ಮಂಗಳೂರು: ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಖಾಸಗಿ ಬಸ್ಸುಗಳದ್ದೇ ಸಮಸ್ಯೆ!

Update: 2023-09-02 10:40 GMT

ಮಂಗಳೂರು, ಸೆ.2: ಜಪ್ಪಿನಮೊಗರು ಜಂಕ್ಷನ್ ಬಳಿ ಈ ಹಿಂದೆ ಹೋಂಗಾರ್ಡ್ ಹಮೀದ್ ಎಂಬವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೋವಿಡ್ ಬಳಿಕ ಅವರು ಅಲ್ಲಿ ಕಾಣುತ್ತಿಲ್ಲ. ಅವರನ್ನು ಮತ್ತೆ ಅಲ್ಲಿ ನೇಮಕ ಮಾಡಬೇಕು.ಇದು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ಆಯೋಜಿಸಲಾದ ಫೋನ್ ಇನ್ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತರಿಗೆ ಜಪ್ಪಿನಮೊಗರು ನಿವಾಸಿ ಹರೀಶ್ ಎಂಬವರು ಮನವಿ ಮಾಡಿದ್ದಾರೆ.

ಈ ಮನವಿ ಆಲಿಸಿದ ಪೊಲೀಸ್ ಆಯುಕ್ತರು, ಸಾರ್ವಜನಿಕರಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರು ಗೊತ್ತಿಲ್ಲವಾದರೂ, ತಮ್ಮ ಆಸುಪಾಸಿನಲ್ಲೇ ಕಾರ್ಯ ನಿರ್ವಹಿಸುವ ಹೋಂಗಾರ್ಡ್ ಗಳ ಹೆಸರಾದರೂ ಗೊತ್ತಿದೆಯಲ್ಲಾ ಎಂದು ಸಂತೋಷ  ವ್ಯಕ್ತಪಡಿಸಿದರು.

ಒಂದು ಗಂಟೆ ಅವಧಿಯ ಫೋನ್ ಇನ್ ಕಾರ್ಯಕ್ರಮದಲ್ಲಿ 32 ಮಂದಿ ಕರೆ ಮಾಡಿದ್ದು, ಬಹುತೇಕವಾಗಿ ಸಿಟಿ ಬಸ್ಸುಗಳ ಫುಟ್ಬೋರ್ಡ್ ಸಮಸ್ಯೆ, ನಗರದ ಪ್ರಮುಖ ಸ್ಥಳಗಳಲ್ಲಿ ಅಡ್ಡಾದಿಟ್ಟಿ ವಾಹನಗಳ ಪಾರ್ಕಿಂಗ್, ಒಳ ರಸ್ತೆಗಳಲ್ಲಿ ಮಿತಿ ಮೀರಿದ ವೇಗದಲ್ಲಿ ವಾಹನ ಚಾಲನೆ ಸಂಬಂಧಿಸಿ ಕ್ರಮಕ್ಕೆ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಯಿತು.

ಅಕ್ರಮ ಫಂಡ್ ಮಾಡಿರುವೆ- ಈಗ ಊರೇ ಬಿಡಬೇಕಾಗಿದೆ!

ಮುಲ್ಕಿಯ ವ್ಯಕ್ತಿಯೊಬ್ಬರು ಕರೆ ಮಾಡಿ ನಾನು ಕಾನೂನುಬಾಹಿರ ಫಂಡ್ (ಚೀಟಿ ಹಣ) ಮಾಡುತ್ತಿದ್ದೇನೆ. ಕೆಲವರು ಹಣ ಸಮರ್ಪಕವಾಗಿ ನೀಡದ ಕಾರಣ ನಾನು ಇತರರಿಗೆ ಪಾವತಿಸಲು ಸಾಧ್ಯವಾಗದೆ ಇದೀಗ ನನಗೆ ಕೆಲವರು ಬೆದರಿಕೆ ಹಾಕುತ್ತಿದ್ದಾರೆ. ನಾನು ಊರು ಬಿಟ್ಟು ಹೋಗಬೇಕಾಗಿದೆ ಎಂದು ತಮ್ಮ ಸಮಸ್ಯೆ ಹೇಳಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, ನೀವು ಆ ರೀತಿ ಮಾಡಬೇಡಿ. ಕಚೇರಿಗೆ ಬಂದು ನಿಮ್ಮ ವ್ಯವಹಾರದ ಸಂಪೂರ್ಣ ಮಾಹಿತಿ ನೀಡಿ. ಯಾವ ರೀತಿಯಲ್ಲಿ ಕ್ರಮ ವಹಿಸಬಹುದು ನೋಡೋಣ ಎಂದರು.

ಬಸ್ ಮಾಲಕರಿಂದಲೇ ಸುರಕ್ಷತೆಯ ಖಾತರಿ

ಬಸ್ ನ ಫುಟ್ಪೋರ್ಡ್ ನಿಂದ ಬಿದ್ದು ನಿರ್ವಾಹಕರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆಯ ಬಳಿಕ ಈಗಾಗಲೇ ಬಸ್ ಸಿಬ್ಬಂದಿ ಹಾಗೂ ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಬಸ್ ಮಾಲಕರ ಜತೆ ಸಭೆ ನಡೆಸಲಾಗಿದೆ.

ಹೊಸ ಬಸ್ಸುಗಳಿಗೆ ಡೋರ್ ಅಳವಡಿಕೆ ಕಡ್ಡಾಯ ಪಡಿಸಲಾಗಿದೆ. ಹಳೆ ಬಸ್ಸುಗಳಲ್ಲಿ ಫುಟ್ಬೋರ್ಡ್ ನಲ್ಲಿ ಯಾರೂ ಇಲ್ಲದಿರುವುದು ಖಾತರಿಪಡಿಸಿದ ಬಳಿಕವೇ ಚಾಲಕ ವಾಹನವನ್ನು ಚಲಾಯಿಸಬೇಕೆಂಬ ನಿಟ್ಟಿನಲ್ಲಿಯೂ ಸೂಚನೆ ನೀಡಲಾಗಿದೆ.

ಅದಲ್ಲದೆ ಪ್ರಮುಖ ಜಂಕ್ಷನ್ ಗಳಲ್ಲಿ ಪೊಲೀಸರ ಜತೆ ಬಸ್ ಮಾಲಕರನ್ನು ನಿಲ್ಲಿಸಿ ಬಸ್ ಗಳಲ್ಲಿ ಕೈಗೊಳ್ಳಲಾಗುತ್ತಿರುವ ಸುರಕ್ಷತೆಯನ್ನು ಪರಿಶೀಲಿಸುವ ಕ್ರಮ ವಹಿಸಲಾಗುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಅವರು ತಿಳಿಸಿದರು.

ಇತರ ಪ್ರಮುಖ ಬೇಡಿಕೆ, ಆಗ್ರಹಗಳು:

*ಪಂಪ್ವೆಲ್ ನಿಂದ ಪಡೀಲ್ ರಸ್ತೆ ಬದಿ ವಾರಿಸುದಾರರಿಲ್ಲದ ವಾಹನಗಳನ್ನು ನಿಲುಗಡೆ ಮಾಡಲಾಗುತ್ತದೆ. ಅದನ್ನು ತೆರವುಗೊಳಿಸಬೇಕು.

*ಕಳೆದ ನಾಲ್ಕೈದು ದಿನಗಳಿಂದ ಸರ್ವರ್ ಡೌನ್ ನಿಂದಾಗಿ ವಾಹನಗಳಿಗೆ ಮಾಲಿನ್ಯ ಸರ್ಟಿಫಿಕೇಟ್ ದೊರೆಯುತ್ತಿಲ್ಲ.

* ಹಳೆಯಂಗಡಿ ಮುಲ್ಕಿ ಜಂಕ್ಷನ್ ಬಳಿ ಸಿಗ್ನಲ್ ಅಳವಡಿಸಬೇಕು.

* ನಗರದ ಪ್ರಮುಖ ಸ್ಥಳಗಳಲ್ಲಿ ಫುಟ್ಪಾತ್ ಗಳಲ್ಲಿ ಅಂಗಡಿಯವರು ನೋ ಪಾರ್ಕಿಂಗ್ ಬೋರ್ಡ್ ಹಾಕುತ್ತಾರೆ. ಪೊಲೀಸರು ಒಂದೊಮ್ಮೆ ಕ್ರಮ ಕೈಗೊಂಡರೂ ಮತ್ತದೇ ಮುಂದುವರಿಯುತ್ತಿದೆ.

*ತೊಕ್ಕೊಟ್ಟು ಕೊಣಾಜೆ ರಸ್ತೆಯ ಪಿಲಾರ್ ರಸ್ತೆಯಲ್ಲಿ ವಾಹನಗಳು ಅತಿ ವೇಗದಿಂದ ಸಂಚರಿಸುತ್ತಿದ್ದು, ಈ ಬಗ್ಗೆ ಕ್ರಮ ಆಗಬೇಕು.

* ಹಿರಿಯ ನಾಗರಿಕರಿಗೆ ಬಸ್ಸುಗಳಲ್ಲಿ ಆಸನವೇ ಸಿಗುವುದಿಲ್ಲ. ನಿರ್ವಾಹಕರಲ್ಲಿ ಹೇಳಿದರೆ ಕ್ಯಾರೇ ಮಾಡುವುದಿಲ್ಲ. ಬಸ್ಸುಗಳ ಫುಟ್ಬೋರ್ಡ್ ಹಿರಿಯ ನಾಗರಿಕರಿಗೆ ಬಸ್ ಏರಲು ಸಾಧ್ಯವಾಗದಂತಿವೆ.

* ಕೆಲ ಆಟೋದವರು ಆ್ಯಂಬುಲೆನ್ಸ್ ಮಾದರಿಯ ಸೈರನ್ ಹಾಕಿಕೊಂಡು ತಿರುಗುತ್ತಿದ್ದಾರೆ.

*ವೆಲೆನ್ಸಿಯಾ ಬಳಿ ಫುಟ್ಪಾತ್ ನ ಉದ್ದಕ್ಕೂ ವಾಹನ ನಿಲುಗಡೆ, ಆ್ಯಂಬುಲೆನ್ಸ್ ಗಳ ಚಾಲಕರು ವಾಹನಗಳ ಬಾಗಿಲು ತೆರೆದಿಡುವುದರಿಂದ ಫುಟ್ಪಾತ್ನಲ್ಲಿ ನಡೆದಾಡಲು ಕಷ್ಟಸಾಧ್ಯವಾಗುತ್ತಿದೆ.

* ಅಡ್ಡೂರು, ಗುರುಪುರ, ಮರವೂರು ಬಳಿ ಅಕ್ರಮ ಮರಳುಗಾರಿಕೆ ರಾತ್ರಿಯಿಡೀ ನಡೆಯುತ್ತಿದೆ.

* ಸೆಂಟ್ರಲ್ ರೈಲ್ವೇ ನಿಲ್ದಾಣ ಬಳಿಯ ಮುತ್ತಪ್ಪ ದೇವಸ್ಥಾನ ಬಳಿ ಸಿಸಿ ಕ್ಯಾಮರಾ ಅಳವಡಿಸಬೇಕು.

ಡಿಸಿಪಿ ಅಂಶು ಕುಮಾರ್, ಎಸಿಪಿ ಗೀತಾ ಕುಲಕರ್ಣಿ ಈ ಸಂದರ್ಭ ಉಪಸ್ಥಿತರಿದ್ದರು.

ಡ್ರಗ್ಸ್ ಮುಕ್ತ ಅಭಿಯಾನಕ್ಕೆ ಬೆಂಬಲ; ಸಿಗರೇಟ್ ಮಾರಾಟಕ್ಕೆ ದಂಡ ಯಾಕೆ?

ಮಂಗಳೂರು ನಗರದಲ್ಲಿ ಡ್ರಗ್ಸ್ ಮುಕ್ತ ಅಭಿಯಾನದ ನಿಟ್ಟಿನಲ್ಲಿ ಪೊಲೀಸರು ಮಾಡುತ್ತಿರುವ ಕಾರ್ಯಾಚರಣೆ ಉತ್ತಮವಾಗಿದೆ. ನಮ್ಮದು ಸಣ್ಣ ಗೂಡಂಗಡಿ. ಅಲ್ಲಿ ಪೊಲೀಸರು ಸಿಗರೇಟ್ ಮಾರಾಟಕ್ಕೆ ಸಂಬಂಧಿಸಿ ಪದೇ ಪದೇ ದಾಳಿ ಮಾಡಿ ದಂಡ ಹಾಕುತ್ತಾರೆ. ಸಿಗರೇಟ್ ವಶಪಡಿಸುತ್ತಿದ್ದಾರೆ. ಕಂಪನಿಯವರೇ ಸಿಗರೇಟ್ ಮಾರಾಟಕ್ಕೆ ಅವಕಾಶ ನೀಡಿದ್ದಾರೆ ಎಂದು ಉರ್ವಾ ಮತ್ತು ಆನೆಗುಂಡಿಯ ಇಬ್ಬರು ಸಣ್ಣ ವ್ಯಾಪಾರಿಗಳು ಅಹವಾಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್, ನಿಮಗೆ ತೊಂದರೆ ಮಾಡಬೇಕೆಂಬ ಇರಾದೆ ಪೊಲೀಸರಿಗಿಲ್ಲ. ಆದರೆ ಕಾನೂನು ಪ್ರಕಾರ ಶಾಲಾ ಕಾಲೇಜುಗಳ 100 ಮೀಟರ್ ಸುತ್ತಮುತ್ತ ಇಂತಹ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಜತೆಗೆ ಬಿಡಿಯಾಗಿ(ಲೂಸ್) ಆಗಿ ಸಿಗರೇಟ್ ಮಾಡಲು ಅವಕಾಶವಿಲ್ಲ. ಕಂಪನಿ ಮಾತು ಕೇಳಿ ಬಿಡಿಯಾಗಿ ಮಾರಾಟ ಮಾಡುವಂತಿಲ್ಲ ಎಂದು ಮೃದುವಾಗಿ ಎಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News