇಕಾಗಿದೆ. ಸ್ಪರ್ಧಾ ಕೂಟದ ಬಜೆಟ್ 3 ಕೋಟಿ ರೂ. ಆಗಿದ್ದು, ಸ್ಪೀಕರ್ ಯು.ಟಿ.ಖಾದರ್‌ರವರು ಅಂತರ್‌ರಾಷ್ಟ್ರೀಯ ಕರಾಟೆ ಚಾಂಪಿಯನ್‌ ಶಿಪ್ ಸಂಘಟಿಸಲು ರಾಜ್ಯ ಸರಕಾರದ ವತಿಯಿಂದ ದೊಡ್ಡ ಮೊತ್ತದ ಅನದಾನ ದೊರಕಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಸ್ಪರ್ಧೆಯಲ್ಲಿ ವಿಜೇತರಿಗೆ ಸರ್ಟಿಫಿಕೇಟ್ ಹಾಗೂ ಪದಕಗಳನ್ನು ನೀಡಲಾಗುವುದು. ಸೆ.6ರಂದು 6 ರಿಂದ 14 ವರ್ಷ ದೊಳಗಿನ ಎಲ್ಲಾ ವಿಧದ ಕಲರ್ ಬೆಲ್ಟ್‌ಗಳ ಕರಾಟೆ ಪಟುಗಳಿಗೆ, ಸೆ.7ರಂದು 14 ವರ್ಷ ಮೇಲ್ಪಟ್ಟವರಿಗೆ ಸ್ಪರ್ಧೆ ನಡೆಯ ಲಿದೆ. ಸೆ.8 ರಂದು ಕಪ್ಪುಬೆಲ್ಟ್ ಹೊಂದಿದವರಿಗೆ ಮಾತ್ರ ಹಣಾಹಣಿ ನಡೆಯಲಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕರಾಟೆ ಚಾಂಪಿಯನ್‌ಶಿಪ್ ಸಂಘಟನಾ ಸಮಿತಿಯ ಅಧ್ಯಕ್ಷ ಕಿಯೋಸಿ ಸುರೇಂದ್ರ ಬಿ, ಉಪಾಧ್ಯಕ್ಷ ಫಾ. ಕ್ಲಿಫರ್ಡ್ ಫೆರ್ನಾಂಡಿಸ್, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಧಿಕಾರಿ ರಾಯ್ ಕ್ಯಾಸ್ಟಲಿನೊ, ಸಲಹೆಗಾರ ರಾಜಗೋಪಾಲ್ ರೈ, ಡಾ. ರಾಜುಲ್.ಟಿ.ಜಿ, ತಾಂತ್ರಿಕ ನಿರ್ದೆಶಕ ಕಿಯೋಸಿ ಸುರೇಶ್ ಕುಮಾರ್ ಶೆಟ್ಟಿ, ಕರಾಟೆ ಶಿಕ್ಷಕ ಜನಾರ್ದನ ನಾಯಕ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News