ಮಂಗಳೂರು: ವಿಶ್ವ ಸಾಕ್ಷರತಾ ದಿನಾಚರಣೆ

Update: 2023-09-08 15:09 GMT

ಮಂಗಳೂರು : ದ.ಕ.ಜಿಲ್ಲಾಡಳಿತ, ಜಿಪಂ, ಬೆಂಗಳೂರಿನ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಜಿಲ್ಲಾ ಸಾಕ್ಷರತಾ ಸಮಿತಿ, ಜಿಲ್ಲಾ ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪನಿರ್ದೇಶಕರು (ಅಭಿವೃದ್ಧಿ) ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಮಂಗಳೂರು ತಾಪಂ, ಜನ ಶಿಕ್ಷಣ ಟ್ರಸ್ಟ್ ಹಾಗೂ ನವ ಸಾಕ್ಷರರ ಗ್ರಾಮ ವಿಕಾಸ ಕೇಂದ್ರಗಳ ಸಹಭಾಗಿತ್ವದಲ್ಲಿ ‘ಎಲ್ಲರಿಗೂ ಶಿಕ್ಷಣ ಎಂದೆಂದಿಗೂ ಶಿಕ್ಷಣ’ ಘೋಷಣೆಯೊಂದಿಗೆ ಶುಕ್ರವಾರ ನಗರದ ಉರ್ವಸ್ಟೋರ್‌ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ವಿಶ್ವ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಶಾಸಕ ವೇದವ್ಯಾಸ ಕಾಮತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನಶಿಕ್ಷಣ ಟ್ರಸ್ಟ್ ಅಧ್ಯಕ್ಷ ಶೀನ ಶೆಟ್ಟಿ ಮಾತನಾಡಿ ಹೆಚ್ಚಿನ ಜನರು ಅಕ್ಷರ ಅಭ್ಯಾಸ ಮಾಡಲು ಉತ್ಸುಕರಾಗಿ ಅಕ್ಷರ ಜ್ಞಾನವನ್ನು ಹೊಂದಿದ್ದಾರೆ. ಜಿಲ್ಲೆಯ ಪ್ರತಿಯೊಬ್ಬರಿಗೂ ಅಕ್ಷರ ಅಭ್ಯಾಸ ಮಾಡಿಸಿ ಸಾಕ್ಷರತಾ ಜಿಲ್ಲೆಯನ್ನಾಗಿಸಬೇಕು ಎಂದರು.

ಈ ಸಂದರ್ಭ ಮಾತನಾಡಿದ ನವಸಾಕ್ಷರ ನಾರಾಯಣ ಗೋಳಿಕಟ್ಟೆ 1990ರಲ್ಲಿ ನಾನು ಸಾಕ್ಷರತೆಗೆ ಸೇರಿದೆ. ಗೋಳಿಕಟ್ಟೆ ಸಾಕ್ಷರತೆಗೆ ಕೇಂದ್ರವಾಗಿತ್ತು. ಕುಲಶೇಖರದಲ್ಲಿ 3 ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆದು ಉತ್ತೀರ್ಣನಾಗಿದ್ದೇನೆ. ಸಾಕ್ಷರತೆ ಪಡೆದ ನಂತರ ಅನೇಕ ಬೀದಿ ನಾಟಕಗಳಲ್ಲಿ ಭಾಗವಹಿಸಿದ್ದೇನೆ ಈಗ ಸುಬ್ರಹ್ಮಣ್ಯದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ಪಾತುಂಞಿ ಎಂಬವರು ಮಾತನಾಡಿ ನಾಲ್ಕನೇ ತರಗತಿ ತನಕ ಕಲಿತು ನಾಲ್ಕು ಗೋಡೆಯ ಮಧ್ಯೆ ಜೀವನ ಸಾಗಿಸುತ್ತಿದ್ದೆ. ಬಳಿಕ ಅಕ್ಷರ ಅಭ್ಯಾಸ ಮಾಡಿ ಈಗ ಪಿನೈಲ್, ಸೋಪು, ಸರ್ಫ್ ಮೊದಲಾದವುಗಳನ್ನು ತಯಾರಿಸಿ ಸ್ವಾವಲಂಬಿ ಜೀವನ ಮಾಡುತ್ತಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ವಯಸ್ಕರ ಶಿಕ್ಷಣ ಅಧಿಕಾರಿ ಲೋಕೇಶ್, ದಕ್ಷಿಣ ವಲಯದ ಶಿಕ್ಷಣ ಅಧಿಕಾರಿ ಈಶ್ವರ್, ಬಿರ್‌ಸಿ ಸಂಯೋ ಜಕ ಪ್ರಶಾಂತ್, ಉತ್ತರ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಕ ಭಾರತ್, ತಾಪಂ ಸಹಾಯಕ ನಿರ್ದೇಶಕ ಅಬೂಬ ಕರ್,ಜಿಲ್ಲಾ ಸರ್ವ ಶಿಕ್ಷಣ ಅಭಿಯಾನದ ಅಧಿಕಾರಿ ಸುಮಂಗಲಾ ಮತ್ತಿತರರು ಉಪಸ್ಥಿತರಿದ್ದರು.

ನವ ಸಾಕ್ಷರರಿಗೆ ಅಭಿನಂದನಾ ಪ್ರಮಾಣ ಪತ್ರವನ್ನು ನೀಡಲಾಯಿತು. ಡಯೆಟ್ ಪ್ರಾಂಶುಪಾಲೆ ರಾಜಲಕ್ಷ್ಮಿ ಸ್ವಾಗತಿಸಿ ದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉತ್ತರ ವಲಯದ ಸಮನ್ವಯ ಶಿಕ್ಷಣಾಧಿಕಾರಿ ಉಸ್ಮಾನ್ ಜಿ. ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News