ಮಂಗಳೂರು: ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣ; ನಾಲ್ಕು ಮಂದಿಗೆ ಜೈಲುಶಿಕ್ಷೆ, ದಂಡ

Update: 2023-08-20 13:14 GMT

ಮಂಗಳೂರು, ಆ.20: ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಸಂಚಾರ ಪಶ್ಚಿಮ ಮತ್ತು ಸಂಚಾರ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಿಗೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿವೆ.

*ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ 2019ರ ಫೆ.13ರಂದು ದಾಖಲಾದ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿಜಯ್ ಕುಮಾರ್ ಜಾದವ್‌ಗೆ 6 ತಿಂಗಳ ಜೈಲು ಶಿಕ್ಷೆ ಮತ್ತು 2 ಸಾವಿರ ರೂ.ದಂಡ ವಿಧಿಸಿ ಮಂಗಳೂರಿನ 3ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ತಾರಾ ಕೆ.ಸಿ. ಆದೇಶಿಸಿದ್ದಾರೆ.

*ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ 2014ರ ಅಕ್ಟೋಬರ್ 19ರಂದು ದಾಖಲಾದ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಿ.ಪಿ. ಸಾಜಿಗೆ 2 ವರ್ಷ ಸಾದಾ ಜೈಲು ಶಿಕ್ಷೆ ಮತ್ತು 14,500 ರೂ. ದಂಡ ವಿಧಿಸಿ ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಅಂಜಲಿ ಶರ್ಮಾ ಆದೇಶಿಸಿದ್ದಾರೆ.

ದಂಡ ತೆರಲು ತಪ್ಪಿದರೆ 4 ತಿಂಗಳು 10 ದಿನ ಹೆಚ್ಚುವರಿ ಶಿಕ್ಷೆ ವಿಧಿಸಲು ಆದೇಶಿಸಿದ್ದಾರೆ. ಈ ಪ್ರಕರಣದ ಇನ್ನೋರ್ವ ಆರೋಪಿ ವೀರನ ಕುಟ್ಟಿ ವಿಚಾರಣೆಯ ಅವಧಿಯಲ್ಲಿ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

*ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ 2021ರ ನವೆಂಬರ್ 11ರಂದು ದಾಖಲಾದ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಮಸೂತಿಗೆ 6 ತಿಂಗಳ ಕಾಲ ಸಾದಾ ಜೈಲು ಶಿಕ್ಷೆಯ ಜೊತೆಗೆ 6,000 ರೂ. ದಂಡ ವಿಧಿಸಿ ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಅಂಜಲಿ ಶರ್ಮ ಆದೇಶಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ 3 ತಿಂಗಳು 10 ದಿನಗಳ ಕಾಲ ಸಾದಾ ಶಿಕ್ಷೆ ಅನುಭವಿಸಲು ಆದೇಶದಲ್ಲಿ ತಿಳಿಸಿದ್ದಾರೆ.

*ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ 2020ರ ಜೂನ್ 14ರಂದು ದಾಖಲಾದ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸತೀಶ್ ಎಸ್.ಗೆ 6 ತಿಂಗಳ ಕಾಲ ಸಾದಾ ಜೈಲು ಶಿಕ್ಷೆಯ ಜೊತೆಗೆ 9,500 ರೂ. ದಂಡ ವಿಧಿಸಿ ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಅಂಜಲಿ ಶರ್ಮಾ ತೀರ್ಪು ನೀಡಿದ್ದಾರೆ. ದಂಡ ತೆರಲು ತಪ್ಪಿದಲ್ಲಿ 3 ತಿಂಗಳು 20 ದಿನಗಳ ಕಾಲ ಸಾದಾ ಶಿಕ್ಷೆ ಅನುಭವಿಸಲು ಆದೇಶದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News