ಮಂಗಳೂರು: ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಸೆರೆ

Update: 2023-08-19 14:51 GMT

ಮಂಗಳೂರು, ಆ.19: ನಗರ ಹಾಗೂ ಕೇರಳದ ವಿವಿಧೆಡೆ ಕಾರಿನಲ್ಲಿ ಮಾದಕ ವಸ್ತು ಎಂಡಿಎಂಎಯನ್ನಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪಿ ವಿಟ್ಲದ ವಸತಿ ಸಮುಚ್ಛಯದಲ್ಲಿ ವಾಸವಾಗಿದ್ದ ಹಸನ್ ಸಾದಿಕ್ ಯಾನೆ ಬ್ಲೇಡ್ ಸಾದಿಕ್ (35) ಎಂಬಾತನನ್ನು ಮಂಗಳೂರು ಅಪರಾಧ ಪತ್ತೆ ದಳ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದ 50 ಗ್ರಾಂ ತೂಕದ 2,50,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, ಕಾರು, ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪನ ಸಹಿತ 3,65,500 ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮಾದಕ ವಸ್ತು ಮಾರಾಟ ಜಾಲದ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಹಸನ್ ಸಾದಿಕ್‌ ವಿರುದ್ಧ ಈ ಹಿಂದೆ ವಿಟ್ಲ ಪೊಲೀಸ್ ಠಾಣೆಯಲ್ಲಿ 8 ಹಲ್ಲೆ, ಬೆದರಿಕೆ ಪ್ರಕರಣಗಳು, 4 ಕೊಲೆಯತ್ನ ಪ್ರಕರಣಗಳು, ಪುತ್ತೂರು ನಗರ ಠಾಣೆಯಲ್ಲಿ 2 ಕೊಲೆಯತ್ನ ಪ್ರಕರಣಗಳು, ಉಪ್ಪಿನಂಗಡಿ ಠಾಣೆಯಲ್ಲಿ ಮಾನಭಂಗ ಹಾಗೂ ಕಿಡ್ನಾಪ್ ಪ್ರಕರಣಗಳು, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಹಲ್ಲೆ ಪ್ರಕರಣ, ಕಾವೂರು ಪೊಲೀಸ್ ಠಾಣೆಯಲ್ಲಿ ದರೋಡೆಗೆ ಯತ್ನ ಪ್ರಕರಣ, ಬೆಂಗಳೂರು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ ಹೀಗೆ 17 ಪ್ರಕರಣಗಳು ದಾಖಲಾಗಿವೆ. ಈತನು ಸುಮಾರು 6 ತಿಂಗಳಿನಿಂದ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೆ ತಲೆಮರೆಸಿಕೊಂಡಿದ್ದು, ಈತನ ವಿರುದ್ಧ ನ್ಯಾಯಾಲಯವು ವಾರಂಟ್ ಹೊರಡಿಸಿತ್ತು.

ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗಡೆ, ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಹೆಚ್.ಎಂ, ಎಸ್ಸೈ ಗಳಾದ ರಾಜೇಂದ್ರ ಬಿ, ನರೇಂದ್ರ, ಶರಣಪ್ಪ ಭಂಡಾರಿ, ಸುದೀಪ್ ಎಂ.ವಿ. ಹಾಗೂ ಸಿಸಿಬಿ ಸಿಬ್ಬಂದಿ ವರ್ಗವು ಪಾಲ್ಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News